ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪ್ರತ್ಯೇಕ ಪ್ರಕರಣ: ಮೂವರು ನಾಪತ್ತೆ

Vishwanath S
Updated On : 12 Mar 2014, 1:25 am

ಮೈಸೂರು: ನಗರದ ಸರಸ್ವತಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ನಾಪತ್ತೆಯಾಗಿದ್ದಾರೆ.
ರಮೇಶ ಎಂಬವರ ಪುತ್ರಿ ವಿ.ಆರ್. ಧನಲಕ್ಷ್ಮಿ (21) ಕಾಣೆಯಾಗಿದ್ದಾರೆ. ಇವರು ಕೆ.ಜಿ. ಕೊಪ್ಪಲಿನಲ್ಲಿರುವ ಸಹೋದರಿ ಅನಸೂಯ ಅವರ ಮನೆಯಲ್ಲಿ ಉಳಿದುಕೊಂಡಿದ್ದು, ಫೆ.26 ರಂದು ಊರಿಗೆ ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 6 ಅಡಿ ಎತ್ತರ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾರೆ.
ಕೆ.ಜಿ. ಕೊಪ್ಪಲಿನಲ್ಲಿ ವಾಸವಾಗಿದ್ದ ಆನಂದ ಎಂಬವರ ಪತ್ನಿ ಭಾಗ್ಯ (27) ಕಾಣೆಯಾಗಿದ್ದಾರೆ. ಇವರಿಗೆ ಆನಂದ ಎಂಬವರೊಂದಿಗೆ ಮದುವೆಯಾಗಿದ್ದು, ಕೃತಿ ಎಂಬ ಮೂರುವರೆ ವರ್ಷದ ಹೆಣ್ಣು ಮಗುವಿದೆ. ಭಾಗ್ಯ ಮಾನಸಿಕ ಅಸ್ವಸ್ಥತೆಯಾದ ಕಾರಣ ಪತಿ ಬಿಟ್ಟು ಹೋಗಿದ್ದು, ಕೆ.ಜಿ. ಕೊಪ್ಪಲಿನಲ್ಲಿರುವ ಸಹೋದರನ ಮನೆಯಲ್ಲಿ ವಾಸವಾಗಿದ್ದರು. ಚಹರೆ- 5.6 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾರೆ.
ಕೆಂಪರಾಜು ಎಂಬವರ ಪುತ್ರ ಕೆ. ಮಹೇಶ (18) ಕುಶಾಲನಗರಕ್ಕೆ ಕೆಲಸಕ್ಕೆ ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 5.5 ಅಡಿ ಎತ್ತರ, ಗುಂಡು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕನ್ನಡ ಮಾತನಾಡುತ್ತಾರೆ. ಕಾಣೆಯಾಗಿರುವ ಈ ಮೂವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418123, 323 ಸಂಪರ್ಕಿಸಿ.
ಸರ್ವಜನಾಂಗ ವೇದಿಕೆಗೆ ನೇಮಕ
ಮೈಸೂರು: ಸರ್ವಜನಾಂಗ ಹಿತರಕ್ಷಣಾ ವೇದಿಕೆಯ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳಾಗಿ ಈ ಕೆಳಕಂಡವರನ್ನು ನೇಮಕ ಮಾಡಲಾಗಿದೆ.
ವಿಜಯಕುಮಾರ್ (ಗೌರವಾಧ್ಯಕ್ಷರು), ನಂಜುಂಡಸ್ವಾಮಿ (ಕಾರ್ಯಾಧ್ಯಕ್ಷರು), ಸಗೀರ್ ಅಹಮ್ಮದ್ ಷರೀಫ್ (ಕೋಶಾಧ್ಯಕ್ಷರು), ಎಂ. ಮಹದೇವ್ (ಮಹಾಪ್ರಧಾನ ಕಾರ್ಯದರ್ಶಿ), ಮಕ್ಬುಲ್ ಅಹಮ್ಮದ್ ಪಕಾತಿ, ಅಬ್ದುಲ್ ಅಜಿ, ಜೆಡ್.ಬಿ. ಪ್ಯಾರೇಜನ್, ಎಂ.ಆರ್. ಮತೀನ್ ಉಲ್ಲಾ ಷರೀಫ್, ವೈರಾಜಪ್ಪ, ಪಾಪಣ್ಣ (ಉಪಾಧ್ಯಕ್ಷರು), ನಿಸಾರ್ ಅಹಮ್ಮದ್, ಸಾಹಿದಾ ಬದ್ರುನ್ನಿಸಾ (ಪ್ರಧಾನ ಕಾರ್ಯದರ್ಶಿಗಳು), ಬಸವರಾಜು, ಸೈಯದ್ ಝಬಿ, ಅಬ್ದುಲ್ ರೆಹಮನ್, ಸೈಯದ್ ಪರ್‌ವೀಜ್ (ಕಾರ್ಯದರ್ಶಿ), ಎಂ. ಮಹದೇವ್, ಹಫೀಜುಲ್ಲಾ ಷರೀಫ್, ಹಫೀಝ್ ರಹಮಾನ್, ಸಿಕಂದರ್, ಗಿರೀಶ್, ರವಿ (ಸಂಘಟನಾ ಕಾರ್ಯದರ್ಶಿಗಳು). ಮೊಹಮ್ಮದ್ ಇಕ್ಬಾಲ್, ಡಿ. ಮಹದೇವಸ್ವಾಮಿ, ಮೋಹನ್‌ಕುಮಾರ್, ಅಬ್ದುಲ್ ಗಫರ್, ಎಕ್ಬಾಲ್ ಅಹಮ್ಮದ್, ಅಸ್ಗರ್ ಅಹಮ್ಮದ್, ಮನೋಹರ್, ಜಾಜ್ ಪ್ರಭಾಕರ್, ಬಾಲಚಂದ್ರ, ಮಹಾಲಿಂಗಯ್ಯ, ಶಿವಣ್ಣ, ಜವಾದ್, ಅಬ್ದುಲ್ ಬಾಸಿದ್, ಅನ್ವರ್, ಆದಿಲ್, ಜುಭೇರ್, ಅಬ್ದುಲ್ ಜಮೀರ್, ನಯೀಪಾಷ, ಅಬ್ದುಲ್ ಅಜೀಜ್ (ಕಾರ್ಯಕಾರಿ ಸಮಿತಿ ಸದಸ್ಯರು).
ಕನ್ನಂಬಾಡಿ ಅಮ್ಮನವರ ಜಾತ್ರೆ
ಪಿರಿಯಾಪಟ್ಟಣ: ಪಿರಿಯಾಪಟ್ಟಣದ ಗ್ರಾಮದೇವತೆಗಳಲ್ಲಿ ಒಂದಾದ ಶ್ರೀ ಕನ್ನಂಬಾಡಿ ಅಮ್ಮನವರ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.ಬೆಳಗ್ಗಿನಿಂದಲೇ ದೇವಾಲಯದಲ್ಲಿ ವಿವಿಧ ರೀತಿಯ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳು ನಡೆದ ನಂತರ ದೇವರನ್ನು ಹೂವಿನಿಂದ ಅಲಂಕರಿಸಲ್ಪಟ್ಟ ರಥದಲ್ಲಿ ಕೂರಿಸಿ, ನೂರಾರು ಸಂಖ್ಯೆಯಲ್ಲಿದ್ದ ಭಕ್ತಾದಿಗಳು ರಥವನ್ನು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಜಾತ್ರೆಯ ಅಂಗವಾಗಿ ವಿವಿಧ ಸಂಘಟನೆಗಳ ವತಿಯಿಂದ ಪಾನಕ, ಮಜ್ಜಿಗೆ ವಿತರಿಸಿದರು.
ಅಕ್ರಮ ಮದ್ಯ ಕಂಡಲ್ಲಿ ಮಾಹಿತಿ ನೀಡಿ: ಮನವಿ
ಪಿರಿಯಾಪಟ್ಟಣ: ಅಬಕಾರಿ ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕರು ಅಬಕಾರಿ ನಿರೀಕ್ಷಕ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ನಿಯಂತ್ರಣ ಕೊಠಡಿಗೆ ದೂರು ನೀಡುವಂತೆ ಅಬಕಾರಿ ನಿರೀಕ್ಷಕ ಎ.ವಿ. ಗಿರೀಶ್ ಹೇಳಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಕ್ರಮವಾಗಿ ಮದ್ಯದ ತಯಾರಿಕೆ, ಅಕ್ರಮವಾಗಿ ಮದ್ಯ ದಾಸ್ತಾನು ಮಾಡುವುದು, ಅಕ್ರಮವಾಗಿ ಮದ್ಯ ಸಾಗೆ ಮಾಡುವುದು, ಮತದಾರರಿಗೆ ಮದ್ಯ ಹಂಚುವುದು ಕಂಡುಬಂದಲ್ಲಿ ಸಾರ್ವಜನಿಕರು ಪಟ್ಟಣದ ಬೆಟ್ಟದಪುರ ರಸ್ತೆಯಲ್ಲಿರುವ ಅಬಕಾರಿ ಕಚೇರಿಯಲ್ಲಿ ಆರಂಭಿಸಿರುವ 24 ಗಂಟೆಗಳು ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿ ದೂ. 08223-273373 ಅಥವಾ ಹುಣಸೂರು ಕಚೇರಿ- 08222-2252434 ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.
ನಾಳೆ ದೂರವಾಣಿ ಗ್ರಾಹಕರ ಸಮಾವೇಶ
ಕೆ.ಆರ್. ನಗರ: ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಮಾ.13 ರಂದು ದೂರವಾಣಿ ಗ್ರಾಹಕರ ಸಮಾವೇಶ ಏರ್ಪಡಿಸಿದೆ. ಅಂದು ಮಧ್ಯಾಹ್ನ 3.30ಕ್ಕೆ ಮೈಸೂರು ವೃತ್ತದ ಬಿಎಸ್‌ಎನ್‌ಎಲ್ ಉಪ-ಮಹಾ ಪ್ರಬಂಧಕ ಆನಂದರಾವ್ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ದೂರ ಸಂಪರ್ಕ ಸೇವೆಯಲ್ಲಿನ ತೊಂದರೆಗಳ ಬಗ್ಗೆ ಚರ್ಚಿಸಿ ಸೇವೆಯ ಅಭಿವೃದ್ಧಿ ಬಗ್ಗೆ ಸಲಹೆ ನೀಡಿದರು. ಸಮಾವೇಶಕ್ಕೆ ತಾಲೂಕಿನ ಬಿಎಸ್‌ಎನ್‌ಎಲ್ ಗ್ರಾಹಕರು ಪಾಲ್ಗೊಂಡು ತಮ್ಮ ಸಲಹೆ ಸೂಚನೆ ನೀಡಬೇಕೆಂದು ಕೇಂದ್ರದ ಉಪ-ವಿಭಾಗೀಯ ಎಂಜಿನಿಯರ್ ಅರುಣ್ ಬಿ. ನರಗುಂದ್ ಕೋರಿದ್ದಾರೆ.
ಎಸ್‌ಸಿಗೆ ಸೇರಿಸಲು ಸವಿತಾ ಸಮಾಜದವರ ಪ್ರತಿಭಟನೆ
ಮೈಸೂರು: ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಆಗ್ರಹಿಸಿ ಮೈಸೂರು ಜಿಲ್ಲಾ ಸವಿತಾ ಸಮಾಜದವರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.
ಸವಿತಾ ಸಮಾಜವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಶೋಷಣೆಗೆ ಒಳಪಟ್ಟಿದೆ. ನಮ್ಮ ಸಮಾಜವನ್ನು ಹೀನಾಯವಾಗಿ ನಡೆಸಲಾಗುತ್ತಿದೆ. ನಮ್ಮ ಕ್ಷೌರಿಕ ವೃತ್ತಿಯನ್ನು ಹೀನಾಯವಾಗಿ ಕಾಣಲಾಗುತ್ತಿದೆ. ನಮ್ಮ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸವಿತಾ ಸಮಾಜಕ್ಕಾಗಿ ನಿಗಮ ಮಂಡಳಿ ಸ್ಥಾಪಿಸಬೇಕು. ಮನೆ ಇಲ್ಲದವರಿಗೆ ಮನೆ ದೊರಕಿಸಿ ಕೊಡಬೇಕು. ನಮ್ಮ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.
ಸಮಾಜದ ಅಧ್ಯಕ್ಷ ಎ.ಎಂ. ನಾಗರಾಜು, ಮುಖಂಡರಾದ ಎಸ್. ನಾಗಪ್ಪ, ಕೃಷ್ಣಪ್ಪ, ಮಾದಪ್ಪ, ಗಣೇಶ, ಶಂಕರ್, ಗಣಪತಿ ಮಹಲೆ, ರಮೇಶ್, ಹರೀಶ್, ಸೋಮು, ನಾರಾಯಣ್, ಪಾರ್ಥಸಾರಥಿ, ಸೌಭಾಗ್ಯ, ಪಿ. ಶೋಭಾ, ಶಾಂತಮ್ಮ, ರೇಖಾ, ಆರತಿ, ಶ್ರೀನಿವಾಸ್, ಅಶೋಕ್, ಸಂಪತ್‌ಕುಮಾರ್, ಪುಟ್ಟರಾಜು, ಕೃಷ್ಣ, ರಾಜಪ್ಪ, ನಾಗೇಂದ್ರ, ರೇವಣ್ಣ, ಅಸೋಕ್, ಮಾದಪ್ಪ, ಶಂಕರ್, ಚಂದ್ರು, ಭಾಸ್ಕರ್, ರಮೇಶ್ ಇದ್ದರು.
ಹುತಾತ್ಮ ರೈತನಿಗೆ ಪರಿಹಾರ:ಬಣ್ಣಾರಿ ಕಾರ್ಖಾನೆ ಸಮ್ಮತಿ
ಮೈಸೂರು: ಬೆಳಗಾವಿಯ ಹುತಾತ್ಮ ರೈತನ ಕುಟುಂಬಕ್ಕೆ ನೆರವಾಗಲು ರೈತರ ಕಬ್ಬಿನಿಂದ ಟನ್‌ಗೆ 1 ನಂತೆ ಕಡಿತ ಮಾಡಲು ಬಣ್ಣಾರಿ ಸಕ್ಕರೆ ಕಾರ್ಖಾನೆ ಸಮ್ಮತಿ ಸೂಚಿಸಿದೆ ಎಂದು ಕಬ್ಬು ಬೆಳೆಗಾರರ ಸಂಘ ತಿಳಿಸಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಹಾರ ಉಪನಿರ್ದೇಶಕ ಕಾ.ರಾಮೇಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಖಾನೆಯ ಉಪಾಧ್ಯಕ್ಷ ವೆಂಕಟೇಶಮೂರ್ತಿ ಒಪ್ಪಿಗೆ ನೀಡಿದರು. ಅಲ್ಲದೇ ಕಾರ್ಖಾನೆಯವರು ರೈತರ ಕಬ್ಬಿನ ಹಣವನ್ನು ಕಾನೂನು ಬದ್ಧವಾಗಿ 15 ದಿನಗಳೊಳಗೆ ಪಾವತಿಸಿಲ್ಲ. ಆದ ಕಾರಣ ಬಡ್ಡಿ ಕೊಡಿಸಬೇಕೆಂಬ ರೈತರ ಬೇಡಿಕೆಗೆ ಇನ್ನೆರಡು ದಿನದಲ್ಲಿ ನಿರ್ಧಾರ ಪ್ರಕಟಿಸುವುದಾಗಿ ಮಾಲೀಕರು ತಿಳಿಸಿದರು.
ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕಬ್ಬು ಬೆಲೆ ನಿಗದಿ ಮಾಡಿ ಆದೇಶ ಹೊರಡಿಸಿದಾಗ ಕಬ್ಬು ಕಟಾವು ಕೂಲಿ 300 ಇತ್ತು. ಈಗ 600 ಆಗಿದೆ. ಸಾಗಾಣಿಕೆ ವೆಚ್ಚ ಏರಿಸಲಾಗಿದ್ದು, ಇದಕ್ಕೆ ಯಾರ ಅನುಮತಿಯನ್ನು ಪಡೆದಿಲ್ಲ. ಕಾರ್ಖಾನೆಯವರು ಟನ್ ಕಬ್ಬಿಗೆ 100 ನೀಡುವುದಾಗಿ ಆದೇಶಿಸಿ ಐದು ತಿಂಗಳೇ ಕಳೆದಿದ್ದರೂ ಸಹ ಆ ಹಣ ರೈತರಿಗೆ ತಲುಪಿಲ್ಲ ಎಂದು ದೂರಿದರು. ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಮಹಾಂತೇಶಪ್ಪ, ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಕೃಷ್ಣನ್, ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಕಿರಗಸೂರು ಶಂಕರ್, ನಾರಾಯಣ್, ಪುರುಷೋತ್ತಮ್, ಎಂ.ಕೆ. ರಂಗಸ್ವಾಮಿ, ಮರಿಸ್ವಾಮಿ ಇದ್ದರು.
ಸಿಐಐ ಯಂಗ್ ಇಂಡಿಯನ್ಸ್ ಘಟಕ ಚಾಲನೆ
ಮೈಸೂರು: ಭಾರತೀಯ ಕೈಗಾರಿಕಾ ಒಕ್ಕೂಟದ ಅಂಗ ಸಂಸ್ಥೆಯಾದ ಯಂಗ್ ಇಂಡಿಯನ್ಸ್‌ನ 33ನೇ ಘಟಕವಾದ ಮೈಸೂರು ಕೇಂದ್ರವನ್ನು ಮುಂದಿನ ಏಪ್ರಿಲ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಸಿಐಐ ಮೈಸೂರು ಘಟಕದ ಅಧ್ಯಕ್ಷ ಆರ್.ಸಿ. ಜಗದೀಶ್ ಹೇಳಿದ್ದಾರೆ.
ಯಂಗ್ ಇಂಡಿಯನ್ಸ್ ಸರ್ಕಾರೇತರ ಸಂಸ್ಥೆಯಾಗಿದ್ದು, ಲಾಭಕ್ಕಾಗಿ ಅಲ್ಲದೆ ಭಾರತದ ಅಭಿವೃದ್ಧಿಯಲ್ಲಿ ಕೈಗಾರಿಕೆ ಪಾತ್ರ ಹಾಗೂ ನಿರ್ವಹಣೆಗಾಗಿ ಕಾರ್ಯನಿರ್ವಹಿಸಲಿದೆ. ಈ ಸಂಸ್ಥೆಯನ್ನು 2002ರಲ್ಲಿ ಆರಂಭಿಸಲಾಯಿತು. ಯುವಮನಸ್ಸುಗಳಿಗೆ ಸೂಕ್ತ ವೇದಿಕೆ ನಿರ್ಮಿಸುವುದು, ಈ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿ ಹಾಗೂ ಯುವ ಕನಸುಗಳ ನನಸಿಗೆ ಶ್ರಮಿಸುವುದೇ ಆಗಿದೆ ಎಂದಿದ್ದಾರೆ.
ಸಿಐಐ ಮೈಸೂರು ಘಟಕ ಆರಂಭಿಸಿದಾಗ 25 ರಿಂದ 40 ವರ್ಷದೊಳಗಿನವರೆ ಹೆಚ್ಚಾಗಿ ಸದಸ್ಯತ್ವ ಪಡೆದುಕೊಂಡರು. ಈಗ ಪ್ರತ್ಯೇಕವಾಗಿ ಯಂಗ್ ಇಂಡಿಯನ್ಸ್ ಘಟಕ ಆರಂಭವಾಗುತ್ತಿರುವುದು ನಮಗೆ ಖುಷಿಯ ವಿಚಾರವಾಗಿದೆ. ಇದು ಉದ್ಯಮಶೀಲತೆ ಬೆಂಬಲಿಸುವುದು, ನಾಯಕತ್ವ ಗುಣ, ಕೌಶಲ್ಯ ಬೆಳೆಸುವುದು, ಕಲಿಕಾ ಕಾರ್ಯಕ್ರಮ ರೂಪಿಸುವುದು, ಜಾಗತಿಕ ಮಟ್ಟದ ಶ್ರೇಷ್ಠ ಕಂಪನಿಗಳೊಂದಿಗೆ ಬಾಂಧವ್ಯ ಬೆಳೆಸುವು ಇರಾದೆ ಇಟ್ಟುಕೊಂಡಿದೆ. ಮೈಸೂರಿನಲ್ಲಿ ಶಿಕ್ಷಣ, ಪರಿಸರ, ಆರೋಗ್ಯ ಸುಧಾರಣೆ, ಉದ್ಯೋಗ ಸೃಷ್ಟಿ ಹಾಗೂ ಕಲಾ ಕ್ಷೇತ್ರದತ್ತ ಗಮನಹರಿಸಲು ಚಿಂತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement