ಮಾರಕ ರೋಗಕ್ಕೆ ದೇಶಿ ವೈದ್ಯ ಪದ್ಧತಿ ಪರಿಹಾರ
ಮೈಸೂರು: ಮಾರಕ ರೋಗಗಳ ನಿರ್ಮೂಲನೆಗೆ ಯುವ ವೈದ್ಯರು ದೇಶಿಯ ವೈದ್ಯೋಪಚಾರದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಹೇಳಿದರು.
ಜಗನ್ಮೋಹನ ಅರಮನೆಯಲ್ಲಿ ಶುಕ್ರವಾರ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಿರಿಯ ವೈದ್ಯರ ಸಂಘ 2014 ಆಯೋಜಿಸಿದ್ದ ವಿಶಿಖಾನುಪ್ರವೇಶಮ್ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ದೇಶಿಯ ವೈದ್ಯಕೀಯ ಪದ್ಧತಿಗಳಾದ ಆಯುರ್ವೇದ, ಹೋಮಿಯೋಪತಿ ಮುಂತಾದ ಚಿಕಿತ್ಸೆಯಲ್ಲಿ ಯಾವುದೆ ಅಡ್ಡ ಪರಿಣಾಮ ಇರುವುದಿಲ್ಲ. ಆದ್ದರಿಂದ ಯುವ ವೈದ್ಯರು ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನನ್ನ ಶಿಷ್ಯೆಯೊಬ್ಬಳು ಬದುಕುವ ಆಸೆಯನ್ನೇ ಬಿಟ್ಟಿದ್ದಳು. ಗುಜರಾತ್‌ನ ಕಚ್‌ನಲ್ಲಿ ದೇಶಿಯ ವೈದ್ಯರೊಬ್ಬರು ಆಕೆಗೆ ಒಂದೂವರೆ ವರ್ಷಗಳ ಕಾಲ ಕ್ಯಾರೆಟ್ ರಸ ಕುಡಿಸಿ ಆಕೆಯನ್ನು ಕ್ಯಾನ್ಸರ್ ಬಾಧೆಯಿಂದ ಹೊರತಂದರು.
ಆದ್ದರಿಂದ ಯಾವುದೆ ಅಡ್ಡ ಪರಿಣಾಮ ಇಲ್ಲದ ದೇಶೀಯ ವೈದ್ಯೋಪಚಾರ ತೀರ ಅನಿವಾರ್ಯ ಎಂದರು.
ಅಳಿವಿನ ಅಂಚಿಗೆ: ಜಾಗತೀಕರಣದ ತರುವಾಯ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ದೇಶೀಯ ವೈದ್ಯಕೀಯ ಪದ್ಧತಿಗಳು ಅಳಿವಿನ ಅಂಚಿಗೆ ತಲುಪಿದವು. ಆದರೂ ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜು ರಾಜಾಶ್ರಯದಿಂದ ಬಂದ ಪರಿಣಾಮ ಜೀವಂತವಾಗಿದೆ. ಇದನ್ನು ಯುವ ವೈದ್ಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
2020ಕ್ಕೆ ಭಾರತ ಸೂಪರ್ ಪವರ್ ಎಂದೆಲ್ಲ ಬುರುಡೆ ಬಿಡುತ್ತೇವೆ. ಆದರೆ ಭಾರತದಲ್ಲಿ ಅತಿ ಹೆಚ್ಚು ಅನಕ್ಷರಸ್ಥರಿದ್ದಾರೆ. ಲಿಂಗಾನುಪಾತದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ಎಷ್ಟು ಮಕ್ಕಳನ್ನು ತಾನು ಪಡೆಯಬೇಕು ಎಂಬ ಸ್ವಾತಂತ್ರ್ಯವೂ ಆಕೆಗೆ ಇಲ್ಲ. ಬುಡಕಟ್ಟು ಸಮುದಾಯದವರ ಸೇವೆ ಸಲ್ಲಿಸುತ್ತಿರುವ ಬಿನಾಯಕ್ ಸೇನ್ ಅವರನ್ನು ಆದರ್ಶರಾಗಿಟ್ಟುಕೊಂಡು ತಾವು ಗ್ರಾಮೀಣ ಮಹಿಳೆಯರ ಆರೋಗ್ಯದತ್ತ ಗಮನ ನೀಡಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಿಯಾಂಕ ಶಾಂಡಿಲ್ಯ, ಶ್ರೀದೇವಿ ಮತ್ತು ಅಮೂಲ್ಯ ಅವರು ಅತಿಹೆಚ್ಚು ಅಂಕಪಡೆದು ನಗದು ಬಹುಮಾನ ತಮ್ಮದಾಗಿಸಿಕೊಂಡರು. 36 ಮಂದಿ ವಿದ್ಯಾರ್ಥಿಗಳ ಪೈಕಿ 18 ಮಂದಿ ಉನ್ನತ ಶ್ರೇಣಿ ಪಡೆದಿದ್ದಾರೆ. ಉಳಿದವರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಬೆಂಗಳೂರು ಸರ್ಕಾರಿ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಡಿ.ಎಸ್. ಲೂಕಾಸ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಮೈಸೂರು ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.