ಹೆಚ್ಚು ಬಾರಿ ಸಂಸದರಾಗಿದ್ದವರು
ಮೈಸೂರು: ಮೈಸೂರು ಸಾಮಾನ್ಯ ಲೋಕಸಭಾ ಕ್ಷೇತ್ರದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ವಿ.ಶ್ರೀನಿವಾಸಪ್ರಸಾದ್ ಅತಿ ಹೆಚ್ಚು ಬಾರಿ ಸಂಸದರು. ನಂತರದ ಸ್ಥಾನ ಕ್ರಮವಾಗಿ ಎಚ್.ಡಿ. ತುಳಸೀದಾಸ್ ಹಾಗೂ ಎಸ್.ಎಂ. ಸಿದ್ದಯ್ಯ ಅವರಿಗೆ ಸಲ್ಲುತ್ತದೆ.
ಮೈಸೂರಿನಿಂದ ಎಂ.ಎಸ್. ಗುರುಪಾದಸ್ವಾಮಿ, ಎನ್. ರಾಚಯ್ಯ, ಎಸ್.ಎಂ. ಸಿದ್ದಯ್ಯ, ಎಂ. ರಾಜಶೇಖರಮೂರ್ತಿ, ಚಂದ್ರಪ್ರಭಾ ಅರಸು, ಎಚ್.ವಿಶ್ವನಾಥ್ ತಲಾ ಒಂದು ಬಾರಿ, ಎಂ. ಶಂಕರಯ್ಯ, ಸಿ.ಎಚ್. ವಿಜಯಶಂಕರ್ ತಲಾ ಎರಡು ಬಾರಿ, ಎಚ್.ಡಿ. ತುಳಸೀದಾಸ್ ಮೂರು ಬಾರಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ.
ಚಾಮರಾಜನಗರದಿಂದ ಬಿ.ರಾಚಯ್ಯ, ಕಾಗಲವಾಡಿ ಎಂ. ಶಿವಣ್ಣ, ಆರ್. ಧ್ರುವನಾರಾಯಣ ತಲಾ ಒಂದು ಬಾರಿ, ಎ.ಸಿದ್ದರಾಜು ಎರಡು, ಎಸ್.ಎಂ. ಸಿದ್ದಯ್ಯ ಮೂರು, ವಿ. ಶ್ರೀನಿವಾಸಪ್ರಸಾದ್ ಐದು ಬಾರಿ ಆಯ್ಕೆಯಾಗಿದ್ದಾರೆ.
ಮೊದಲೆಲ್ಲಾ ಐದು ವರ್ಷಗಳಿಗೊಮ್ಮೆ ಚುನಾವಣೆಗಳು ನಡೆಯುತ್ತಿದ್ದವು. ಆದರೆ ವಿ.ಪಿ. ಸಿಂಗ್ ಸರ್ಕಾರ ಪತನಾನಂತರ 1991 ರಲ್ಲಿ, ಎಚ್.ಡಿ. ದೇವೇಗೌಡ, ಐ.ಕೆ. ಗುಜ್ರಾಲ್ ಸರ್ಕಾರ ಪತನಾನಂತರ 1998, ಎ.ಬಿ. ವಾಜಪೇಯಿ ಸರ್ಕಾರ ಪತನಾನಂತರ 1999 ರಲ್ಲಿ ಚುನಾವಣೆಗಳು ಅವಧಿಪೂರ್ವ ನಡೆದಿದ್ದರಿಂದ ಕೆಲವರು ಐದು ವರ್ಷ ಪೂರೈಸಿಲ್ಲ.
ಎಸ್.ಎಂ. ಸಿದ್ದಯ್ಯ ವರು ಮೈಸೂರಿಂದ ಒಮ್ಮೆ ಹಾಗೂ ಚಾಮರಾಜನಗರದಿಂದ ಮೂರು ಬಾರಿ ಒಟ್ಟು ಸತತ ನಾಲ್ಕು ಬಾರಿ ಆಯ್ಕೆಯಾಗಿ 20 ವರ್ಷ ಸಂಸದರಾಗಿದ್ದರು. ಶ್ರೀನಿವಾಸಪ್ರಸಾದ್ ಸತತ ನಾಲ್ಕು ಬಾರಿ ಸೇರಿದಂತೆ ಒಟ್ಟು 5 ಬಾರಿ ಸಂಸದರಾಗಿದ್ದರೂ ಅವರಿಗೆ ಸಿಕ್ಕಿದ್ದು 20 ವರ್ಷ ಮಾತ್ರ. ಮೈಸೂರಿನಿಂದ ಒಡೆಯರ್ 4 ಬಾರಿ ಗೆದ್ದಿದ್ದರೂ ಅವರಿಗೆ ಸಿಕ್ಕಿದ್ದು 17 ವರ್ಷ. ಎಚ್.ಡಿ. ತುಳಸೀದಾಸ್ ಸತತ 3 ಬಾರಿ ಆಯ್ಕೆಯಾಗಿ 14 ವರ್ಷ ಪೂರೈಸಿದ್ದಾರೆ.
ಮೈಸೂರಿನಿಂದ ಎಂ. ಶಂಕರಯ್ಯ 2 ಬಾರಿ ಆಯ್ಕೆಯಾಗಿ 10 ವರ್ಷ ಪೂರೈಸಿದ್ದರೆ ವಿಜಯಶಂಕರ್ 2 ಬಾರಿಯಿಂದ ಸಿಕ್ಕಿದ್ದು ಕೇವಲ 6 ವರ್ಷ. ಚಾಮರಾಜನಗರದಲ್ಲಿ ಸತತ 2 ಬಾರಿ ಆಯ್ಕೆಯಾದ ಎ. ಸಿದ್ದರಾಜುಗೆ ಸಿಕ್ಕಿದ್ದು 3 ವರ್ಷ ಮಾತ್ರ. 1977 ರಲ್ಲಿ ಜನತಾ ಪಕ್ಷದ ಮೊರಾರ್ಜಿ ದೇಸಾಯಿ ಸರ್ಕಾರ, ನಂತರ ಬಂದ ಚರಣ್ಸಿಂಗ್ ಸರ್ಕಾರ ಉರುಳಿದ್ದರಿಂದ ಬಿ.ರಾಚಯ್ಯ ಹಾಗೂ ತುಳಸೀದಾಸ್ ಅವರಿಗೆ ಒಂದು ವರ್ಷ ಕಡಿಮೆಯಾಗಿತ್ತು.
ನಂತರ- ಮೊದಲು ಏನಾಯ್ತು?: ಎಂ.ಎಸ್. ಗುರುಪಾದಸ್ವಾಮಿ 1957, 1977- 1980- ಹೀಗೆ ಮೂರು ಬಾರಿ ಮರಳಿ ಯತ್ನ ಮಾಡಿದರೂ ಮತ್ತೆ ಗೆಲ್ಲಲಾಗಲಿಲ್ಲ. ಆದರೆ ಅವರು ರಾಜ್ಯದಿಂದ ಮೂರು ಬಾರಿ, ಉತ್ತರ ಪ್ರದೇಶದಿಂದ ಒಮ್ಮೆ ರಾಜ್ಯಸಭಾ ಸದಸ್ಯರಾಗಿ ಇಂದಿರಾಗಾಂಧಿ, ವಿ.ಪಿ. ಸಿಂಗ್ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ರಾಜ್ಯಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ನಾಯಕರಾಗಿದ್ದರು.
ಎನ್. ರಾಚಯ್ಯ ಅವರು ಮತ್ತೆ ಲೋಕಸಭೆಗೆ ಸ್ಪರ್ಧಿಸಲಿಲ್ಲ. ಆದರೆ ಹುಣಸೂರು ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಡಿ. ದೇವರಾಜ ಅರಸು ಅವರ ಜೊತೆ ವಿಧಾನಸಭೆಗೆ ಆಯ್ಕೆಯಾಗಿ, ಬಿ.ಡಿ. ಜತ್ತಿ ಸಂಪುಟದಲ್ಲಿ ಸಚಿವರಾಗಿದ್ದರು. 1970 ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಡಿ. ದೇವರಾಜ ಅರಸು ಸಂಪುಟದಲ್ಲಿ ಸಚಿವರಾಗಿದ್ದರು.
ಶಂಕರಯ್ಯ 2 ಬಾರಿ ಆಯ್ಕೆಯಾದ ನಂತರ ಮತ್ತೆ ಲೋಕಸಭೆಗೆ ಸ್ಪರ್ಧಿಸಲಿಲ್ಲ. ಇದಕ್ಕೂ ಮೊದಲು ಪ್ರಜಾಪ್ರತಿನಿಧಿ ಸಭೆ, ನಂತರ ಮೇಲ್ಮನೆ ಸದಸ್ಯರಾಗಿದ್ದರು. ಎಸ್.ಎಂ. ಸಿದ್ದಯ್ಯ 4 ಬಾರಿ ಲೋಕಸಭೆಗೆ ಆಯ್ಕೆಯಾಗಿ ಒಮ್ಮೆ ಸೋತರು. ನಂತರ ಸ್ಪರ್ಧಿಸಲಿಲ್ಲ. ಎಚ್.ಡಿ. ತುಳಸೀದಾಸ್ ಸತತ 3 ಬಾರಿ ಗೆದ್ದು, 1980 ರಲ್ಲಿ ಸೋತರು. ನಂತರ ರಾಜಕಾರಣದಿಂದ ದೂರ ಉಳಿದರು. ಎಂ. ರಾಜಶೇಖರಮೂರ್ತಿ ಒಮ್ಮೆ ಗೆದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್- ಹೀಗೆ ಮೂರು ಪಕ್ಷಗಳಿಂದಲೂ ತಲಾ ಒಮ್ಮೆ ರಾಜ್ಯಸಭಾ ಸದಸ್ಯರಾಗಿದ್ದರು. 1952 ರಿಂದ 1972 ರವರೆಗೆ ಯಳಂದೂರು, ಟಿ. ನರಸೀಪುರ, 1989 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಕೇಂದ್ರ ಭೂಸಾರಿಗೆ ಸಚಿವರಾಗಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 4 ಬಾರಿ ಗೆದ್ದು, 2 ಬಾರಿ ಸೋತರು. ಚಂದ್ರಪ್ರಭಾ ಅರಸು ಒಮ್ಮೆ ಮಾತ್ರ ಗೆದ್ದು, ರಾಜ್ಯ ರಾಜಕಾರಣಕ್ಕೆ ಮರಳಿದರು. ಆದರೆ ಅಲ್ಲಿ ಗೆಲ್ಲಲಾಗಲಿಲ್ಲ.
ಸಿ.ಎಚ್. ವಿಜಯಶಂಕರ್ 2 ಬಾರಿ ಗೆದ್ದು, ಎರಡು ಬಾರಿ ಸೋತಿದ್ದಾರೆ. ಇದಕ್ಕೂ ಮೊದಲು ಅವರು ಹುಣಸೂರಿನಿಂದ ಒಂದು ಅವಧಿಗೆ ಶಾಸಕರಾಗಿದ್ದರು. ಮೇಲ್ಮನೆ ಸದಸ್ಯರಾಗಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು. ಹಾಲಿ ಮೇಲ್ಮನೆ ಸದಸ್ಯರು. ವಿಶ್ವನಾಥ್ ಪ್ರಥಮ ಬಾರಿಯೇ ಲೋಕಸಭಾ ಚುನಾವಣೆಯಲ್ಲಿ ಗೆಲವು. ಕೆ.ಆರ್. ನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಮೂರು ಬಾರಿ ಗೆದ್ದಿದ್ದರು. ಮೊಯ್ಲಿ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದರು.
ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ: ಬಿ. ರಾಚಯ್ಯ ಚಾಮರಾಜನಗರ, ಸಂತೇಮರಹಳ್ಳಿಯಿಂದ ವಿಧಾನಸಭೆಗೆ ಆಯ್ಕೆಯಾಗಿ, ಹಲವು ಬಾರಿ ಸಚಿವರಾಗಿದ್ದರು. ಕೇಂದ್ರದಲ್ಲಿ ಚರಣ್ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದರು. ರಾಜ್ಯ ಜನತಾದಳ ಅಧ್ಯಕ್ಷರಾಗಿದ್ದರು. ಹಿಮಾಚಲ ಪ್ರದೇಶ ಹಾಗೂ ಕೇರಳದ ರಾಜ್ಯಪಾಲರಾಗಿದ್ದರು.ವಿ. ಶ್ರೀನಿವಾಸಪ್ರಸಾದ್ ಅವರು ಚಾಮರಾಜನಗರಿಂದ ಐದು ಬಾರಿ ಸಂಸದರು. ಕೇಂದ್ರದಲ್ಲಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು. ಕೃಷ್ಣರಾಜ, ಟಿ.ನರಸೀಪುರದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದ ಅವರು ಎರಡು ಬಾರಿ ನಂಜನಗೂಡಿನಿಂದ ಆಯ್ಕೆಯಾಗಿದ್ದಾರೆ.
ಎ.ಸಿದ್ದರಾಜು ಎರಡು ಬಾರಿ ಸಂಸದರಾದರು. ಒಮ್ಮೆ ಸೋತರು. ಮತ್ತೆ ಟಿಕೆಟ್ ಸಿಗಲಿಲ್ಲ. ಸಂತೇಮರಹಳ್ಳಿಯಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದ ಕಾಗಲವಾಡಿ ಶಿವಣ್ಣ ಒಮ್ಮೆ ಸಂಸದರಾಗಿದ್ದರು. ನಂತರ ಟಿಕೆಟ್ ಸಿಗಲಿಲ್ಲ. ಹಾಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು. ಧ್ರುವನಾರಾಯಣ ಒಮ್ಮೆ ಸಂತೇಮರಹಳ್ಳಿ, ಮತ್ತೊಮ್ಮೆ ಕೊಳ್ಳೇಗಾಲದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಪ್ರಥಮ ಬಾರಿ ಸಂಸದರಾಗಿದ್ದರು.
ಮೈಸೂರು ಲೋಕಸಭಾ ಕ್ಷೇತ್ರ
1952......................ಎಂ.ಎಸ್. ಗುರುಪಾದಸ್ವಾಮಿ, ಎನ್. ರಾಚಯ್ಯ
1957......................ಎಂ. ಶಂಕರಯ್ಯ, ಎಸ್.ಎಂ. ಸಿದ್ದಯ್ಯ
1962......................ಎಂ. ಶಂಕರಯ್ಯ
1967, 1972, 1977...ಎಚ್.ಡಿ. ತುಳಸೀದಾಸ್
1980................................ಎಂ. ರಾಜಶೇಖರಮೂರ್ತಿ
1984,1989,1996,1999...ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
1991......................ಚಂದ್ರಪ್ರಭಾ ಅರಸ್
1998, 2004........ಸಿ.ಎಚ್. ವಿಜಯಶಂಕರ್
2009.......................ಎಚ್. ವಿಶ್ವನಾಥ್
ಚಾಮರಾಜನಗರ ಕ್ಷೇತ್ರ
1962,1967,1972.................................ಎಸ್.ಎಂ. ಸಿದ್ದಯ್ಯ
1977..........................................................ಬಿ. ರಾಚಯ್ಯ
1980,1984,1989,1991,1999....ವಿ. ಶ್ರೀನಿವಾಸಪ್ರಸಾದ್
1996, 1998...........................................ಎ. ಸಿದ್ದರಾಜು
2004........................................................ಕಾಗಲವಾಡಿ ಎಂ. ಶಿವಣ್ಣ
2009.........................................................ಆರ್. ಧ್ರುವನಾರಾಯಣ
-ಅಂಶಿ ಪ್ರಸನ್ನಕುಮಾರ್