ಅಪಮಾನ ಮಾಡುವ ಕೆಲಸ ಮಾಡಬೇಡಿ
ಮೈಸೂರು: ಯಾರೇ ಆದರೂ ದೇಶಕ್ಕೆ ಅಪಮಾನ ಮಾಡುವಂತಹ ಕೆಲಸಕ್ಕೆ ಕೈ ಹಾಕಬೇಡಿ ಎಂದು ರಂಗಭೂಮಿ ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಹೇಳಿದರು.
ಬುಧವಾರ ನಗರದ ಡಿ.ಬನುಮಯ್ಯ ಕಲಾಭವನದಲ್ಲಿ ನಡೆದ ಧರ್ಮಪ್ರಕಾಶ ರಾವ್ ಬಹದ್ಧೂರ್ ಡಿ. ಬನುಮಯ್ಯ ಬಾಲಕರ ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ದೇಶಕ್ಕೆ ಅವಮಾನ ತರುವ ಘಟನೆ ನಡೆಯುತ್ತಿರುವಾಗ ಯಾರೇ ಗಮನಹರಿಸಿದರೂ ಅದು ನಮಗ್ಯಾಕೆ ಎಂದಾಗಲಿ ಅಥವಾ ನಾನೊಬ್ಬ ಸರಿಯಾದರೆ ದೇಶ ಸರಿಯಾಗುತ್ತದೆಯೇ ಎಂಬ ಹುಂಬತನ ಪ್ರದರ್ಶಿಸುವುದಾಗಲಿ ಮಾಡಬೇಡಿ. ನಾವು ಸರಿಯಾದರೆ ದೇಶ ಸರಿಯಾಗುತ್ತದೆ ಎಂಬ ಆಶಾಭಾವನೆಯಿಂದ ಬದುಕಿರಿ ಎಂದರು.
ನಾನು ಮೈಸೂರಿಗೆ ವ್ಯಾಸಂಗ ಮಾಡಲು ಬಂದಾಗ ಬನುಮಯ್ಯ ಶಾಲೆಗೆ ಸೇರಿಕೊಂಡೆ. ರಂಗಭೂಮಿಗೆ ಈ ವೇದಿಕೆಯಿಂದಲೇ ಪ್ರವೇಶ ಪಡೆದೆ. ರಂಗಭೂಮಿಯನ್ನು ಕೆಟ್ಟ ಹೆಸರಿನಿಂದ ಕರೆಯುತ್ತಿದ್ದ ಸಂದರ್ಭದಲ್ಲಿ ನಾನು ಪ್ರವೇಶಿಸಿದೆ. ನಮ್ಮ ತಂದೆ ಹೇಳಿದರು ಯಾಕಪ್ಪ ಈ ರಂಗಭೂಮಿಗೆ ಬಂದೆ ಎಂದಾಗ ನನಗೆ ನೋವಾಯಿತು. ಆದರೆ, ಈಗ ರಂಗಭೂಮಿಗೆ ಉತ್ತಮ ಭೂಮಿಕೆ ಇದೆ. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅಕ್ರಮಗಳನ್ನು ಬೊಟ್ಟು ಮಾಡಿ ತೋರಿಸುವ ಏಕೈಕ ಮಾಧ್ಯಮ ಎಂದರೆ ರಂಗಭೂಮಿ. ಇದು ಸಮಾಜದ ಪ್ರತಿಬಿಂಬ ಎಂದು ಅವರು ತಿಳಿಸಿದರು.
ದೇಶದ ಮೇಲೆಯೇ ಹೆಚ್ಚು ದಾಳಿ: ಭವ್ಯ ಭಾರತವು ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ಚಾರಿತ್ರಿಕವಾಗಿ ಮಹತ್ವ ಹೊಂದಿದೆ. ನಮ್ಮ ದೇಶದ ಮೇಲೆ ನಡೆದಿರುವಷ್ಟು ದಾಳಿಗಳು ಮತ್ಯಾವ ದೇಶದ ಮೇಲೂ ನಡೆದಿಲ್ಲ. ಇವೆಲ್ಲದರ ನಡುವೆಯೂ ನಮ್ಮ ಸಾಂಸ್ಕೃತಿಕ ಬೇರು ಆಳವಾಗಿ ಹಬ್ಬಿರುವುದರಿಂದ ಬೇರೆ ದೇಶದವರು ನಮ್ಮನ್ನು ಏನು ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ ಎಂದರು.
ಡಿ. ಬನುಮಯ್ಯ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ವಿ.ಜಿ. ಜಯದೇವ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಪ್ರೊ.ಪಿ.ವಿ. ನರಹರಿ, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಚಂದ್ರಶೇಖರ್, ಶಾಂತಮ್ಮ ಹಿರಣ್ಣಯ್ಯ, ಪಾಲಿಕೆ ಸದಸ್ಯ ಜೆ.ಎಸ್. ಜಗದೀಶ್, ತಾಪಂ ಮಾಜಿ ಅಧ್ಯಕ್ಷ ಟಿ. ಶ್ರೀಧರ, ಯುವ ಮುಖಂಡರಾದ ಎಂ.ಕೆ. ಅಶೋಕ್, ಸೋಹನ್ಕುಮಾರ್, ಎಸ್ಡಿಎಂಸಿ ಅಧ್ಯಕ್ಷ ಕೆ.ಎಂ. ಗೋವಿಂದರಾಜು, ದೈಹಿಕ ಶಿಕ್ಷಕ ಸೋಮಶೇಖರ್, ಬೇಲೂರೇಗೌಡ, ಕೆ. ಕೃಷ್ಣೇಗೌಡ, ಬೋರೇಗೌಡ ಇದ್ದರು.