ಮೈಸೂರು ವಿವಿ ಮಹಿಳಾ ಅಧ್ಯಯನ ಕೇಂದ್ರಕ್ಕೀಗ 25
ಪುರುಷ, ಮಹಿಳೆ ಎಂಬ ತಾರತಮ್ಯ ಇಲ್ಲದೇ ಎಲ್ಲರಿಗೂ ಸಮಾನವಾಗಿ ಉನ್ನತ ಶಿಕ್ಷಣ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ಮೈಸೂರು ವಿಶ್ವವಿದ್ಯಾಲಯವು ಮಹಿಳಾ ಅಧ್ಯಯನ ಕೇಂದ್ರ ಆರಂಭಿಸಿದೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ (ಯುಜಿಸಿ) ಉದ್ದೇಶ ಕೂಡ ಇದೇ ಆಗಿದೆ. ಹೀಗಾಗಿ ಮಹಿಳಾ ವಿಷಯಗಳಿಗೆ ಸಂಬಂಧಪಟ್ಟಂತೆ ಅಧ್ಯಯನ ಮತ್ತು ವಿಸ್ತರಣಾ ಕಾರ್ಯಗಳನ್ನು ನಡೆಸಲು 1989 ರಲ್ಲಿ ಮಹಿಳಾ ಅಧ್ಯಯನ ಕೇಂದ್ರ ಆರಂಭಿಸಲಾಯಿತು. ಅಂದಿನ ಕುಲಪತಿ ಡಾ.ಪಿ. ಸೆಲ್ವಿದಾಸ್ ಅವರು ಈ ಕೇಂದ್ರದ ಆರಂಭಕ್ಕೆ ಕಾರಣಕರ್ತರು. ಈಗ ಕೇಂದ್ರ 25ರ ಸಡಗರದಲ್ಲಿದೆ.
ಪ್ರೊ.ರಾಮೇಶ್ವರಿ ವರ್ಮ ಅವರ ಈ ಕೇಂದ್ರದ ಮೊದಲ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ನಂತರ ಪ್ರೊ.ಬಿ.ಜೆ. ನಾಗರಾಜ್, ಪ್ರೊ.ಆರ್. ಇಂದಿರಾ, ಪ್ರೊ.ಶ್ರೀಜಯದೇವರಾಜ ಅರಸ್, ಡಾ.ಎಂ. ಇಂದಿರಾ, ಪ್ರೊ.ಪದ್ಮಾ ಶೇಖರ್, ಪ್ರೊ.ಕೆ.ಟಿ. ಸುನೀತಾ ಅವರು ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ.ಆರ್. ಇಂದಿರಾ ಹಾಗೂ ಡಾ.ಎಂ. ಇಂದಿರಾ ಅವರು ಎರಡು ಅವಧಿಗೆ ಈ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು. ಪ್ರಸ್ತುತ ಡಾ.ಎಸ್.ಎಂ. ಮಂಗಳಾ ಅವರ ನಿರ್ದೇಶಕರಾಗಿದ್ದಾರೆ.
ಸಂಶೋಧನೆ, ಬೋಧನೆ, ತರಬೇತಿಯಲ್ಲಿ ಲಿಂಗ ಸಮಾನತೆ ಕೇಂದ್ರದ ಪ್ರಮುಖ ಉದ್ದೇಶ. ಸಮಾಜದಲ್ಲಿ ಮಹಿಳೆಯರ ಪಾತ್ರ, ಲಿಂಗ ತಾರತಮ್ಯ ಕುರಿತ ಸಾರ್ವಜನಿಕರಿಗೆ ಅರಿವು ಮೂಡಿಸಲು ವಿಚಾರ ಸಂಕಿರಣ, ಕಾರ್ಯಾಗಾರ, ಸಮ್ಮೇಳನ, ವಿಸ್ತರಣಾ ಚಟುವಟಿಕೆಗಳ ಸಂಘಟನೆ, ಬದುಕಿನ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಬಗ್ಗೆ ಇರುವ ನಕಾರಾತ್ಮಕ ಅಭಿಪ್ರಾಯ ನಿವಾರಣೆ, ಮಹಿಳಾ ಅಧ್ಯಯನ ಕುರಿತ ಬೋಧನೆ, ಸಂಪನ್ಮೂಲ ವ್ಯಕ್ತಿಗಳ ಸೃಷ್ಟಿ, ಮಹಿಳೆಯರ ಹಕ್ಕುಗಳು, ಲಿಂಗ ತಾರತಮ್ಯ ನಿವಾರಣೆ ಕುರಿತು ಸರ್ಕಾರಿ, ಸರ್ಕಾರೇತರ ಸಂಸ್ಥೆಗಳ ನಡುವೆ ನಮನ್ವಯಕಾರನಾಗಿ ಕೆಲಸ ಮಾಡುತ್ತಿದೆ.
ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗದ ಸಹಯೋಗದಲ್ಲಿ ಹೆಣ್ಣು ಮಗು ಮತ್ತು ಕುಟುಂಬ ಕುರಿತ ಬಹು ರಾಜ್ಯ ಪ್ರಾಯೋಜಿತ ಯೋಜನೆಯ ಸಂಶೋಧನೆ ಮುಕ್ತಾಯವಾಗಿದೆ. ಬೀಡಿ ಉದ್ಯಮದಲ್ಲಿ ಮಕ್ಕಳ ಕುರಿತು ಕೇಂದ್ರ ಸರ್ಕಾರದ ಕಾರ್ಮಿಕ ಮಂತ್ರಾಲಯದ ಪ್ರಾಯೋಜಕತ್ವದಲ್ಲಿ ಸಂಶೋಧನೆ ನಡೆಸಲಾಗಿದೆ. ಕೊಳ್ಳೇಗಾಲ ತಾಲೂಕಿನಲ್ಲಿ ಹೆಣ್ಣು ಭ್ರೂಣ ಹತ್ಯೆ ಕುರಿತು ಮೈಸೂರು ಜಿಪಂ ಪ್ರಾಯೋಜಕತ್ವದಲ್ಲಿ ಸಂಶೋಧನೆ ನಡೆಸಲಾಗಿದೆ.
ಇದಲ್ಲದೇ ಕೇಂದ್ರ ಆದಿವಾಸಿ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಬಿಳಿಗಿರಿ ರಂಗನಬೆಟ್ಟದಲ್ಲಿ ಮಹಿಳೆ, ರಾಷ್ಟ್ರೀಯ ಮಹಿಳಾ ಆಯೋಗದ ಪ್ರಾಯೋಜಕತ್ವದಲ್ಲಿ ಕರ್ನಾಟಕದಲ್ಲಿ ಸ್ವಸಹಾಯ ಸಂಘಗಳ ಕುರಿತ ಮೌಲ್ಯಮಾಪನ ನಡೆಸಲಾಗಿದೆ. ಅಲ್ಲದೇ ಸ್ನಾತಕೋತ್ತರ ಕೇಂದ್ರಗಳ ಪ್ರವೇಶದಲ್ಲಿ ಲಿಂಗದ ಅಂಶ ಕುರಿತು ಕೂಡ ಅಧ್ಯಯನ ನಡೆಸಲಾಗಿದೆ.
ಡಿಪ್ಲೋ, ಸ್ನಾತಕೋತ್ತರ ಕೋರ್ಸ್ಗಳು: ಮಹಿಳಾ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಹಾಗೂ ಎರಡು ವರ್ಷಗಳ ಸ್ನಾತಕೋತ್ತರ ಕೋರ್ಸ್ಗಳನ್ನು ನಡೆಸಲಾಗುತ್ತಿದೆ. ವಿಶ್ವವಿದ್ಯಾಲಯಗಳು ಹಾಗೂ ಪದವಿ ಕಾಲೇಜುಗಳಲ್ಲಿ ಸಮಾಜಶಾಸ್ತ್ರ, ಅರ್ಥಶಾಸ್ತ್ರ ಮೊದಲಾದ ವಿಷಯಗಳಲ್ಲಿ ಮಹಿಳಾ ಅಧ್ಯಯನ ಸೇರ್ಪಡೆ ಮಾಡುವಲ್ಲಿ, ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಮಹಿಳಾ ಅಧ್ಯಯನ ಆರಂಭಿಸುವಲ್ಲಿ ಮೈಸೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ಪಾತ್ರ ಪ್ರಮುಖವಾದುದು.
ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಲಿಂಗ ತಾರತಮ್ಯ ನಿವಾರಣೆ ಕುರಿತ ನೂರಾರು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮಹಿಳಾ ಅಧ್ಯಯನ ಕೇಂದ್ರವು ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ಸಕ್ರಿಯ ಗುಂಪುಗಳೊಂದಿಗೆ ವ್ಯಾಪಕ ಸಂಪರ್ಕ ಜಾಲ ಹೊಂದಿದೆ.
ಸಾಮಾಜಿಕ ಸಂಬಂಧಿ ವಿಷಯಗಳ ಅಧ್ಯಯನ ಕುರಿತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ. ಕೇಂದ್ರದ ಗ್ರಂಥಾಲಯದಲ್ಲಿ ಮಹಿಳಾ ವಿಷಯಗಳಿಗೆ ಸಂಬಂಧಿಸಿದಂತೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸಾವಿರಾರು ಪುಸ್ತಕಗಳು ಇವೆ.
ಮಹಿಳಾ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್ ಒಂದು ವರ್ಷ ಅವಧಿಯದ್ದು. ಯಾವುದೇ ಪದವಿ ಪಡೆದವರು ಪ್ರವೇಶಕ್ಕೆ ಅರ್ಹರು. ಎರಡು ವರ್ಷಗಳ ಸ್ನಾತಕೋತ್ತರ ಪದವಿಗೂ ಕೂಡ ಯಾವುದೇ ಪದವಿ ಪಡೆದವರು ಪ್ರಪೇಶಕ್ಕೆ ಅರ್ಹರು.
ಮಹಿಳಾ ಅಧ್ಯಯನ ಕೇಂದ್ರವು ವಾರ್ತಾಪತ್ರವನ್ನು ಕೂಡ ಹೊರತರುತ್ತಿದೆ. ಅಲ್ಲದೇ ಮಹಿಳೆ ಮತ್ತು ವರದಕ್ಷಿಣೆ, ಕೃಷಿಯಲ್ಲಿ ಮಹಿಳೆ, ಸ್ವಾವಲಂಬನೆಯತ್ತ ಮಹಿಳೆಯರ ಬದುಕು, ಬಾಲಕಾರ್ಮಿಕ ಪದ್ಧತಿಯಲ್ಲಿ ಹೆಣ್ಣು ಮಕ್ಕಳು ಮತ್ತು ಅವರ ಸ್ಥಿತಿಗತಿ, ಲಿಂಗ, ಬಡತನ ಮತ್ತು ಮಹಿಳೆಯರ ಅಭಿವೃದ್ಧಿ, ಬೀಡಿ ಉದ್ಯಮದಲ್ಲಿ ಮಹಿಳೆಯರ ಆರೋಗ್ಯದ ಸಮಸ್ಯೆಗಳು, ಮಹಿಳೆಯರ ಸಾಮಾಜಿಕ ಸ್ಥಿತಿಗತಿ, ಮಹಿಳೆಯರ ಅಭಿವೃದ್ಧಿ ಕುರಿತು ಡಾ.ಅಮರ್ತ್ಯಸೇನ್ ದೃಷ್ಟಿಕೋನ, ಮಕ್ಕಳ ಹಕ್ಕುಗಳ ವಿಷಯದಲ್ಲಿ ಮಹಿಳೆಯರ ಪಾತ್ರ, ಮಹಿಳೆಯರ ಮೇಲಿನ ದೌರ್ಜನ್ಯಗಳು, ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಪಾತ್ರ, ಲಿಂಗ ಅಸಮಾನತೆ, ಡಾ.ಅಂಬೇಡ್ಕರ್ ಮತ್ತು ಮಹಿಳಾ ಸಬಲೀಕರಣ, ಮಹಿಳೆಯರು ಸಬಲರಾದರೇ... ಮೊದಲಾದ ಲೇಖನಗಳನ್ನು ಪ್ರಕಟಿಸಿದೆ.
ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು- ವರ್ಗ- ಜಾತಿ ಸಂಘರ್ಷ, ಕರ್ನಾಟದಲ್ಲಿ ಮಹಿಳೆ ಮತ್ತು ಅಭಿವೃದ್ಧಿ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಸಾಮಾಜಿಕ ಹೋರಾಟ, ಮಹಿಳಾ ಸಬಲೀಕರಣ- ಗ್ರಾಮೀಣ ಉದ್ಯಮಿಗಳ ಅಧ್ಯಯನ, ಮಹಿಳಾ ಅಭಿವೃದ್ಧಿ ಮತ್ತು ವಾಸ್ತವ, ಮಹಿಳಾ ಉದ್ಯಮಿಗಳು ಮತ್ತು ಅಭಿವೃದ್ಧಿ, ಮಹಿಳೆಯರು ಮತ್ತು ಶಿಕ್ಷಣದ ಸ್ಥಿತಿಗತಿ, ಮಹಿಳೆಯರು ಎದುರಿಸಬೇಕಾದ ಸವಾಲುಗಳು, ದೇಶದಲ್ಲಿ ಮಹಿಳಾ ಚಳವಳಿ, ಮಾನವ ಹಕ್ಕುಗಳು ಮತ್ತು ಲಿಂಗ ಸಮಾನತೆ, ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಕುರಿತ ಪ್ರಬಂಧಗಳನ್ನು ವಿವಿಧೆಡೆ ಪ್ರಕಟಿಸಿದೆ.
25ರ ಸಂಭ್ರಮದಲ್ಲಿರುವ ಮಹಿಳಾ ಅಧ್ಯಯನ ಕೇಂದ್ರವು ಸದ್ಯದಲ್ಲಿಯೇ ಸಾಪ್ತಾಹಿಕ ಹೆಸರಿನಲ್ಲಿ ಒಂದು ವಾರಗಳ ಕಾರ್ಯಕ್ರಮಗಳನ್ನು ಸಂಘಟಿಸಲಿದೆ ಎನ್ನುತ್ತಾರೆ ನಿರ್ದೇಶಕಿ ಡಾ.ಎಸ್.ಎಂ. ಮಂಗಳಾ. ಸದ್ಯಕ್ಕೆ ಕೇಂದ್ರದಲ್ಲಿ 10 ಸಿಬ್ಬಂದಿ ಇದ್ದಾರೆ. ಐವರು ಪಿಎಚ್.ಡಿ ಮಾಡುತ್ತಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 15, ಮುಕ್ತ ವಿಭಾಗದಲ್ಲಿ 110 ಮಂದಿ ಅಧ್ಯಯನ ಮಾಡುತ್ತಿದ್ದಾರೆ.
-ಅಂಶಿ ಪ್ರಸನ್ನಕುಮಾರ್