ಕಾಂಗ್ರೆಸ್ನಿಂದ ಮಾತ್ರ ಸುಭದ್ರ ಸರ್ಕಾರ ಸಾಧ್ಯ: ಧ್ರುವ
ನಂಜನಗೂಡು: ಕಾಂಗ್ರೆಸ್ನಿಂದ ಮಾತ್ರ ಸುಭದ್ರ ಸರ್ಕಾರ ಸಾಧ್ಯ. ಕೇಂದ್ರದಿಂದ ಬರುವ ಅನುದಾನವನ್ನು ಪ್ರಾಮಾಣಿಕವಾಗಿ ನನ್ನ ಲೋಕಸಭಾ ಕ್ಷೇತ್ರದಲ್ಲಿ ಖರ್ಚು ಮಾಡಿದ್ದು, ಎಲ್ಲ ವರ್ಗದವರ ಏಳಿಗೆಗೆ ಶ್ರಮಿಸಿದ್ದೇನೆ ಎಂದು ಸಂಸದ ಆರ್. ಧ್ರುವನಾರಾಯಣ್ ಹೇಳಿದರು. ತಾಲೂಕಿನ ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ನಿಂದ ಭಾರತ ನಿರ್ಮಾಣ ಪಾದಯಾತ್ರೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಈ ಭಾಗದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ, ಕೇವಲ ಶಂಕುಸ್ಥಾಪನೆಯಷ್ಟೆ ನಡೆದಿದೆ ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಅವರು ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಪ್ರಮಾಣ ಪತ್ರ ಬೇಕಿಲ್ಲ. ಜನತೆಯ ಪ್ರಮಾಣ ಪತ್ರವೇ ಮುಖ್ಯ ಎಂದು ತಿರುಗೇಟು ನೀಡಿದರು. ಙ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ನನ್ನ ಕ್ಷೇತ್ರಕ್ಕೆ ತಂದಿದ್ದು, ಶೇ. 80ರಷ್ಟು ಕೆಲಸವಾಗಿದೆ ಎಂದು ತಿಳಿಸಿದರು. ತಾಲೂಕಿನ ಹೃದಯ ಭಾಗವಾದ ಹುಲ್ಲಹಳ್ಳಿಯಿಂದ ಹೊರಟ 15 ಕಿಮೀ ಪಾದಯಾತ್ರೆ ನಂಜನಗೂಡಿನ ವಿದ್ಯಾವರ್ಧಕ ಶಾಲಾವರಣದಲ್ಲಿ ಅಂತ್ಯಗೊಂಡಿತು.
ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಜಿಪಂ ಸದಸ್ಯ ಮಾರುತಿ, ಕೆಪಿಸಿಸಿ ಸದಸ್ಯ ಬಸವರಾಜು, ಹಿಂದು ಳಿದ ವರ್ಗಗಳ ಅಧ್ಯಕ್ಷ ಕೋಟೆ ಹುಂಡಿ ಮಹದೇವು, ಬ್ಲಾಕ್ ಅಧ್ಯಕ್ಷರಾದ ಕೆ.ಎಸ್.ಸುಬ್ಬಣ್ಣ, ಬಿ.ಎಸ್.ಮಹದೇವಪ್ಪ, ಕಾಂಗ್ರೆಸ್ ಮುಖಂಡ ಯು.ಎನ್.ಪದ್ಮನಾಭರಾವ್, ಗ್ರಾಪಂ ಅಧ್ಯಕ್ಷ ರವಿ, ರೇಲ್ವೆ ಸಲಹಾ ಸಮಿತಿ ಸದಸ್ಯರಾದ ಶಿವಣ್ಣ, ಗೋವಿಂದರಾಜು, ಪುರಸಭಾ ಸದಸ್ಯ ದೊರೆಸ್ವಾಮಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ಎಪಿಎಂಸಿ ಸದಸ್ಯರಾದ ಮಾದಪ್ಪ, ಸಂಗರಾಜು, ಲಕ್ಷ್ಮಿ ನಾಗರಾಜು ಭಾಗವಹಿಸಿದ್ದರು.
ಡಾ. ಸಿಂಗ್ರಿಂದ ದೇಶದ ಆರ್ಥಿಕ ಸ್ಥಿತಿ ಸುಧಾರಣೆ
ಟಿ. ನರಸೀಪುರ: ಆರ್ಥಿಕ ತಜ್ಞರಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಹಲವು ಸುಧಾರಣೆ ತಂದಿದ್ದಾರೆ ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು.
ವರುಣ ವಿಧಾನಸಭಾ ಕ್ಷೇತ್ರದ ಕುಪ್ಪೇಗಾಲ ಗ್ರಾಮದಲ್ಲಿ ಶುಕ್ರವಾರ ನವಭಾರತ ನಿರ್ಮಾಣ ಪಾದಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿ, ನರಸಿಂಹರಾವ್ ಹಾಗೂ ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದಾಗ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಆಗಲೇ ಹಣಕಾಸು ಇಲಾಖೆಯನ್ನು ವಹಿಸಿಕೊಂಡ ಮನಮೋಹನ್ಸಿಂಗ್ ಅವರು ಇಲಾಖೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ್ದರು. ಪ್ರಧಾನಿಯಾಗಿ ಜವಾಬ್ದಾರಿಯಿಂದ ದೇಶದ ಆಡಳಿತ ನಡೆಸಿದರು ಎಂದರು. ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಸದರಾಗಿ ಸಮಯವನ್ನು ವ್ಯರ್ಥ ಮಾಡದೆ ಸಂಸತ್ತಿನಲ್ಲಿ ಹಾಗೂ ಜನರೊಡನೆ ಸದ್ಬಳಕೆ ಮಾಡಿಕೊಂಡಿದ್ದೇನೆ. ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ತಂದಿದ್ದೇನೆ. ಸಿಎಂ ಕ್ಷೇತ್ರದ ವರುಣದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರ ನೀಡಿ, ಲೋಕಸಭೆಗೆ ತಮ್ಮನ್ನು ಚುನಾಯಿಸಬೇಕೆಂದು ಅವರು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನಾ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ತಗಡೂರು ಹಾಗೂ ವರುಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನವಭಾರತ್ ನಿರ್ಮಾಣ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ಹುಣಸೂರು ಗ್ರಾಮದಿಂದ ಸ್ಥಳೀಯ ಮುಖಂಡರ ತಂಡ ಹಾಗೂ ಹುಲ್ಲಹಳ್ಳಿಯಿಂದ ಧ್ರುವನಾರಾಯಣ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರೋಡ್ ಶೋ ನಡೆಸಿದರು. ಜಿಪಂ ಸದಸ್ಯರಾದ ಸಿದ್ದೇಗೌಡ, ಕೆ. ಮಹದೇವ, ಎಂ. ಸುಧಾಮಹದೇವ, ಮಾಜಿ ಅಧ್ಯಕ್ಷರಾದ ಕೆ.ಸಿ. ಬಲರಾಂ, ಎಚ್.ಸಿ. ಬಸವರಾಜು, ವರುಣ ಬ್ಲಾಕ್ ಅಧ್ಯಕ್ಷ ಕೆ. ಮುದ್ದೇಗೌಡ, ತಗಡೂರು ಬ್ಲಾಕ್ ಅಧ್ಯಕ್ಷ ರಂಗಸ್ವಾಮಿ, ಎಸ್ಟಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೊನ್ನನಾಯಕ, ವೀಕ್ಷಕ ಉಕ್ಕಲಗೆರೆ ಬಸವಣ್ಣ, ನವೀನ್, ಅಮ್ಜದ್ ಖಾನ್, ಉಪಾಧ್ಯಕ್ಷ ಸೋಮು, ಕೆಪಿಸಿಸಿ ಸದಸ್ಯ ಬಿ.ಸಿ. ಪುರುಷೋತ್ತಮ, ಪಿಎಸಿಸಿ ಅಧ್ಯಕ್ಷ ವಾಸುದೇವ್ ಭಾಗವಹಿಸಿದ್ದರು.