ಕಾಂಗ್ರೆಸ್ ಮುಕ್ತ ಅಲ್ಲ, ಹಸಿವು ಮುಕ್ತ
ಮೈಸೂರು: ನರೇಂದ್ರ ಮೋದಿ ಅವರ ಕಾಂಗ್ರೆಸ್ ಮುಕ್ತ ಎಂಬ ಘೋಷ ವಾಕ್ಯಕ್ಕಿಂತ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಸಿವು ಮುಕ್ತ ಸಮಾಜ ನಿರ್ಮಾಣವೇ ಹೆಚ್ಚು ಮೇಲು ಎಂದು ಸಂಸದ ಎಚ್. ವಿಶ್ವನಾಥ್ ಹೇಳಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ಬುಧವಾರ ವಿವೇಕಾನಂದ ನಗರದ ಗೌರಿಶಂಕರ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ಯುವ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮೋದಿ ಅಲೆ ರಾಜ್ಯದಲ್ಲಿಲ್ಲ. ಇಲ್ಲಿ ಏನಿದ್ದರು ಕಾಂಗ್ರೆಸ್ ಅಲೆ. ಕಾಂಗ್ರೆಸ್ ಜಾತಿಗಿಂತ ನೀತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತದೆ ಎಂದರು. ಕೇಂದ್ರ ಯುಪಿಎ ಸರ್ಕಾರ ಯುವಜನತೆಯತ್ತ ಗಮನ ಹರಿಸಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಸಾಲವಾದ 70 ಕೋಟಿಯನ್ನು ಮನ್ನಾ ಮಾಡಿ ಕಾಳಜಿ ಮೆರೆದಿದೆ ಎಂದರು.
21ಕ್ಕೆ ನಾಮಪತ್ರ ಸಲ್ಲಿಕೆ: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ತಮಗೆ ಅವಕಾಶ ನೀಡಿದ್ದು, ಮಾ.21ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಅಂದು ಬೆಳಗ್ಗೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ನಂತರ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಜೈನಮುನಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ. ನಂತರ ಮೈಸೂರು ಕಟ್ಟಿ ಬೆಳೆಸಿದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಶ್ರೀ ಚಾಮರಾಜ ಒಡೆಯರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ನಾಮಪತ್ರ ಸಲ್ಲಿಸುತ್ತೇನೆ ಎಂದರು.
ಇದೇ ವೇಳೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನಾಗಣ್ಣ ಅವರು ಹಾಗೂ ವಿವಿಧ ತಾಲೂಕುಗಳ ಅಧ್ಯಕ್ಷರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ, ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು, ಕಾಂಗ್ರೆಸ್ ಮುಖಂಡರಾದ ಆರ್. ರಘು, ಪುಟ್ಟಬಸವೇಗೌಡ ಇದ್ದರು.