ಕುವೆಂಪು ಪ್ರತಿಮೆಯಡಿ ತಿದ್ದುಪಡಿಯಾಯ್ತು ಸೂಕ್ತಿ
ಮೈಸೂರು: ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ನಿರ್ಮಿಸಿರುವ ರಾಷ್ಟ್ರಕವಿ ಕುವೆಂಪು ಪ್ರತಿಮೆಯಡಿ ತಪ್ಪಾಗಿ ಕೆತ್ತಿಸಲಾಗಿದ್ದ ಸೂಕ್ತಿಗಳನ್ನು ಸರಿಪಡಿಸಲಾಗಿದೆ.
ವಿಶ್ವಮಾನವ ಉದ್ಯಾನದಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ ಕುವೆಂಪು ಜ್ಞಾನತಾಣದ ಭವ್ಯವಾದ ಗೋಪುರದ ಕೆಳಗೆ ರಾಷ್ಟ್ರಕವಿ ಕುವೆಂಪು ಅವರ 9 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪಿಸಲಾಗಿದೆ. ಆ ಪ್ರತಿಮೆಯ ಪೀಠದ ನಾಲ್ಕು ಕಡೆಗಳಲ್ಲಿ ಕುವೆಂಪು ಅವರ ಸೂಕ್ತಿಗಳನ್ನು ಕೆತ್ತಿಸಲಾಗಿದೆ.
ಕಲಾವಿದರ ಅಜಾಗರೂಕತೆಯೋ ಅಥವಾ ಉಸ್ತುವಾರಿ ವಹಿಸಿದ್ದ ಅಧಿಕಾರಿಗಳ ಅಜ್ಞಾನವೋ ಅಂತೂ ಪ್ರತಿಮೆಯ ಪೀಠದ ಪೂರ್ವ ಭಾಗದಲ್ಲಿನ ಸೂಕ್ತಿಯಲ್ಲಿ ಕೊನೆ ಕೊಂಡಿತೊ ಓರೊರ್ವರ ಗರ್ವದ ಕಾಲ ಇದು ಸರ್ವರ ಕಾಲ ಎಂತಲೂ, ದಕ್ಷಿಣದ ಭಾಗದಲ್ಲಿನ ಸೂಕ್ತಿಯಲ್ಲಿ ನೇಗಿಲ ಗೆರೆಯೇ ಸಗ್ಗದ ಹಾದಿ. ಕರ್ಮವೆ ಬಾಗಿಲಿ ಹೊಯ್ಯುವ ಬೀದಿ ಎಂದು ತಪ್ಪಾಗಿ ಬರೆಯಲಾಗಿತ್ತು.
ವಿಶ್ವಮಾನವ ಸಂದೇಶ ಸಾರಿದ ಯುಗದ ಕವಿಯ ಈ ತಪ್ಪು ಸಂದೇಶದ ಪ್ರತಿಮೆಯನ್ನು ಫೆ.23 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಇದಾದ ಬಳಿಕ ಕುವೆಂಪು ಜ್ಞಾನತಾಣಕ್ಕೆ ಭೇಟಿ ನೀಡಿದ್ದ ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಅವರು ಈ ಸೂಕ್ತಿಯಲ್ಲಿ ಆಗಿರುವ ತಪ್ಪುಗಳನ್ನು ಪತ್ತೆ ಮಾಡಿ, ಮಾಧ್ಯಮದ ಮೂಲಕ ಮಹಾನಗರ ಪಾಲಿಕೆ ಕಾರ್ಯಕ್ಕೆ ಆಕ್ಷೇಪಿಸಿದ್ದರು. ಅಲ್ಲದೆ ಇದನ್ನು ಸರಿಪಡಿಸಿ ರಾಷ್ಟ್ರಕವಿಗೆ ಹಾಗೂ ಕವಿವಾಣಿಗೆ ಗೌರವ ತೋರುವಂತೆಯೂ ಸಲಹೆ ನೀಡಿದ್ದರು.
ಇದರಿಂದಾಗಿ ಎಚ್ಚೆತ್ತ ನಗರ ಪಾಲಿಕೆಯು, ಕವಿವಾಣಿಯಂತೆ ಕೊನೆಗಂಡಿತೊ ಓರೊರ್ವರ ಗರ್ವದ ಕಾಲ ಇದು ಸರ್ವರ ಕಾಲ ಎಂತಲೂ, ನೇಗಿಲ ಗೆರೆಯೇ ಸಗ್ಗದ ಹಾದಿ ಕರ್ಮವೇ ಬಾಗಿಲಿಗೊಯ್ಯುವ ಬೀದಿ ಎಂತಲೂ ಕೆತ್ತಿಸಿ ಸರಿಪಡಿಸಿರುವುದು ಕಂಡುಬಂದಿದೆ.
ಸ್ಥಗಿತಗೊಂಡ ಕಾಮಗಾರಿ: ಯುವಕರಿಂದ ವ್ಹೀಲಿಂಗ್
ಕುವೆಂಪು ಪ್ರತಿಮೆ ನಿರ್ಮಾಣಕ್ಕೆ ಹಲವು ವರ್ಷಗಳೇ ಕಳೆದದ್ದು, ಮಂದಗತಿಯಲ್ಲಿ ಕಾಮಗಾರಿ ನಡೆದದ್ದು, ಇದಾದ ನಂತರ ಪ್ರತಿಮೆ ಉದ್ಘಾಟನೆ ವಿಳಂಬವಾಗಿದ್ದು ತಿಳಿದ ಸಂಗತಿ. ಆದರೆ ಇಷ್ಟೆಲ್ಲದರ ಮಧ್ಯೆಯೂ ಕುವೆಂಪು ಜ್ಞಾನತಾಣ ಉದ್ಘಾಟನೆ ಕಂಡರೂ, ಬಾಕಿ ಉಳಿದಿರುವ ಕಾಮಗಾರಿಗಳು ಪೂರ್ಣಗೊಳ್ಳದೆ ಸ್ಥಗಿತವಾಗಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ತಂದಿದೆ.
ಈ ಆವರಣದಲ್ಲಿ ಕನ್ನಡದ ಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರು ಸೇರಿದಂತೆ ಎಲ್ಲಾ 8 ಮಂದಿ ಜ್ಞಾನಪೀಠ ಪುರಸ್ಕೃತರ ಸಮಗ್ರ ಸಾಹಿತ್ಯ ಒಳಗೊಂಡ ಸುಸಜ್ಜಿತ ಗ್ರಂಥಾಲಯ ಸ್ಥಾಪನೆಗೆ ಕಟ್ಟಡ ಸಿದ್ದಗೊಂಡಿದ್ದರೂ ಅದರೊಳಗಿನ ವಿನ್ಯಾಸ ಕಾರ್ಯ ಬಾಕಿ ಉಳಿದಿದೆ. ಇದನ್ನು ಶೀಘ್ರವಾಗಿ ಮುಗಿಸಿ ಸೇವೆಗೆ ಅರ್ಪಿಸಿದರೆ ತುಂಬ ಅನುಕೂಲವಾಗಲಿದೆ ಎಂಬುದು ವಿದ್ಯಾರ್ಥಿಗಳ ಆಶಯ. ಮುಖ್ಯಮಂತ್ರಿಗಳಿಂದ ಉದ್ಘಾಟಿಸಿ, ಪ್ರಚಾರ ಪಡೆದರೆ ಸಾಲದು. ಇದರ ಸಮಗ್ರ ಅಭಿವೃದ್ಧಿಗೆ ಜಿಲ್ಲಾಡಳಿತ ಆಸಕ್ತಿ ವಹಿಸಿ ನಿಗದಿತ ಸಮಯದೊಳಗೆ ಕಾಮಗಾರಿ ಪೂರೈಸುವಲ್ಲಿ ಮುಂದಾಗಬೇಕು. ಸ್ಥಳೀಯ ನಗರ ಪಾಲಿಕೆ ಸದಸ್ಯರೂ ಆದ ಆಡಳಿತ ಪಕ್ಷದ ನಾಯಕ ಕೆ.ವಿ.ಮಲ್ಲೇಶ್ ಅವರು ಸಹ ಆರಂಭದಲ್ಲಿ ತೋರಿಸಿದ ಉತ್ಸಾಹವನ್ನು ನಂತರವೂ ತೋರಿಸಿ ಇದರ ಸಂಪೂರ್ಣ ಯೋಜನೆಯ ಅನುಷ್ಠಾನಕ್ಕೆ ಆದ್ಯತೆ ವಹಿಸಬೇಕು. ಇದಕ್ಕೆ ನಗರ ಪಾಲಿಕೆ ಆಯುಕ್ತರು ಹಾಗೂ ಮೇಯರ್ ಸಹ ಕೈಜೋಡಿಸಬೇಕು.
ಗೋಪುರದ ಮುಂಭಾಗ ಯುವಕರು ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್ ನಡೆಸುತ್ತಿದ್ದು, ಇದರಿಂದ ಉದ್ಯಾನಕ್ಕೆ ಬರುವ ಹಿರಿಯ ನಾಗರಿಕರು ಆತಂಕ ಹಾಗೂ ಮುಜುಗರ ಪಡುವಂತಾಗಿದೆ. ಆದ್ದರಿಂದ ಕೂಡಲೇ ಮಂಟಪದ ಸುತ್ತ ರೇಲಿಂಗ್ಸ್ ಅಳವಡಿಸುವುದು ಅವಶ್ಯಕ.
-ಮಾ.ವೆಂಕಟೇಶ್