ಮೀಸಲಾತಿ ಆಟ; ಕಮಲಕ್ಕೆ ಅದೃಷ್ಟ
ಟಿ. ನರಸೀಪುರ: ಪಟ್ಟಣ ಪಂಚಾಯಿತಿ ಅಧ್ಯಕ್ಷೆಯಾಗಿ ರತ್ನಮ್ಮ ಲಿಂಗಣ್ಣ, ಉಪಾಧ್ಯಕ್ಷೆಯಾಗಿ ಶ್ರುತಿ ಮಣಿಕಂಠ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಬಿಜೆಪಿಗೆ ವರವಾಗಿದ್ದರಿಂದ ಎರಡೂ ಸ್ಥಾನಗಳಿಗೆ ಪಕ್ಷದ ಮಹಿಳಾ ಸದಸ್ಯರಿಬ್ಬರೂ ನಿರಾಯಾಸವಾಗಿ ಅಧಿಕಾರದ ಗದ್ದುಗೆಯನ್ನೇರಿದರು.
ಪ. ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಒಂದನೇ ವಾರ್ಡಿನ ಸದಸ್ಯೆ ರತ್ನಮ್ಮ ಲಿಂಗಣ್ಣ, ಹಿಂದುಳಿದ ವರ್ಗ ಬಿ ಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಹತ್ತನೇ ವಾರ್ಡಿನ ಸದಸ್ಯೆ ಶ್ರುತಿ ಮಣಿಕಂಠ ಅವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು.
ಎಂ.ರಾಘವೇಂದ್ರ, ಟಿ.ಜಿ. ಪುಟ್ಟಸ್ವಾಮಿ, ಎಂ. ಮಹದೇವಸ್ವಾಮಿ, ಮಲ್ಲೇಶ್, ಸುಧಾ ಗುರುಮಲ್ಲ, ಸಿ. ಉಮೇಶ್, ರಾಜಮ್ಮ, ಶಶಿಕಲಾ ಪ್ರಕಾಶ್, ಮೀನಾಕ್ಷಿ ಸೇರಿದಂತೆ ಹನ್ನೊಂದು ಮಂದಿ ಚುನಾಯಿತ ಸದಸ್ಯರೆಲ್ಲರೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಸಿ. ಚೌಡಯ್ಯ, ಸಹಾಯಕ ಚುನಾವಣಾಧಿಕಾರಿಯಾಗಿ ಮುಖ್ಯಾಧಿಕಾರಿ ವಿ.ಟಿ. ವಿಲ್ಸನ್ ಕಾರ್ಯನಿರ್ವಹಿಸಿದರು.
ಬಿಜೆಪಿಯ ಸದಸ್ಯರಿಬ್ಬರೂ ಅಧ್ಯಕ್ಷೆ, ಉಪಾಧ್ಯಕ್ಷೆಯಾಗಿ ಆಯ್ಕೆಯಾಗುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಸಿ. ರಮೇಶ್, ಬಿಜೆಪಿ ಹಿರಿಯ ಮುಖಂಡರಾದ ಪುಟ್ಟಬಸವಯ್ಯ, ಮಹದೇವಯ್ಯ, ಆರ್. ಅರ್ಜುನ್, ತಾಪಂ ಸದಸ್ಯ ಬಸವರಾಜು, ಮಾಜಿ ಸದಸ್ಯೆ ಡಿ.ಉಮಾದೇವಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ತೋಟದಪ್ಪ ಬಸವರಾಜು ಭಾಗವಹಿಸಿದ್ದರು.
ಬಿಜೆಪಿ ಸಂಘಟನೆಗೆ ಶಕ್ತಿ ಬಂದಿದೆ
ಟಿ. ನರಸೀಪುರ: ಪಟ್ಟಣ ಪಂಚಾಯಿತಿ ಆಡಳಿತ ಬಿಜೆಪಿ ತೆಕ್ಕೆಗೆ ಬಂದಿರುವುದು ಲೋಕಸಭಾ ಚುನಾವಣೆ ವೇಳೆ ಪಕ್ಷದ ಸಂಘಟನೆಗೆ ಶಕ್ತಿ ನೀಡಿದಂತಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ಮುಖಂಡ ಸಿ. ರಮೇಶ್ ಹೇಳಿದರು. ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವಾಗ ಪಪಂನಲ್ಲಿ ಬಿಜೆಪಿ ಚುನಾಯಿತ ಸದಸ್ಯರಿಬ್ಬರು ಅಧ್ಯಕ್ಷೆ, ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಸಂಘಟನೆಗೆ ಬಲಬಂದಾಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಿಎಂ ಸಿದ್ದರಾಮಯ್ಯ ಹಾಗೂ ಕ್ಷೇತ್ರದ ಸಚಿವರು ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯಲ್ಲಿ ರೋಟೇಷನ್ನಲ್ಲಿ ಹಸ್ತಕ್ಷೇಪ ಮಾಡಿದ್ದರಿಂದ ಪ.ಜಾತಿ ಹಾಗೂ ಹಿಂದುಳಿದ ವರ್ಗ ಬಿ ಮಹಿಳೆಯರಿಬ್ಬರು ಆಡಳಿತ ಚುಕ್ಕಾಣಿ ಹಿಡಿಯಲು ಅವಕಾಶವಾಗಿದೆ. ಚುನಾಯಿಸಿದ ಒಂದನೇ ವಾರ್ಡ್ ಮತದಾರರಿಗೆ ಬಿಜೆಪಿಯಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸರ್ಕಾರದ ಮುಂದಿರುವ ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪಕ್ಕೆ ಕೂಡಲೇ ಆಡಳಿತಾತ್ಮಕ ಅನುಮೋದನೆ ನೀಡಬೇಕೆಂದು ಒತ್ತಾಯಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ತೋಟದಪ್ಪ ಬಸವರಾಜು ಮಾತನಾಡಿದರು.