ಇಂದು ವೀರಯೋಧ ಸುನೀಲ್ ಅಂತ್ಯಕ್ರಿಯೆ
ಕೆ.ಆರ್. ನಗರ: ಜಮ್ಮುವಿನಲ್ಲಿ ಭಾರತೀಯ ಸೇನಾ ಪಡೆ ಮತ್ತು ಉಗ್ರರ ನಡುವೆ ನಡೆದ ಕಾಳಗದಲ್ಲಿ ವೀರ ಮರಣ ಹೊಂದಿದ ತಾಲೂಕಿನ ಬಡಕನಕೊಪ್ಪಲಿನ ಯೋಧ ಸುನೀಲ್ ಅವರ ಅಂತ್ಯಕ್ರಿಯೆ ಮಾ.13 ರಂದು ಸ್ವಗ್ರಾಮದಲ್ಲಿ ನೆರವೇರಲಿದೆ.
ಸುನಿಲ್ ಅವರ ಕಳೆಬರವನ್ನು ಜಮ್ಮುವಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಗುವುದು. ಅಲ್ಲಿಂದ ಸೇನಾಪಡೆಯ ಆ್ಯಂಬುಲೆನ್ಸ್‌ನಲ್ಲಿ ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕಿನ ಬಡಕನಕೊಪ್ಪಲು ಗ್ರಾಮಕ್ಕೆ ತರುವುದಾಗಿ ಸೇನಾ ಸಿಬ್ಬಂದಿ ತಿಳಿಸಿದ್ದಾರೆ. ಮಾ.13ರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದ್ದು, ಯೋಧನ ಪಾರ್ಥೀವ ಶರೀರ ನೋಡಲು ಊರಿಗೆ ಊರೇ ಕಾದು ಕುಳಿತಿದೆ.ದೇಶ ಸೇವೆಗಾಗಿ ತನ್ನ ಜೀವನ ಮುಡಿಪಿಟ್ಟು ಹುತಾತ್ಮನಾದ ಯೋಧನ ಬಗ್ಗೆ ಸರಿಯಾದ ಮಾಹಿತಿ ನೀಡಲು ಜಿಲ್ಲಾಡಳಿತ, ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಯೋಧನ ಅಣ್ಣ ಹಾಗೂ ಶಾಸಕ ಸಾ.ರಾ. ಮಹೇಶ್ ಮಾತ್ರ ಯೋಧನ ಪಾರ್ಥೀವ ಶರೀರವನ್ನು ತಾಲೂಕಿಗೆ ತರಲು ಪ್ರಯತ್ನಿಸಿದರು. ಸರ್ಕಾರದ ವತಿಯಿಂದ ಯಾವುದೇ ವ್ಯವಸ್ಥೆ ಮಾಡದಿರುವುದು ಅಗೌರವ ತೋರಿಸಿದಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರಿಂದ ಗುಣಗಾನ: ಮೃತ ಯೋಧ ಸುನಿಲ್ ಅವರ ಬಗ್ಗೆ ಗ್ರಾಮಸ್ಥರು ಗುಣಗಾನ ಮಾಡುತ್ತಿದ್ದಾರೆ. ಸುನಿಲ್ ನಮ್ಮಿಂದ ಕಣ್ಮರೆಯಾಗಿರಬಹುದು. ಆದರೆ, ದೇಶಸೇವೆಗಾಗಿ ಒಳಪಡಿಸಿಕೊಂಡು ನಮ್ಮ ಊರು, ತಾಲೂಕಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಪಸರಿಸಿದ್ದಾನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗ್ರಾಮಸ್ಥರು ಸಂತಾಪ ಸೂಚಿಸಿದರು.