ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಾನಸಿಕ ಪರಿವರ್ತನೆಯೇ ಬದಲಾವಣೆ ಹಾದಿ

Vishwanath S
Updated On : 9 Mar 2014, 1:21 am

ಮೈಸೂರು: ಮಾನಸಿಕ ಪರಿವರ್ತನೆಯಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಕೆ.ಎಸ್. ಮುದುಗಲ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದಲ್ಲಿ ಮಹಿಳೆಯರ ಪರ ಅನೇಕ ಕಾನೂನುಗಳಿವೆ. ಆದರೆ ಕೇವಲ ಕಾನೂನಿನಿಂದ ದೌರ್ಜನ್ಯ ತಪ್ಪಿಸಲು ಸಾಧ್ಯವಿಲ್ಲ. ಮಹಿಳೆಯರ ಬಗ್ಗೆ ಸಮಾಜದಲ್ಲಿ ಹೊಸ ದೃಷ್ಟಿಕೋನ ಉಂಟಾಗಬೇಕು ಎಂದರು.  
ಪುರುಷರಂತೆ ಮಹಿಳೆಯರು ಸರಿ ಸಮಾನರು ಎಂಬುದು ನಿಜವಾದರೂ, ಎಲ್ಲ ಸಂದರ್ಭದಲ್ಲೂ ಅದನ್ನು ಅನುಸರಿಸುವುದು ಸಮಂಜಸವಲ್ಲ. ಪುರುಷರಂತೆ ರಾತ್ರಿ ವೇಳೆ ಒಂಟಿಯಾಗಿ ಒಬ್ಬಳೆ ಮಹಿಳೆ ಸುತ್ತಾಡುವುದು ಇಂದಿಗೂ ಆತಂಕದ ಸಂಗತಿಯಾಗಿದೆ. ಅಲ್ಲದೆ ಇಂಥ ನಡುವಳಿಕೆ ಹೆಣ್ತನಕ್ಕೆ ಒಗ್ಗುವ ಮಾತಲ್ಲ. ಯುವಕರು ಅನೇಕ ಆಕರ್ಷಣೆಗಳಿಗೆ ಒಳಗಾಗಿ ಅತ್ಯಾಚಾರ ಕೃತ್ಯ ನಡೆಸಿ ಆರೋಪಿಗಳಾಗಿ ನ್ಯಾಯಾಲಯಕ್ಕೆ ಬರುತ್ತಾರೆ. ಅಂಥ ಸಂದರ್ಭದಲ್ಲಿ ಅವರ ತಂದೆ ತಾಯಿಯ ಪರಿಸ್ಥಿತಿ ಗಮನಿಸಿದರೆ ಕರುಣೆ ಉಂಟಾಗದಿರದು. ಅಂದ ಮಾತ್ರಕ್ಕೆ ಅಂಥವರಿಗೆ ಜಾಮೀನು ಸುಲಭವಾಗಿ ಸಿಗುವುದಿಲ್ಲ. ನಿರ್ಭಯ ಪ್ರಕರಣದ ನಂತರ ಕಾನೂನು ಇಂದು ತುಂಬ ಬಿಗಿಯಾಗಿದೆ. ಆದರೂ ಮಹಿಳೆಯರ ಮೇಲಿನ ದೌರ್ಜನ್ಯವಾಗಲೀ, ಅತ್ಯಾಚಾರವಾಗಲೀ ಹಾಗೂ ಆತ್ಮಹತ್ಯೆ ಸಂಖ್ಯೆಯಾಗಲಿ ಕಡಿಮೆಯಾಗಿಲ್ಲ ಎಂದು ಅವರು ವಿಷಾದಿಸಿದರು.
ಕೌಟುಂಬಿಕ ನ್ಯಾಯಾಲದ ಜಿಲ್ಲಾ ನ್ಯಾಯಾಧೀಶೆ ಎಂ.ಶ್ರೀದೇವಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಜೆರಾಲ್ಡ್ ಆರ್. ಮೆಂಡೋನ್ಸಾ, ಹಿರಿಯ ಸಿವಿಲ್ ನ್ಯಾಯಾಧೀಶ ದಿನೇಶ್ ಹೆಗ್ಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎನ್.ಆರ್.ವಿಜಯ್ ಹಾಗೂ ವಾರ್ತಾ ಇಲಾಖೆ ಉಪನಿರ್ದೇಶಕ ಎ.ಆರ್ ಪ್ರಕಾಶ್ ಇದ್ದರು.  
ಕಾಲೇಜಿನ ಪ್ರಾಂಶುಪಾಲ ಎಸ್. ಉದಯ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ರಾಜೇಶ್ವರಿ ಸ್ವಾಗತಿಸಿದರು. ಕೆ. ಪದ್ಮ ವಂದಿಸಿದರು.
ನಂತರ ವಕೀಲೆ ಎಂ.ಎಸ್. ಸಾವಿತ್ರಿ ಉಪನ್ಯಾಸದಲ್ಲಿ ನೀಡಿದರು. ಸರ್ಕಾರಿ ಬಾಲಕಿಯರ ಬಾಲಮಂದಿರದ ಮಕ್ಕಳು ಬಾಲ್ಯ ವಿವಾಹ ಕುರಿತು ಕಿರುನಾಟಕ ಪ್ರದರ್ಶಿಸಿದರು.
ಮಹಿಳೆಯರ ಸ್ವಾವಲಂಬನೆಗೆ ತರಬೇತಿ ಕೇಂದ್ರ
ಮಹಿಳೆಯರ ಸ್ವಾವಲಂಬನೆಗೆ ನೆರವು ನೀಡಲು ವಿಶೇಷ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಕೆನರಾ ಬ್ಯಾಂಕ್ ಮೈಸೂರು ವಲಯದ ಉಪಮಹಾಪ್ರಬಂಧಕ ಡಾ.ಎಸ್.ಟಿ ರಾಮಚಂದ್ರ ಹೇಳಿದರು.ಕೆನರಾ ಬ್ಯಾಂಕ್‌ನ ಮೈಸೂರು ವೃತ್ತದ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗುವಂತೆ ಮಾಡುವ ಸಲುವಾಗಿ ಕೆನರಾ ಬ್ಯಾಂಕ್ ವತಿಯಿಂದ ಮಹಿಳಾ ಉದ್ಯಮಶೀಲರ ಅಭಿವೃದ್ಧಿ ಕೇಂದ್ರ ತೆರೆಯಲಾಗಿದೆ. ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ ಮಹಿಳೆಯರಿಗಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ. ಉದ್ಯೋಗ ತರಬೇತಿ ವೇಳೆ ವಸತಿ, ಊಟ ಮತ್ತಿತರ ಸೌಲಭ್ಯ ಕಲ್ಪಿಸಲಾಗಿದೆ ಎಂದರು.  ತರಬೇತಿ ಮುಗಿಸಿದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು. ಸ್ವಉದ್ಯೋಗಕ್ಕೆ ಅಗತ್ಯ ಸಾಲ ಒದಗಿಸಲಾಗುವುದು. ಈವರೆಗೆ 3 ಸಾವಿರ ಮಂದಿ ಮಹಿಳೆಯರಿಗೆ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡಲಾಗಿದೆ ಎಂದು ತಿಳಿಸಿದರು.  ಸಾಲ ಪಡೆಯುವ ಮಹಿಳೆಯರಿಗೆ 0.5 ಬಡ್ಡಿ ರಿಯಾಯಿತಿ ಕಲ್ಪಿಸಲಾಗಿದೆ. ಮಹಿಳೆಯರ ಶಿಕ್ಷಣಕ್ಕೂ ಸಾಲ ಒದಗಿಸಲಾಗುವುದು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಾಲ ನೀಡುವಲ್ಲಿ ಕೆನರಾ ಬ್ಯಾಂಕ್ ಮುಂಚೂಣಿಯಲ್ಲಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು. ನೇತ್ರತಜ್ಞೆ ಡಾ. ಮಣಿಕರ್ಣಿಕಾ, ಸಮಾಜ ಸೇವಕಿ ಹೇಮಮಾಲಿನಿ ಪಾಕರ್, ಕರಕುಶಲಕರ್ಮಿ ಇಂದಿರಾ ಹಾಗೂ ಗೃಹರಕ್ಷಕಿ ಶಿವರಂಜನಿ ಅವರನ್ನು ಸನ್ಮಾನಿಸಲಾಯಿತು.  ಕರ್ನಾಟಕ ರಾಜ್ಯ ಮುಕ್ತ ವಿವಿ ಸಹಾಯಕ ಪ್ರಾಧ್ಯಾಪಕಿ ಡಾ. ಕವಿತಾ ರೈ, ಕೆನರಾ ಬ್ಯಾಂಕ್ ಎಜಿಎಂ ಸತ್ಯನಾಥನ್, ಮಂಡ್ಯ ಶಾಖೆಯ ಮುಖ್ಯ ವ್ಯವಸ್ಥಾಪಕಿ ಲಲಿತಾ ಇದ್ದರು. ಗಾಯತ್ರಿ ಸ್ವಾಗತಿಸಿದರು. ವನಿತಾ ಗಡಿಯಾರ್ ವಂದಿಸಿದರು.
ಹೆಣ್ಣುಭ್ರೂಣ ಹತ್ಯೆ ನಿಲ್ಸಿ, ಬದುಕಲು ಬಿಡಿ..
ಹೆಣ್ಣುಭ್ರೂಣ ಹತ್ಯೆ ನಿಲ್ಲಿಸಿ ಬದುಕಲು ಬಿಡಿ. ಧಿಕ್ಕಾರ ಧಿಕ್ಕಾರ ಅತ್ಯಾಚಾರಿಗಳಿಗೆ ಧಿಕ್ಕಾರ, ಲಿಂಗಬೇಧ ಅಳಿಸೋಣ, ಮಾನವ ಸಂಬಂಧ ಬೆಳೆಸೋಣ. ಭ್ರಷ್ಟಾಚಾರ ಮುಕ್ತ ಸಮಾಜ ಮಹಿಳೆಯರ ಪ್ರಗತಿಗೆ ಒಳಿತು, ಹಿಂಸೆಮುಕ್ತ ಸಮಾಜಕ್ಕೆ ಕೈ ಜೋಡಿಸೋಣ. ಸಾಮಾಜಿಕ ಪ್ರಜ್ಞೆ ಇರುವ ವ್ಯಕ್ತಿಗೆ ನಮ್ಮ ಮತ..
- ಇದು ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನಚಾರಣೆ ಅಂಗವಾಗಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಏರ್ಪಡಿಸಿದ್ದ ಹಕ್ಕೊತ್ತಾಯದ ಜಾಥಾದಲ್ಲಿ ಫಲಕ ಹಿಡಿದು ಮಹಿಳೆಯರು ಜಾಗೃತಿ ಮೂಡಿಸಿದ ಪರಿ.
ರಾಮಸ್ವಾಮಿ ವೃತ್ತದಿಂದ ಹೊರಟ ಜಾಥಾವು, ಚಾಮರಾಜ ಜೋಡಿರಸ್ತೆಯಲ್ಲಿ ಸಾಗಿ, ಗನ್‌ಹೌಸ್ ಮುಖಾಂತರ ಮೈಸೂರು- ಊಟಿರಸ್ತೆಯ ಮೂಲಕ ದಸರಾ ವಸ್ತು ಪ್ರದರ್ಶನ ಮೈದಾನ ತಲುಪಿತು.  ಸಮತಾ ವೇದಿಕೆ, ಶಕ್ತಿಧಾಮ, ಸಮತಾ ಅಧ್ಯಯನ ಕೇಂದ್ರ, ಜನ ಶಿಕ್ಷಣ ಸಂಸ್ಥೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಆಶೋದಯ ಸಮಿತಿ, ಒಡನಾಡಿ, ಧ್ವನಿ ಮಹಿಳಾ ಒಕ್ಕೂಟ, ಪಿಯುಸಿಎಲ್, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ ಮುಂತಾದ ಸಂಟನೆಗಳ ಹಾಗೂ ಮಹಾರಾಣಿ, ನಟರಾಜ ಹಾಗೂ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮಹಿಳಾಪರ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.  ಒಕ್ಕೂಟದ ಮುಖಂಡರಾದ ಎಂ.ಎನ್. ಸುಮನಾ, ಸರಸ್ವತಿ, ಡಾ. ಕಮಲಾ ರಾಮನ್, ರತಿರಾವ್, ಭಾಗ್ಯ, ಮಮತಾ ರಾವ್, ಸುಮತಿ, ಶಶಿಕಲಾ, ಫಾತಿಮಾ ಮೇರಿ ಮುಂತಾದವರು ಇದ್ದರು.
ಬಹಿರಂಗ ಸಭೆ: ದಸರಾ ವಸ್ತು ಪ್ರದರ್ಶನದ ಬಿ.ವಿ. ಕಾರಂತ ರಂಗಮಂದಿರದಲ್ಲಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಹಿಳಾ ಪರ ಚಿಂತಕಿಯರಾದ ಮೀರಾ ನಾಯಕ್, ವಿಜಯ ದಬ್ಬೆ ಹಾಗೂ ಮಣಿಪುರದ ಚಿತ್ರಾ ಅಹಾಂತೆಂ, ಲೋರೆಂಬಮ್ ನ್ಯಾಂಬಿ ದೇವಿ ಹಾಗೂ ತಾಕೆಲ್ಲಂಬಮ್ ರೇಣುಬಾಲಾ ದೇವಿ ಅವರು ಪ್ರಸ್ತುತ ಮಹಿಳೆಯರ ಸ್ಥಿತಿಗತಿ ಕುರಿತು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement