ದೌರ್ಜನ್ಯ ವಿರುದ್ಧ ಹೋರಾಡಲು ಒಗ್ಗೂಡಿ
ಮೈಸೂರು: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರುದ್ಧ ಹೋರಾಟ ನಡೆಸಲು ಮಹಿಳೆಯರು ಹಾಗೂ ಮಹಿಳಾ ಸಂಘಟನೆಗಳು ಒಗ್ಗೂಡಬೇಕಿದೆ ಎಂದು ಸಿಎಫ್‌ಟಿಆರ್‌ಐ ನಿವೃತ್ತ ವಿಜ್ಞಾನಿ ಹಾಗೂ ಮಹಿಳಾವಾದಿ ಚಿಂತಕಿ ಡಾ.ರತಿರಾವ್ ಹೇಳಿದರು.
ನಗರದ ಮಹಾರಾಜ ಕಾಲೇಜು ಮಹಿಳಾ ಸಬಲೀಕರಣ ಘಟಕವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬುಧವಾರ ಜೂನಿಯರ್ ಬಿಎ ಹಾಲ್‌ನಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಹಿಳೆಯರ ಸಬಲೀಕರಣ ಕುರಿತು ಮಾತನಾಡಿದರು.
ಈಗಿನ ಮಹಿಳಾ ಸಂಘಟನೆಗಳಲ್ಲಿ ಒಗ್ಗಟ್ಟಿಲ್ಲ. ಹೀಗಾಗಿ, ದೌರ್ಜನ್ಯಗಳು ಆದಾಗ ಹೋರಾಟ ನಡೆಸಲು ಮುಂದು ಬರುತ್ತಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ನಡೆದ ಸಂದರ್ಭದಲ್ಲಿ ಮನೆಯಲ್ಲಿರುವ ಇತರೆ ಮಹಿಳೆಯರೇ ಪ್ರತಿಭಟಿಸಬೇಕು. ಹಿಂಸಾಚಾರ ರಹಿತ ಸಮಾಜ ನಿರ್ಮಿಸಬೇಕು. ಮಹಿಳೆಯರು, ದಲಿತರು, ಬುಡಕಟ್ಟು ಜನರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಎಲ್ಲರೂ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಪ್ರಸ್ತುತ ಮದುವೆ, ಕುಟುಂಬ ಎಂಬುದು ವ್ಯಾಪಾರ ಆಗುತ್ತಿದೆ. ನಮಗೆ ಯಾವ ರೀತಿಯ ಸಮಾಜ ಬೇಕು ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ. ಜಾಗತೀಕರಣದಲ್ಲಿ ಎಲ್ಲವನ್ನು ವ್ಯಾಪಾರ ದೃಷ್ಟಿಯಿಂದ ನೋಡಲಾಗುತ್ತದೆ. ಖಾಸಗೀಕರಣ ಪರಿಣಾಮದಿಂದ ನ್ಯಾಯ ಸಿಗುವುದು ಕಷ್ಟಕರವಾಗಿದೆ. ವರದಕ್ಷಿಣೆ ಸೇರಿದಂತೆ ಕೆಲವು ಪ್ರಕರಣಗಳನ್ನು ಕೆಲವರು ಮಾತ್ರ ದುರುಪಯೋಗ ಮಾಡಿಕೊಂಡಿದ್ದಾರೆ. ಇದರಿಂದ ಕಾನೂನು ತಿದ್ದುಪಡಿ ಮಾಡುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ಮಹಿಳೆಯರಿಂದಲೇ ದೌರ್ಜನ್ಯ: ಮಹಾರಾಜ ಕಾಲೇಜು ಆಡಳಿತಾಧಿಕಾರಿ ಡಾ.ನಾಗರಾಜಮೂರ್ತಿ ಮಾತನಾಡಿ, ಮಹಿಳೆಯರೇ ಮಹಿಳೆಯರ ಮೇಲೆ ನಡೆಸುತ್ತಿರುವ ದೌರ್ಜನ್ಯ, ಅಪರಾಧಗಳು ಹೆಚ್ಚಾಗುತ್ತಿವೆ. ದೌರ್ಜನ್ಯಕ್ಕೊಳಗಾದ ಮಹಿಳೆಯರು ದೂರು ನೀಡುತ್ತಿಲ್ಲ. ಇದರಿಂದ ಮಹಿಳೆಯರ ದೌರ್ಜನ್ಯ ಮನೆ ಮಾತಾಗಿದೆ ಎಂದರು.
ಸರ್ಕಾರಿ ಕೆಲಸದಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಲಾಗಿದೆ. ಆದರೆ, ಎಲ್ಲ ಕ್ಷೇತ್ರಗಳಲ್ಲೂ ಮೀಸಲಾತಿಯಂತೆ ಭರ್ತಿ ಆಗುತ್ತಿಲ್ಲ. ಕೆಲವೆಡೆ ಭರ್ತಿಯಾದರೂ ಅರ್ಧಕ್ಕೆ ಕೆಲಸ ಬಿಟ್ಟು ಹೋಗುವ ಮಹಿಳೆಯರು ಹೆಚ್ಚಾಗಿದ್ದಾರೆ. ಆಂಧ್ರಪ್ರದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚಿನ ದೌರ್ಜನ್ಯ ನಡೆಯುತ್ತಿದೆ. ಮಹಿಳಾ ದೌರ್ಜನ್ಯ ಕುರಿತು ಸಂಶೋಧನೆಗಳು ಆಗಬೇಕಿದೆ ಎಂದು ಅವರು ತಿಳಿಸಿದರು. ಮಹಾರಾಜ ಕಾಲೇಜು ಪ್ರಾಂಶುಪಾಲೆ ಪ್ರೊ.ಸ.ನ. ಗಾಯತ್ರಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ದಿನಮಣಿ ನಿರೂಪಿಸಿದರು.