ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

15ರಿಂದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಸಪ್ತಾಹ

Vishwanath S
Updated On : 9 Mar 2014, 1:21 am

ಮೈಸೂರು: ಯುವಜನ ಸೇವಾ ಇಲಾಖೆ, ಆಯುಷ್ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ರಾಜೀವ್‌ಗಾಂಧಿ ಆರೋಗ್ಯ ವಿವಿಗಳ ಸಹಯೋಗದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ಮಾ.15ರಿಂದ 21ರವರೆಗೆ ಕೆಆರ್‌ಎಸ್ ರಸ್ತೆಯ ಬೃಂದಾವನ ಬಡಾವಣೆಯ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ನಡೆಯಲಿದೆ. ಈ ಶಿಬಿರವು ದೇಶದಲ್ಲೇ ಪ್ರಪ್ರಥಮ ಬಾರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಆಯೋಜನೆಗೊಂಡಿದೆ. ದೇಶದ ನಾನಾ ಭಾಗಗಳಿಂದ ಸುಮಾರು 150 ಶಿಬಿರಾರ್ಥಿಗಳು ಭಾಗವಹಿಸುವರು. ವೈದ್ಯಕೀಯ, ದಂತವೈದ್ಯ, ಆಯುರ್ವೇದ, ಯೋಗ, ಪರಿಸರ ಸಂರಕ್ಷಣೆ, ಶ್ರಮದಾನ, ಸಂಸ್ಕೃತಿ, ಲಿಂಗತಾರತಮ್ಯ, ಸ್ವಾವಲಂಬನೆ ಕುರಿತಾಗಿ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಲಾಗುವುದು. 150 ಜನ ತಜ್ಞರು ಭಾಗವಹಿಸಿ ತಮ್ಮ ಅನುಭವ ಜ್ಞಾನವನ್ನು ಹಂಚಿಕೊಳ್ಳಲಿದ್ದಾರೆ ಎಂದು ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ಆರ್.ಸಿ. ಮೈತ್ರೇಯಿ ಹಾಗೂ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್ ತಿಳಿಸಿದ್ದಾರೆ.

ಶುಲ್ಕ ವಿನಾಯ್ತಿ ಕಡಿತ; ಎಸ್‌ಎಫ್‌ಐನಿಂದ ಮನವಿ
ಮೈಸೂರು: ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ರದ್ದುಪಡಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮೆಟ್ರಿಕ್ ನಂತರದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಬೋಧನಾ, ಪ್ರಯೋಗಾಲಯ, ಪರೀಕ್ಷಾ, ಕ್ರೀಡಾ, ಗ್ರಂಥಾಲಯ ಶುಲ್ಕಗಳಲ್ಲಿ ವಿನಾಯಿತಿ ಇದೆ. ಆದರೆ ಸರ್ಕಾರದ ನಿಯಮ ಹಿಂದುಳಿದ, ದಲಿತ ವಿದ್ಯಾರ್ಥಿಗಳನ್ನು ಕಾಲೇಜು ಶಿಕ್ಷಣದಿಂದ ವಂಚಿತರಾಗಿ ಮಾಡಲು ಹೊರಟಿದೆ. ಸರ್ಕಾರದ ನಿಯಮದಂತೆ ವಿದ್ಯಾರ್ಥಿಗಳು ಪೂರ್ಣ ಶುಲ್ಕ ಪಾವತಿಸಬೇಕು. ಬಳಿಕ ವಿನಾಯಿತಿ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಶುಲ್ಕ ಮರುಪಾವತಿಗೆ ವಿದ್ಯಾರ್ಥಿಗಳ ಅಂಕಗಳ ಮಾನದಂಡ ಜಾರಿಗೊಳಿಸಿರುವುದು ಸರಿಯಲ್ಲ. ಸರ್ಕಾರ ಈ ಆದೇಶ ಹಿಂಪಡೆಯಬೇಕು ಎಂದು ಸಂಘಟನೆಯ ಮಹೇಶ್ ಕುಮಾರ್, ಹೇಮಂತಕುಮಾರ್, ಬಿ. ಗುರು, ನಿರಂಜನ್ ಒತ್ತಾಯಿಸಿ ಮನವಿ ಸಲ್ಲಿಸಿದರು.

ಸಫಾಯಿ ಕರ್ಮಚಾರಿಗಳ ಸಮೀಕ್ಷೆಗೆ ಒತ್ತಾಯ
ಮೈಸೂರು: ಸಫಾಯಿ ಕರ್ಮಚಾರಿಗಳ ಸಮೀಕ್ಷೆ ನಡೆಸುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ವೇದಿಕೆ ಒತ್ತಾಯಿಸಿದೆ. 10 ವರ್ಷ ಕಳೆದರೂ ಸಫಾಯಿ ಕರ್ಮಚಾರಿಗಳ ಸಮೀಕ್ಷೆ ನಡೆಯದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಯೋಜನೆಯಡಿ ಸಿಗಬೇಕಾದ ಸವಲತ್ತು ದೊರಕುತ್ತಿಲ್ಲ. ಆದ್ದರಿಂದ ಕೂಡಲೆ ಸಮೀಕ್ಷೆ ನಡೆಸಬೇಕು. ಕರ್ಮಚಾರಿಗಳಿಗೆ ನೀಡುತ್ತಿರುವ 50 ಸಾವಿರ ಮತ್ತು 1 ಲಕ್ಷ ಸಾಲಕ್ಕೆ ಎರಡು ಕಂತುಗಳಲ್ಲಿ ವಿತರಿಸುವ ಕ್ರಮ ರದ್ದುಪಡಿಸಬೇಕು, ರಾಜ್ಯ ಸಫಾಯಿ ಕರ್ಮಚಾರಿಗಳಿಗೆ ಸರ್ಕಾರ ನೀಡುತ್ತಿರುವ ಸಾಲದ ಮೊತ್ತವನ್ನು 5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ವೇದಿಕೆ ಅಧ್ಯಕ್ಷ ಸುರೇಶ್‌ಕುಮಾರ್ ಆಗ್ರಹಿಸಿದ್ದಾರೆ. ಸಫಾಯಿ ಕರ್ಮಚಾರಿಗಳ ವಿದ್ಯಾಭ್ಯಾಸಕ್ಕೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಯೋಜನೆ ಹಣದಲ್ಲಿ ಶಾಲಾ ವೆಚ್ಚ ಭರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳಲ್ಲಿ ಸಫಾಯಿ ಕರ್ಮಚಾರಿ ವಿದ್ಯಾರ್ಥಿಗಳಿಗೆ ನೇರ ನೇಮಕಾತಿಗೆ ಅವಕಾಶ ಕಲ್ಪಿಸಬೇಕು ಎಂದು ಉಪಾಧ್ಯಕ್ಷ ಮಣಿ, ಖಜಾಂಚಿ ಅರುಣ್‌ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ರಾಚಯ್ಯ ಒತ್ತಾಯಿಸಿದ್ದಾರೆ.

ವಿವಿಧ ಸಹಕಾರ ಸಂಘಗಳಿಗೆ ಆಯ್ಕೆ
ಮೈಸೂರು: ಮೈಸೂರು ಸಿಟಿ ಪವರ್ ಲೂಂ ಓನರ್ಸ್ ಕೋ ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜಿ. ಗೋವಿಂದರಾಜು, ಉಪಾಧ್ಯಕ್ಷರಾಗಿ ಬಾಲಕೃಷ್ಣ, ನಿರ್ದೇಶಕರಾಗಿ ಯೋಗೀಶ್‌ಕುಮಾರ್, ನಂಜುಂಡಯ್ಯ, ರಂಗನಾಥ, ಪರಮೇಶ್, ಶಂಕರ್, ಸೋಮಶೇಖರ್, ಕೃಷ್ಣಕುಮಾರಿ ಆಯ್ಕೆಯಾಗಿದ್ದಾರೆ. ನಿಸರ್ಗ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ವೆಂಕಟೇಶ್, ಉಪಾಧ್ಯಕ್ಷರಾಗಿ ಚಿಕ್ಕೇಗೌಡ, ನಿರ್ದೇಶಕರಾಗಿ ಶಂಕರಲಿಂಗೇಗೌಡ, ನಾಗೇಂದ್ರ, ಮಂಜುನಾಥ್, ರಾಜಶೇಖರ್, ಮುದ್ದಯ್ಯ, ಕಾಂತರಾಜ್, ವಿವೇಕಾನಂದ, ಪುಟ್ಟೇಗೌಡ, ಶ್ವೇತ ಮತ್ತು ಶ್ರುತಿ ಆಯ್ಕೆಯಾಗಿದ್ದಾರೆ. ಮೈಸೂರು ವಿವಿ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿ ಮನು, ಉಪಾಧ್ಯಕ್ಷರಾಗಿ ತ್ಯಾಗರಾಜು, ನಿರ್ದೇಶಕರಾಗಿ ಸತ್ಯರಾಜೇ ಅರಸ್, ವೆಂಕಟೇಶ್, ಪ್ರಕಾಶ್, ಹರ್ಷ, ಕಾಂತರಾಜು, ಕೃಷ್ಣಮಲ್ಲೇಗೌಡ, ಹೇಮಲತ, ಮಂಜುಳ, ಮಹದೇವಪ್ಪ, ಚಿತ್ರ ರತನ್ ಆಯ್ಕೆಯಾಗಿದ್ದಾರೆ.

ಚತುರ ನಾಗರಿಕ ರಸಪ್ರಶ್ನೆ ಸ್ಪರ್ಧೆ ಫಲಿತಾಂಶ ಪ್ರಕಟ
ಮೈಸೂರು: ಮೈಸೂರು ಗ್ರಾಹಕರ ಪರಿಷತ್ತು ತನ್ನ ರಜತ ಮಹೋತ್ಸವದ ಅಂಗವಾಗಿ ನಡೆಸಿದ ಅಂತರ್ ಕಾಲೇಜು ಮಟ್ಟದ ಚತುರ ನಾಗರಿಕ ರಸಪ್ರಶ್ನೆ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದೆ.  ಮಹಾಜನ ಪ್ರಥಮ ದರ್ಜೆ ಕಾಲೇಜಿನ ಗ್ರಾಹಕ ವೇದಿಕೆಯ ಸಹಯೋಗದೊಂದಿಗೆ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ ನಡೆಸಲಾಯಿತು. ಮೈಸೂರಿನ ವಿವಿಧ ಕಾಲೇಜುಗಳ 14 ತಂಡಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಇವುಗಳಲ್ಲಿ ಪ್ರಥಮ ಬಹುಮಾನ ಸಿದ್ಧಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜೆ. ಲಕ್ಷ್ಮಣ್ ಮತ್ತು ಆರ್.ಸಿ. ಶಿವಕುಮಾರ್, ದ್ವಿತೀಯ ಬಹುಮಾನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ನಾಗೇಂದ್ರ ಮತ್ತು ಸತ್ಪ್ರೇಮ್, ತೃತೀಯ ಬಹುಮಾನ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಶಿವಕುಮಾರ್ ಮತ್ತು ಮಾನಸ, ಸಮಾಧಾನಕರ ಬಹುಮಾನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನನಾಗಸಿಂಹ ಮತ್ತು ಹರೀಶ್ ಪಡೆದುಕೊಂಡಿದ್ದಾರೆ. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಶ್ರೀಮತ್ ಪಾಲಿಟೆಕ್ನಿಕ್‌ನ ನಿತೀಶ್, ದ್ವಿತೀಯ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಚಿಕ್ಕಂಕ ಹಾಗೂ ತೃತೀಯ ಕೆ.ಜೆ.ಅರ್ಚನಾ, ಸಮಾಧಾನಕರ ಬಹುಮಾನ ಶ್ರೀಮತ್ ಪಾಲಿಟೆಕ್ನಿಕ್‌ನನವೀನ್ ಕುಮಾರ್ ಪಡೆದಿದ್ದಾರೆ ಎಂದು ಪರಿಷತ್ತಿನ ಶಿವಶಂಕರ್ ತಿಳಿಸಿದ್ದಾರೆ.

ಇಂದು ಶೈಲಾಕ್ ನಾಟಕ ಪ್ರದರ್ಶನ
ಮೈಸೂರು: ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ವಾರಾಂತ್ಯ ರಂಗಪ್ರರ್ದಶನದಲ್ಲಿ ಈ ಬಾರಿ ಶೈಲಾಕ್ ನಾಟಕ ಪ್ರದರ್ಶನವಿದ್ದು, ಮಾ.9ರ ಸಂಜೆ 6.30ಕ್ಕೆ ರಂಗಾಯಣದ ಕಿರಿಯ ಕಲಾವಿದರು ರಂಗದ ಮೇಲೆ ಪ್ರಸ್ತುಪಡಿಸಲಿದ್ದಾರೆ. ವಿಲಿಯಂ ಷೇಕ್ಸ್‌ಪಿಯರ್ ಅವರ ಮರ್ಚೆಂಟ್ ಆಫ್ ವೆನಿಸ್ ನಾಟಕವನ್ನು ಕೆ.ವಿ. ಅಕ್ಷರ ಅವರು ವೆನಿಸ್ಸಿನ ವ್ಯಾಪಾರ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ನಾಟಕದ ಹೆಸರನ್ನು ಶೈಲಾಕ್ ಎಂದು ಬದಲಾಯಿಸಿ ಪ್ರದರ್ಶನಕ್ಕೆ ಅಣಿಗೊಳಿಸಲಾಗಿದೆ ಎಂದು ರಂಗಕರ್ಮಿ ಮೈಮ್ ರಮೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ರಂಗಕರ್ಮಿ ಪ್ರೊ.ಎಸ್.ಆರ್.ರಮೇಶ್ ನಾಟಕವನ್ನು ನಿರ್ದೇಶಿಸಿ ಹಾಡುಗಳನ್ನು ರಚಿಸಿದ್ದಾರೆ. ಮಾ.19ರಿಂದ 22ರವರೆಗೆ ಭೂಮಿಗೀತ ರಂಗಮಂದಿರದಲ್ಲಿ ಪ್ರತಿದಿನ ಮಧ್ಯಾಹ್ನ 3.30ಕ್ಕೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಶೈಲಾಕ್ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಟಿಕೆಟ್ ದರ 15 ನಿಗದಿಪಡಿಸಲಾಗಿದೆ ಎಂದರು. ಹಿರಿಯ ಕಲಾವಿದರಾದ ಕೃಷ್ಣಪ್ರಸಾದ್, ಮಹದೇವ್ ಇದ್ದರು.

21ರಂದು ಚತುರ್ಭುಜ ಚಿತ್ರ ಬಿಡುಗಡೆ
ಮೈಸೂರು: ಸೂರ್ಯ ಸಿನಿಮಾಸ್ ನಿರ್ಮಿಸಿರುವ ಚತುರ್ಭುಜ ಚಿತ್ರವು ಮಾ. 21ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕ ನಟ ಆರ್ವ ತಿಳಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಭೂಮಿ ಹಿನ್ನೆಲೆಯಿಂದ ಬಂದ ನಾವು ಒಂದು ತಂಡ ಮಾಡಿಕೊಂಡು ಹೊಸ ಪರಿಕಲ್ಪನೆಯೊಂದಿಗೆ ಚಿತ್ರ ನಿರ್ಮಿಸಿದ್ದೇವೆಂದರು. ನಿರ್ದೇಶಕ ಎಂ.ಎನ್. ಕೃಷ್ಣಲೇಖ ಮಾತನಾಡಿ, ನಾಟಕೀಯವಲ್ಲದ, ಶುದ್ಧ ಮನಸ್ಸಿನ ಹಸಿ- ಹಸಿ ಪ್ರೇಮಕಥೆ ಈ ಚಿತ್ರದ ತಿರುಳಾಗಿದೆ. ಪ್ರೇಕ್ಷಕರು ಬೆನ್ನು ತಟ್ಟಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು. ಚತುರ್ಭುಜದಲ್ಲಿ ಚಿತ್ರಕಲಾವಿದ, ಮೈಸೂರಿಗ ಬಾದಲ್ ನಂಜುಂಡಸ್ವಾಮಿ ಮುಖ್ಯ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ನಟ ಆರ್ವ ಕೂಡ ಚಾಮರಾಜನಗರ ಜಿಲ್ಲೆಯವರು. ಮಂಡ್ಯ ರಮೇಶ್ ಸಾರಥ್ಯದ ನಟನ ತಂಡದಲ್ಲಿದ್ದವರು. ಚಿತ್ರ ನಿರ್ಮಾಪಕ ಶಿವನಂಜಪ್ಪ, ನಟ ಬಾದಲ್ ಇದ್ದರು.

ಚರಂಡಿ ಶುದ್ಧೀಕರಣದ ಬಗ್ಗೆ ಜಾಗೃತಿ ಬೈಕ್ ರ್ಯಾಲಿ
ಮೈಸೂರು: ಸರ್ ಎಂ. ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ವಿಶ್ವ ಪ್ಲಂಬಿಂಗ್ ದಿನಾಚರಣೆ ಅಂಗವಾಗಿ ಮಾ. 11 ರಂದು ಸಾರ್ವಜನಿಕರಿಗೆ ಮಳೆ ನೀರು ಸಂಗ್ರಹಣೆ ಮತ್ತು ಒಳಚರಂಡಿ ಶುದ್ದೀಕರಣ ಜಾಗೃತಿ ಮೂಡಿಸಲು ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಈ ರ್ಯಾಲಿಯು ಕುವೆಂಪುನಗರದ ಶಾಂತಿಸಾಗರ್ ಕಾಂಪ್ಲೆಕ್ಸ್‌ನಿಂದ ಆರಂಭವಾಗಿ ಅಕ್ಷಯ ಭಂಡಾರ್, ಅಶೋಕ ವೃತ್ತ, ರಾಮಸ್ವಾಮಿ ವೃತ್ತ, ಎಂಡಿಎ ಕಚೇರಿ ವೃತ್ತ, ರೇಲ್ವೆ ನಿಲ್ದಾಣ, ಅಂಚೆ ಕಚೇರಿ ವೃತ್ತ, ಅಶೋಕ ರಸ್ತೆ ಮುಖೇನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅಂತ್ಯಗೊಳ್ಳಲಿದೆ. ಕೆಲಸದ ಗುತ್ತಿಗೆದಾರರು, ಕಾರ್ಮಿಕ ವರ್ಗದವರು ಹೆಲ್ಮೆಟ್ ಧರಿಸಿ ಬೈಕ್ ಜತೆ ಬರುವಂತೆ ಸಂಘದ ಅಧ್ಯಕ್ಷ ಎನ್. ಚಂದ್ರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಪದಾಧಿಕಾರಿಗಳಾದ ಬಲ್ಲೇಗೌಡ, ಟಿ. ಗೋವಿಂದೇಗೌಡ ಇದ್ದರು.

ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ
ಮೈಸೂರು: ಕೆನರಾ ಬ್ಯಾಂಕ್ ವೃತ್ತ ಕಚೇರಿ ವತಿಯಿಂದ ಬನ್ನಿಮಂಟಪದ ಸಾಯಿರಂಗ ವಿದ್ಯಾಸಂಸ್ಥೆಯ 60 ಮಂದಿ ವಿದ್ಯಾರ್ಥಿಳಿಗೆ ಶಾಲಾ ಸಮವಸ್ತ್ರ ವಿತರಿಸಲಾಯಿತು. 100ಕ್ಕೂ ಅಧಿಕ ಮಂದಿ ಕಿವುಡ ಮತ್ತು ಮೂಕ ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣ ನೀಡುತ್ತಿರುವ ಸಾಯಿರಂಗ ವಿದ್ಯಾಸಂಸ್ಥೆಯ ಮಕ್ಕಳಿಗೆ ಕೆನರಾ ಬ್ಯಾಂಕ್ ವೃತ್ತ ಕಚೇರಿ ಮುಖ್ಯಸ್ಥ ಡಾ.ಎಸ್.ಟಿ. ರಾಮಚಂದ್ರ ಸಮವಸ್ತ್ರ ವಿತರಿಸಿದರು. ಬಳಿಕ ಮಾತನಾಡಿ, ಸಮಾಜದ ಏಳಿಗೆಯ ಮೂಲಕವೆ ಸಂಸ್ಥೆಯ ಬೆಳವಣಿಗೆ ಎಂಬುದು ಕೆನರಾ ಬ್ಯಾಂಕ್‌ನ ವಿಶ್ವಾಸ. ಕೇವಲ ವ್ಯವಹಾರದ ಗಾತ್ರ ಅಥವಾ ಲಾಭಾಂಶಶೀ ಮುಖ್ಯವಲ್ಲ. ಯಾವುದೆ ಸಂಸ್ಥೆಯ ಬೆಳವಣಿಗೆ ಸಮಾಜದ ಮೂಲಕ ಮಾತ್ರ ಸಾಧ್ಯ. ಸಮಾಜದ ದೀನ, ದುರ್ಬಲರ ಏಳಿಗೆಗಾಗಿ ತನ್ನಿಂದಾದ ಸಹಾಯ ಮಾಡುವುದು ಸಂಸ್ಥೆಯ ಕರ್ತವ್ಯ ಎಂದರು. ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಕೆನರಾ ಬ್ಯಾಂಕ್‌ನ ಸಾಮಾಜಿಕ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಎಂ.ಜಿ. ಶಂಕರ್ ಬ್ಯಾಂಕಿನ ಸೇವೆಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ಪಾರ್ವತಿ ಪೊನ್ನಪ್ಪ, ಟ್ರಸ್ಟ್‌ನ ಸದಸ್ಯರಾದ ಪೂರ್ಣಿಮ ರಂಗಪ್ಪ, ನಾಗರತ್ನಮ್ಮ ಮತ್ತು ಮಂಜೇಗೌಡ ಇದ್ದರು.

ಟಿಡಿಎಸ್ ರಿಟರ್ನ್ಸ್ ಸಲ್ಲಿಸಲು 31ರವರೆಗೆ ಅವಕಾಶ
ಮೈಸೂರು: 2012-13 ಹಾಗೂ 2013-14ನೇ ಸಾಲಿನ ಡಿಸೆಂಬರ್‌ವರೆಗೆ ತ್ರೈಮಾಸಿಕ ಟಿಡಿಎಸ್, ಟಿಸಿಎಸ್ ರಿಟರ್ನ್ಸ್ ಸಲ್ಲಿಸುವ ಕಾಲಾವಧಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ ಮಾ. 31ರವರೆಗೆ ಯಾವುದೇ ದಂಡವಿಲ್ಲದೆ ಸಲ್ಲಿಸಲು ವಿಸ್ತರಿಸಿದೆ ಎಂದು ಅಸೋಸಿಯೇಟ್ಸ್‌ನ ಎನ್.ಡಿ. ಶ್ರೀನಿವಾಸ್ ಹೇಳಿದ್ದಾರೆ. ಕೇಂದ್ರ ನೇರ ಆದಾಯ ತೆರಿಗೆ ಮಂಡಳಿಯು ಮಾ. 4ರಂದು ಹೊರಡಿಸಿರುವ ಸುತ್ತೋಲೆ ಪ್ರಕಾರ ಯಾವುದೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು ಸಂಬಳ ಮತ್ತು ಸಂಬಳೇತರ ವಿಷಯಗಳಿಗೆ, ಹಣ ಪಾವತಿಸುವ ಅಧಿಕಾರಿಗಳು, ಮೂಲದಲ್ಲೆ ಆದಾಯ ತೆರಿಗೆ ಕಟಾಯಿಸಿರುವ ಬಗ್ಗೆ ಇ-ಟಿಡಿಎಸ್ ರಿಟರ್ನ್ಸ್‌ನ್ನು ಆನ್‌ಲೈನ್ ಮೂಲಕ ಮಾ. 31ರೊಳಗೆ ಯಾವುದೇ ದಂಡವಿಲ್ಲದೆ ಸಲ್ಲಿಸಬಹುದು. ಈ ಕಾಲಾವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ ಮತ್ತು ದಂಡ ಪಾವತಿಸಿರುವವರಿಗೆ ಹಣ ಹಿಂದಿರುಗಿಸಲಾಗುವುದಿಲ್ಲ ಎಂದು ನಮೂದಿಸಲಾಗಿದೆ.

ಸದ್ದಿಲ್ಲದೆ ಕಾಂಗ್ರೆಸ್ ಸೇರಿದ ಪಿ. ಗೋವಿಂದರಾಜು
ಮೈಸೂರು: ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾಗಿದ್ದ, ಎಂಡಿಎ ಮಾಜಿ ಅಧ್ಯಕ್ಷ ಹಾಗೂ ಎಸ್.ಬಂಗಾರಪ್ಪ ಅವರ ಕಟ್ಟಾ ಬೆಂಬಲಿಗ ಪಿ. ಗೋವಿಂದರಾಜು ಅವರು ಸದ್ದಿಲ್ಲದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇತ್ತೀಚೆಗೆ ಪಿರಿಯಾಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಅವರು ಕಾಣಿಸಿಕೊಂಡಿದ್ದರು. ಆದರೆ, ಹೆಚ್ಚು ಪ್ರಚಾರ ಮಾಡಿಕೊಳ್ಳಲಿಲ್ಲ. ಶನಿವಾರ ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲೂ ಪಾಲ್ಗೊಂಡು ಪಕ್ಷದ ಅಭ್ಯರ್ಥಿ ಗೆಲವಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು. ನನ್ನ ಜೀವ ಇರುವವರೆಗೂ ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ. ಇನ್ನಾವುದೇ ಪಕ್ಷಕ್ಕೂ ಹೋಗುವುದಿಲ್ಲ. ನಮ್ಮ ನಾಯಕ ಬಂಗಾರಪ್ಪ ಅವರು ಇರುವಷ್ಟು ದಿನ ತಾವು ಅವರನ್ನು ಬೆಂಬಲಿಸಿದ್ದೆ ಎಂದರು.

ಪೌರಕಾರ್ಮಿಕರಿಗೆ ಅರಿವು ಮೂಡಿಸಿ; ವೆಂಕಟೇಶ್
ಮೈಸೂರು: ಸಫಾಯಿ ಕರ್ಮಚಾರಿಗಳನ್ನು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಂದೆ ತರಲು ಸರ್ಕಾರ ಜಾರಿಗೊಳಿಸಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಅರಿವು ಮೂಡಿಸಬೇಕು ಎಂದು ಸಫಾಯಿ ಕರ್ಮಚಾರಿ ಹಿತರಕ್ಷಣ ಸಮಿತಿ ಅಧ್ಯಕ್ಷ ಎಂ.ವಿ. ವೆಂಕಟೇಶ್ ಮನವಿ ಮಾಡಿದರು. ನಗರಪಾಲಿಕೆಯಲ್ಲಿ ಸ್ವಚ್ಛತೆಯ ಗುತ್ತಿಗೆಯನ್ನು ಕಾನೂನಿನನ್ವಯ ನಿಬಂಧನೆ ರಚಿಸಿ ಅನುಷ್ಠಾನಗೊಳಿಸಲಾಗಿದೆ. ಆದರೆ ಗುತ್ತಿಗೆ ಪದ್ಧತಿಯಲ್ಲಿ ಕೆಲಸ ನಿರ್ವಹಿಸುವಂಥ ಕಾರ್ಮಿಕರಿಗೆ ಗುತ್ತಿಗೆದಾರರಿಂದ ಯಾವುದೆ ರೀತಿಯ ಸವಲತ್ತು ದೊರಕುತ್ತಿಲ್ಲ. ಕಾನೂನಿನನ್ವಯ ಕನಿಷ್ಠ ವೇತನ, ಇಎಸ್‌ಐ, ಪಿಎಫ್, ಬಾಕಿ ವೇತನ ಮತ್ತು ಸಮವಸ್ತ್ರ ದೊರಕುತ್ತಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ನಮಗೆ ಅರಿವು ಮೂಡಿಸಬೇಕು. ಗುತ್ತಿಗೆದಾರರು ನಮ್ಮನ್ನು ಇಂದಿಗೂ ಅಸ್ಪೃಶ್ಯರಂತೆ ಕಾಣುತ್ತಿದ್ದಾರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಮ್ಯಾನ್‌ಹೋಲ್‌ನಲ್ಲಿ ಮೃತ ಸಫಾಯಿ ಕರ್ಮಚಾರಿ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಟ್ಟ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ ಅವರಿಗೆ ಅಭಿನಂದಿಸುವುದಾಗಿ ಹೇಳಿದರು.

ಮಾಹಿತಿ ಸಂಗ್ರಹದಲ್ಲಿ ಗ್ರಾಮೀಣ ಯುವಕರೇ ಮುಂದೆ
ಮೈಸೂರು: ಮಾಹಿತಿ ಸಂಗ್ರಹದ ವಿಚಾರದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗಿಂತಲೂ ನಗರ ಪ್ರದೇಶದ ವಿದ್ಯಾರ್ಥಿಗಳು ಹಿಂದಿದ್ದಾರೆ ಎಂದು ಅಸೋಸಿಯೇಟ್ ಕಂಪನಿ ಸೆಕ್ರೆಟರಿ ಎಸ್.ಮಂಜುನಾಥ್ ಹೇಳಿದರು. ನಗರದ ಜಿಐಎಂಡಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಕೆರಿಯರ್ ಗೈಡೆನ್ಸ್ ಮತ್ತು ಕಂಪನಿ ಸೆಕ್ರೆಟರಿ ವಿಚಾರವಾಗಿ ಮಾಹಿತಿ ನೀಡಿದ ಅವರು, ಹಿಂದೆ ಪದವಿ ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿಯ ಕೊರತೆ ಎದ್ದು ಕಾಣುತ್ತಿತ್ತು. ಆದರೆ ಇಂದಿನ ದಿನದಲ್ಲಿ ಬೆರಳ ತುದಿಯಲ್ಲೇ ಮಾಹಿತಿ ದೊರೆಯುತ್ತದೆ. ವಿದ್ಯಾರ್ಥಿಗಳು ಸಿಎಸ್ ಪರೀಕ್ಷೆಯನ್ನು ಪಿಯುಸಿ ಮುಗಿದ ನಂತರ ಅಥವಾ ಪದವಿ ಮುಗಿದ ನಂತರ ತೆಗೆದುಕೊಳ್ಳಬಹುದು. ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಕೋರ್ಸ್ ಇದಾಗಿದ್ದು, ಈ ಕೋರ್ಸಿನ ಶುಲ್ಕ ಮತ್ತು ಪರೀಕ್ಷೆಯು ನಡೆವ ರೀತಿ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಅಪೌಷ್ಟಿಕತೆಗೆ ಬಡತನವೊಂದೇ ಕಾರಣವಲ್ಲ: ಡಾ. ಬಾತ್ರಾ
ಮೈಸೂರು: ಅಪೌಷ್ಟಿಕತೆಗೆ ಬಡತನ ಕಾರಣವಲ್ಲ ಎಂದು ಡಿಎಫ್‌ಆರ್‌ಎಲ್‌ನ ನಿರ್ದೇಶಕ ಡಾ.ಹರ್ಷವರ್ಧನ್ ಬಾತ್ರಾ ಹೇಳಿದರು. ಮೈಸೂರು ವಿವಿಯಲ್‌ಲ್ಲಋ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಮಾತನಾಡಿ, ಅಪೌಷ್ಟಿಕತೆಗೆ ಬಡತನ ಒಂದೇ ಕಾರಣವಲ್ಲ. ಅರಿವಿನ ಕೊರತೆಯೂ ಕಾರಣ ಎಂಬುದನ್ನು ಮರೆಯಬಾರದು ಎಂದು ಹೇಳಿದರು. ಗಿಡಮರಗಳು, ಬಳ್ಳಿ, ಎಲೆ, ಸೊಪ್ಪು, ತರಕಾರಿ ಮುಂತಾದ ವಸ್ತುಗಳಲ್ಲಿ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶ ಇರುತ್ತದೆ. ಇವು ಕಡಿಮೆ ಬೆಲೆಗೆ ಮತ್ತು ಸುಲಭವಾಗಿ ಸಿಗುವ ಪದಾರ್ಥಗಳು. ಇವುಗಳ ಸೇವನೆಯಿಂದ ಅಪೌಷ್ಟಿಕತೆ ನಿವಾರಣೆ ಆಗುತ್ತದೆ. ಆದ್ದರಿಂದ ಬಡತನವೇ ಅಪೌಷ್ಟಿಕತೆಗೆ ಕಾರಣ ಎಂಬುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಮಹಾರಾಷ್ಟ್ರದ ದುಲೆ ಎಂಬ ಜಿಲ್ಲೆಯಲ್ಲಿ ಪ್ರತಿ ವರ್ಷ ಆಹಾರ ಉತ್ಸವ ನಡೆಸಲಾಗುತ್ತದೆ. ಅಲ್ಲಿ ಪ್ರಕೃತಿ ದತ್ತವಾಗಿ ದೊರಕುವ ಸೊಪ್ಪು, ತರಕಾರಿ ಮತ್ತು ಮರದ ಎಲೆಗಳಿಂದ ತಯಾರಿಸಿದ ಆಹಾರವನ್ನು ಮಾತ್ರ ಇರಿಸಲಾಗಿರುತ್ತದೆ ಎಂದು ಉದಾಹರಣೆ ನೀಡಿದರು. ಮೈಸೂರು ವಿವಿ ಕುಲಸಚಿವ ಪ್ರೊ.ಸಿ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಜಮುನಾ ಪ್ರಕಾಶ್, ಪ್ರೊ.ಅಸ್ನ ಉರೂಜ್ ಇದ್ದರು.

ಮೂರು ದಿನಗಳ ಆಯಿಷ್ ಆವಾಜ್‌ಗೆ ಚಾಲನೆ
ಮೈಸೂರು: ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಏರ್ಪಡಿಸಿರುವ ಮೂರು ದಿನಗಳ ಆಯಿಷ್ ಆವಾಜ್ ಅಂತರ ಕಾಲೇಜು ಸಾಂಸ್ಕೃತಿಕ ಮೇಳವು ಶುಕ್ರವಾರದಿಂದ ಆರಂಭವಾಯಿತು. ಬೋಗಾದಿ ರಸ್ತೆಯಲ್ಲಿರುವ ಪಂಚವಟಿಯಲ್ಲಿ ನಡೆದ ಸಮಾರಂಭವನ್ನು ಹಾಸ್ಯ ಕಲಾವಿದ, ನಟ ರಿಚರ್ಡ್ ಲೂಯಿಸ್ ಉದ್ಘಾಟಿಸಿ, ಹಾಸ್ಯ ತುಣುಕುಗಳನ್ನು ಹೇಳುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಆಯಿಷ್ ನಿರ್ದೇಶಕಿ ಡಾ.ಎಸ್.ಆರ್. ಸಾವಿತ್ರಿ, ಕಾರ್ಯಕ್ರಮ ಆಯೋಜಕಿ ಪುಷ್ಪಾವತಿ ಇದ್ದರು. ಮೇಳದಲ್ಲಿ ನಗರದ ಹಲವು ಕಾಲೇಜುಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ರಸಪ್ರಶ್ನೆ, ಪೆನ್ಸಿಲ್ ಸ್ಕೆಚಿಂಗ್, ಮಾಕ್‌ಪ್ರೆಸ್, ಟ್ರೆಜರ್ ಹಂಟ್, ಡಂಬ್ ಚರೇಟ್ಸ್, ಸ್ಕಿಟ್, ಅಂತ್ಯಾಕ್ಷರಿ, ಫ್ಯಾಷನ್ ಶೋ, ಸಮೂಹ ನೃತ್ಯ ಸೇರಿದಂತೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.

ಜೆಎಸ್‌ಎಸ್ ವೈದ್ಯಕೀಯ ಕಾಲೇಜಲ್ಲಿ ಪದವಿ ಪ್ರದಾನ
ಮೈಸೂರು: ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮಾ.10ರಂದು ಪದವಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಅಂದು ಸಂಜೆ 5.30ಕ್ಕೆ ಕಾಲೇಜಿನ ರಾಜೇಂದ್ರ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ವಿಶ್ರಾಂತ ಕುಲಪತಿ ಡಾ.ಎಸ್. ಚಂದ್ರಶೇಖರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬೆಟ್‌ಕೆರೂರ್ ಅಧ್ಯಕ್ಷತೆ ವಹಿಸಲಿದ್ದು, ಜೆಎಸ್‌ಎಸ್ ವಿವಿ ಕುಲಪತಿ ಡಾ.ಬಿ. ಸುರೇಶ್ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಪ್ರಾಂಶುಪಾಲ ಡಾ.ಎಚ್. ಬಸವನಗೌಡಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಸಾಲಿನಲ್ಲಿ ಒಟ್ಟು 146 ಮಂದಿ ಪದವಿ ಸ್ವೀಕರಿಸಲು ಅರ್ಹರಾಗಿದ್ದಾರೆ. ಅವರಲ್ಲಿ 13 ಮಂದಿ ನಗದು ಬಹುಮಾನ ಸ್ವೀಕರಿಸುವರು. ಕ್ರೀಡೆಯಲ್ಲಿ ಹೆಸರು ತಂದ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ಮಾದಗಳ್ಳಿಯಲ್ಲಿ 11ರಿಂದ ಅಂಚಿದೇವಮ್ಮ ಜಾತ್ರೆ
ಮೈಸೂರು: ತಾಲೂಕಿನ ಇಲವಾಲ ಹೋಬಳಿಯ ಮಾದಗಳ್ಳಿಯಲ್ಲಿರುವ ಶ್ರೀ ಅಂಚಿದೇವಮ್ಮ ಮತ್ತು ಮನೆ ಮಂಚಮ್ಮ ಜಾತ್ರಾ ಮಹೋತ್ಸವವು ಮಾ.11ರಿಂದ 14ರವರೆಗೆ ನಡೆಯಲಿದೆ. ಸಾವಿರಾರು ವರ್ಷಗಳ ಹಿಂದೆ ಅಂಚಿಕಡ್ಡಿ (ಪೊರಕೆ) ಬೆಳೆದಿದ್ದ ಸುಮಾರು 6 ಎಕರೆ ಪ್ರದೇಶದ ಒಂದು ಕಡೆ ಒಡಮೂಡಿದ್ದ ಅಂಚಿದೇವಮ್ಮಗೆ ಗ್ರಾಮದವರು ದೇವಸ್ಥಾನ ನಿರ್ಮಿಸಿದ್ದರು. ಪ್ರತಿ ವರ್ಷ ಅಕ್ಕಪಕ್ಕದ ಗ್ರಾಮದವರು ಸೇರಿ ಜಾತ್ರೆ ನಡೆಸಿಕೊಂಡು ಬರುತ್ತಿದ್ದಾರೆ. ಅದರಂತೆ ಈ ಬಾರಿ ಮಾ.11ರಂದು ತಳಿಗೆ ಪೂಜೆ, ಮಾ.12ರ ರಾತ್ರಿ ಜಾತ್ರೆ, ಮಾ. 13ರಂದು ವಿಶೇಷ ಪೂಜೆ ಹಾಗೂ ಮಾ.14ರಂದು ಕೊನೆ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ರಾಮು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಹೋತ್ಸವದಲ್ಲಿ ಕೇರ್ಗಳ್ಳಿಯ ಹೊಂಬಾಳಮ್ಮ ಬಸವ, ವೀರ ಮಕ್ಕಳ ಕುಣಿತ ಭಾಗವಹಿಸುವುದು ವಿಶೇಷವಾಗಿದೆ. ಅಕ್ಕಪಕ್ಕದ ಗ್ರಾಮಗಳಾದ ಸಾಹುಕಾರಹುಂಡಿ, ಬಸವನಪುರ, ಗಣಗರಹುಂಡಿ, ಕೆ.ಯಮ್ಮನಹಳ್ಳಿ, ಬೆಳವಾಡಿ ಗ್ರಾಮದವರು ಸೇರಿದಂತೆ ಒಟ್ಟು 5 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಭಾಗವಹಿಸುವರು ಎಂದರು. ಮಹದೇವು, ಮರಿಸ್ವಾಮಿ ನಾಯಕ, ಚಿಕ್ಕದೇವಣ್ಣ, ನಾಗನಾಯಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement