ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಹಿಳಾ ಸಬಲೀಕರಣ ಮಾಡದ ಕಾನೂನು

Vishwanath S
Updated On : 8 Mar 2014, 12:55 pm

ಕ.ಪ್ರ.ವಾರ್ತೆ ,  ಮೈಸೂರು ,  ಮಾ. 7
ಸಮಾಜದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಹಾಗೂ ಅವರ ಸಬಲೀಕರಣಕ್ಕಾಗಿ ಹಲವಾರು ಕಾನೂನುಗಳನ್ನು ರೂಪಿಸಿದ್ದರೂ ಅವುಗಳಿಂದ ಅಷ್ಟೇನು ಪ್ರಯೋಜನವಾಗುತ್ತಿಲ್ಲ ಎಂದು ಮೈಸೂರು ವಿವಿ ಕುಲಸಚಿವ ಪ್ರೊ.ಸಿ. ಬಸವರಾಜು ವಿಷಾದಿಸಿದರು.
ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ವತಿಯಿಂದ ಶುಕ್ರವಾರ ಸಂಸ್ಥೆಯ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮಹಿಳಾ ದೌರ್ಜನ್ಯ- ಲಿಂಗತ್ವ ಕಾನೂನು ಪ್ರತಿರೋಧನ ನೆಲೆಗಳು ಕುರಿತ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸನಸಭೆಗಳಲ್ಲಿ ಮಹಿಳೆಯರ ಕುರಿತ ಹಲವು ರೀತಿಯ ಚಿಂತನೆ ನಡೆಸಿ, ಅವರ ನೆರವಿಗಾಗಿ ಹಲವಾರು ಕಾನೂನುಗಳನ್ನು ರೂಪಿಸಲಾಗಿದೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಲ್ಲಿ ಸಬಲೀಕರಣ ಖಂಡಿತ ಸಾಧ್ಯವಾಗುತ್ತದೆ. ಆದರೆ, ಅನುಷ್ಠಾನಗೊಳಿಸುವ ಮನಸ್ಸುಗಳ ಕೊರತೆಯಿಂದ ಸಬಲೀಕರಣವಾಗುತ್ತಿಲ್ಲ. ಅಂಬೇಡ್ಕರ್ ಅವರಂತಹ ಹೋರಾಟಗಾರರ ಅವಶ್ಯಕತೆ ಇಂದಿನ ಸಮಾಜಕ್ಕಿದೆ ಎಂದರು.
ಯಾವುದೇ ಕ್ಷೇತ್ರದಲ್ಲಿ ಮಹಿಳೆಯರಿಗೆ ನೀಡಬೇಕಾದ ಸ್ಥಾನಮಾನ ಕೊಡದಿದ್ದರೆ ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಸಮಾಜದಲ್ಲಿ ಮನುಷ್ಯರನ್ನು ಮನುಷ್ಯರಂತೆ ನೋಡಬೇಕು. ಪ್ರತಿಯೊಬ್ಬರಲ್ಲಿ ಪ್ರಜ್ಞಾವಂತಿಕೆ ಬೆಳೆದು ಸಮಾನತೆಗಾಗಿ ಸ್ಪಂದಿಸಬೇಕು. ಈ ಬಗ್ಗೆ ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೂ ಮಹಿಳಾ ಹಕ್ಕುಗಳ ಕಡೆಗಣನೆ ನಿರಾತಂಕವಾಗಿ ನಡೆಯುತ್ತಿರುವುದು ದುರಂತವೇ ಎಂದು ಅವರು ಹೇಳಿದರು.
ಪುರುಷ ಸಮಾಜವೇ ಮೇಲುಗೈ: ಆರ್ಯರ ಸಮಾಜದಿಂದಲೂ ಪುರುಷ ಪ್ರಧಾನ ಸಮಾಜವೇ ಮೇಲುಗೈ ಸಾಧಿಸಿಕೊಂಡು ಬರುತ್ತಿದೆ. ಮನೆಯ ಜವಾಬ್ದಾರಿಯನ್ನು ಗಂಡನೇ ನಿರ್ವಹಿಸುವುದನ್ನು ನಾವು ಇಂದಿಗೂ ನೋಡುತ್ತಿದ್ದೇವೆ. ಲಿಂಗ ಆಧಾರದ ಮೇಲೆ ಮಹಿಳೆಯರನ್ನು ತಾರತಮ್ಯದಿಂದ ನೋಡಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆಯಂತಹ ಘಟನೆಗಳು ಈ ಕಾಲದಲ್ಲೂ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ. ಹಾಗಾಗಿ ಹಿಂದೆ ಸತಿ ಸಹಗಮನ ಪದ್ಧತಿ, ವಿಧವಾ ಪುನರ್ ವಿವಾಹಕ್ಕೆ ನಿಷೇಧ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದ ಮಹಾನ್ ದಾರ್ಶನಿಕರನ್ನು ಸ್ಮರಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ವಿಮೋಚನಾ ಸಂಸ್ಥೆಯ ಡಾ.ಕಾರಿನ್ ಕುಮಾರ್ ಮಾತನಾಡಿ, ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಅವಕಾಶ ವಂಚಿತರಾಗುತ್ತಿದ್ದಾರೆ. ಅವರಿಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಚೌಕಟ್ಟು ನಿರ್ಮಿಸಿ ಕೆಲವೇ ಕೆಲವು ವಿಭಾಗಗಳಿಗೆ ಸೀಮಿತಗೊಳಿಸಿದ್ದೇವೆ. ಮಹಿಳೆಯರ ಹೋರಾಟಕ್ಕೆ ಸರ್ಕಾರೇತರ ಸಂಸ್ಥೆಗಳ ಬೆಂಬಲದ ಅವಶ್ಯಕತೆ ಇದೆ. ಪ್ರತಿಯೊಬ್ಬರು ಇದರ ಬಗ್ಗೆ ದನಿ ಎತ್ತಬೇಕು ಎಂದು ಕರೆ ನೀಡಿದರು.
ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಅವರು ಇನ್ನು ಸಾಕು ಎಂಬ ಕೃತಿ ಬಿಡುಗಡೆಗೊಳಿಸಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎನ್.ಎಂ. ತಳವಾರ್, ಡಾ.ಜಯಲಕ್ಷ್ಮಿ ಸೀತಾಪುರ, ಡಾ.ಪ್ರೀತಿ ಶ್ರೀಮಂದರ್‌ಕುಮಾರ್, ನ್ಯಾಯವಾದಿ ಬಾನು ಮುಷ್ತಾಕ್, ಶಕುನ್, ಮಲ್ಲಿಗೆ, ಬಾಬುರಾಜ್, ಕೆ. ನಾರಾಯಣ ಸ್ವಾಮಿ ಇದ್ದರು.
ನಂತರ ನಡೆದ ಗೋಷ್ಠಿಗಳಲ್ಲಿ ಅತ್ಯಾಚಾರ ಪರೀಕ್ಷಾ ವಿಧಾನ ಮತ್ತು ಕಾನೂನು ವಿಷಯದ ಬಗ್ಗೆ ಡಾ.ಎಚ್.ಎಸ್. ಅನುಪಮಾ ಮಾತನಾಡಿದರೆ, ಮೈತ್ರೇಯಿ, ನವೀನ್ ಸೂರಂಜೆ, ಡಾ. ರೇಣುಕಾ ಹೇಳವರ ಪ್ರತಿಕ್ರಿಯೆ ನೀಡಿದರು. ಲೈಂಗಿಕತೆ ಮತ್ತು ಹಿಂಸೆ- ಭಿನ್ನ ಆಯಾಮ ಕುರಿತು ಅಕೈ ಪದ್ಮಶಾಲಿ ವಿಷಯ ಮಂಡಿಸಿದರೆ, ಶ್ರೀಕಾಂತ್ ಕಣ್ಣನ್, ಅರವಿಂದ ನಾರಾಯಣ, ಡಾ. ವಸುಂದರಾ ಭೂಪತಿ ಪ್ರತಿಕ್ರಿಯೆ ನೀಡಿದರು.
ಇದಕ್ಕೂ ಮುನ್ನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮಹಿಳಾಪರ ಜನಪದ ಗೀತಗಾಯನ ಹಾಗೂ ಕಿರು ರೂಪಕವನ್ನು ಪ್ರದರ್ಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement