ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲಲಿತಕಲಾ ಕಾಲೇಜಿಗೆ ಸಮಗ್ರ ಪ್ರಶಸ್ತಿ

Vishwanath S
Updated On : 13 Mar 2014, 1:42 am

ಮೈಸೂರು: ಮೈಸೂರು ವಿವಿ ಸಂಜೆ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ್ದ ಡಾ.ಜಿ.ಎಸ್. ಶಿವರುದ್ರಪ್ಪ ವಿರಚಿತ ರಾಜ್ಯ ಮಟ್ಟದ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ಮಾನಸಗಂಗೋತ್ರಿ ಲಲಿತಕಲಾ ಕಾಲೇಜಿನ ರಶ್ಮಿ, ಶ್ರುತಿ ರಂಜಯ್ಯ ಸಮಗ್ರ ಪ್ರಶಸ್ತಿ ಪಡೆದುಕೊಂಡರು.
ಉಳಿದಂತೆ ಎಸ್‌ಡಿಎಂ ಕಾಲೇಜಿನ ಶ್ರೇಯಾ ಕೆ. ಭಟ್ ಪ್ರಥಮ, ಟಿಟಿಎಲ್ ಕಾಲೇಜಿನ ಸಚಿನ್ ದ್ವಿತೀಯ ಹಾಗೂ ಮಹಾಜನ ಕಾಲೇಜಿನ ಕೆ.ವಿ. ಅನನ್ಯ ತೃತೀಯ ಬಹುಮಾನ ಪಡೆದುಕೊಂಡರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ನೀಲಗಿರಿ ಎಂ. ತಳವಾರ್ ಬಹುಮಾನ ವಿತರಿಸಿದರು.
ನಂತರ ಮಾತನಾಡಿದ ಅವರು, ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರಿಗೆ ಮಹಾರಾಜ ಕಾಲೇಜು ಕರ್ಮಭೂಮಿ. ಮೈಸೂರು ವಿವಿಯಿಂದ ಪದವಿ ಪಡೆದರು ಸಹ ಕೆಲಸ ಗಿಟ್ಟಿಸಿಕೊಳ್ಳಲು ಸಾಕಷ್ಟು ಊರುಗಳನ್ನು ಅಲೆದಾಡಿದರು. ಕೊನೆಗೆ ಉಸ್ಮಾನಿಯಾ ಕಾಲೇಜಿಗೆ ವಲಸೆ ಹೋಗಬೇಕಾಯಿತು. ಅಲ್ಲಿ ಸ್ವಯಂ ಪ್ರತಿಭೆ, ಬುದ್ಧಿವಂತಿಕೆಯಿಂದ ಶ್ರೇಯಸ್ಸು ಪಡೆದುಕೊಂಡು ನಂತರ ತವರು ನೆಲಕ್ಕೆ ವಾಪಸಾದರು. ಬೆಂಗಳೂರು ವಿವಿಗೆ ಸೇರಿಕೊಂಡ ಮೇಲೆ ಜಾತ್ಯತೀತ ನೆಲೆಯಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಸ್ಥಾಪಿಸಿ ಕೆಳವರ್ಗದಿಂದ ಬಂದ ಡಿ.ಆರ್. ನಾಗರಾಜ್, ಸಿದ್ದಲಿಂಗಯ್ಯ, ಕಂಬಾರರನ್ನು ಬೆಳೆಸಿದರು ಎಂದು ಸ್ಮರಿಸಿದರು.
ಹಣಕ್ಕೆ ಬೆಲೆ ಕೊಡುತ್ತಿರಲಿಲ್ಲ: ಇದಕ್ಕೂ ಮುನ್ನ ನಡೆದ ಜಿಎಸ್‌ಎಸ್ ವ್ಯಕ್ತಿತ್ವ, ಕಾವ್ಯ ಮತ್ತು ಕಾವ್ಯಚಿಂತನೆ ಕುರಿತ ವಿಚಾರಗೋಷ್ಠಿಯಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಡಿ. ಸತೀಶ್‌ಚಂದ್ರ ಅವರು ಜಿಎಸ್‌ಎಸ್ ವ್ಯಕ್ತಿತ್ವದ ವಿಶಿಷ್ಟ ಆಯಾಮಗಳು ಎಂಬ ವಿಷಯದ ಕುರಿತು ಮಾತನಾಡಿದರು. ಕುಗ್ರಾಮದಲ್ಲಿ ಹುಟ್ಟಿ ಬಂದ ಜಿಎಸ್‌ಎಸ್ ಹಣಕ್ಕೆ ಬೆಲೆ ಕೊಡುತ್ತಿರಲಿಲ್ಲ. ಅವರೇ ರಚಿಸಿರುವ ಚಕ್ರವ್ಯೂಹ ಕಾದಂಬರಿಯಲ್ಲಿ ಅದು ವ್ಯಕ್ತಿವಾಗಿದೆ. ವಸ್ತು ವಿಶಿಷ್ಟತೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರು. ಕವಿಯು ಯಾವುದೇ ವಿಷಯವನ್ನು ನಿರ್ಲಕ್ಷಿಸಬಾರದು ಎಂಬುದು ಅವರ ಕವನಗಳಲ್ಲಿ ತಿಳಿಯುತ್ತದೆ ಎಂದರು.
ಜಿಎಸ್‌ಎಸ್ ಅವರ ಕಾವ್ಯಗಳಲ್ಲಿ ಸಮಾಜಮುಖಿ ಚಿಂತನೆಗಳು ಕುರಿತು ಮಾತನಾಡಿದ ಡಾ.ಮ. ರಾಮಕೃಷ್ಣ, ಕವಿಯ ಸಾಹಿತ್ಯ ಬದುಕು ಅವರ ನೈಜ ಪ್ರತಿಬಿಂಬವಾಗಿದೆ. ಅದನ್ನು ಜಿಎಸ್‌ಎಸ್ ಕೊನೆತನಕ ಉಳಿಸಿಕೊಂಡು ಬಂದಿದ್ದರು. ಪ್ರಕೃತಿಯನ್ನು ಪ್ರೀತಿಸುವ ದಯಾಮಯನಂತೆ ಗೋಚರಿಸಿದರು ಎಂದು ಅಭಿಪ್ರಾಯಪಟ್ಟರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಚ್.ಎಂ. ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಶೈಲಜಾ ಏತಡ್ಕ, ಮೈಸೂರು ವಿವಿ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಮನಾರಾಯಣ್, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಡಿ. ವಿಜಯಲಕ್ಷ್ಮೀ, ಡಾ.ಸಿ.ಡಿ. ಪರಶುರಾಮ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement