ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬನ್ನೂರು ಪುರಸಭೆ ಕಾಂಗ್ರೆಸ್ ಮಡಿಲಿಗೆ

Vishwanath S
Updated On : 15 Mar 2014, 1:20 am

ಬನ್ನೂರು: ಇಲ್ಲಿನ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವು ಕಾಂಗ್ರೆಸ್ ಪಾಲಾಗಿದೆ. ಅಧ್ಯಕ್ಷರಾಗಿ ಕಾಂಗ್ರೆಸ್‌ನ ಅಜೀಜುಲ್ಲಾ ಹಾಗೂ ಉಪಾಧ್ಯಕ್ಷರಾಗಿ ಬಿ.ಎಸ್. ರವೀಂದ್ರಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಪುರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಹಸೀಲ್ದಾರ್ ಸಿ. ಚೌಡಯ್ಯ ಘೋಷಿಸಿದರು. ಚುನಾವಣೆ ವೇಳೆ ನಾಲ್ವರು ಜೆಡಿಎಸ್ ಅಭ್ಯರ್ಥಿಗಳು ಗೈರಾಗಿದ್ದರು. ಕೆಪಿಸಿಸಿ ವೀಕ್ಷಕರಾಗಿ ಮಹದೇವು ಗಾಣಿಗ, ಪುರಸಭೆಯ ಮಾಜಿ ಅಧ್ಯಕ್ಷ ಬಿ.ಎನ್.ಕೃಷ್ಣೇಗೌಡ, ಡಿ. ಪದ್ಮನಾಭ್, ಟಿ. ನರಸೀಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಮುಖ್ಯಾಧಿಕಾರಿ ಎಸ್. ಲೋಕೇಶ್, ಯೋಜನಾಧಿಕಾರಿ ಆರ್.ವಿ. ಮಂಜುನಾಥ್, ಟಿ.ಎಸ್. ನಿತೀನ್, ಪಂಪಾಶ್ರೀ ಭಾಗವಹಿಸಿದ್ದರು. ಬಿ.ಎಂ. ಸೋಮಶೇಖರ್, ರಾಜೂಗೌಡ, ರಾಮಲಿಂಗೇಗೌಡ, ಭೈರವಮೂರ್ತಿ, ಮುನ್ನಾವರ್ ಪಾಷ, ಮೂರ್ತಿ, ಮುರಳಿ, ರಮೇಶ್, ಮಂಜುಳ, ಶಾಹೀದಾ, ಸುಮಿತ್ರ, ಶೋಭ, ಬಿಜೆಪಿ ಸದಸ್ಯ ಕೃಷ್ಣ ಇದ್ದರು.
ಮೂರು ಎಕರೆ ಕಬ್ಬು ಬೆಂಕಿಗಾಹುತಿ
ಟಿ. ನರಸೀಪುರ: ಆಕಸ್ಮಿಕವಾಗಿ ಬೆಂಕಿ ಬಿದ್ದು ಮೂರು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣ ನಾಶವಾಗಿರುವ ಘಟನೆ ತಾಲೂಕಿನ ಯರಗನಹಳ್ಳಿಯಲ್ಲಿ ಜರುಗಿದೆ.
ತಾಲೂಕಿನ ಹೂಸೂರುಹುಂಡಿ ಗ್ರಾಮದ ಗುರುಮಲ್ಲಮ್ಮ ಎಂಬವರಿಗೆ ಸೇರಿದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿದ ಪರಿಣಾಮ, ಮೂರು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆ ಇಡಿ ಜಮೀನನ್ನು ಆವರಿಸಿದ್ದರಿಂದ 110ಕ್ಕೂ ಹೆಚ್ಚು ಟನ್ ಕಬ್ಬು ಭಸ್ಮವಾಗಿದ್ದು, ಸುಮಾರು 3 ಲಕ್ಷಗಳಷ್ಟು ನಷ್ಟ ಉಂಟಾಗಿದೆ.
ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ನಷ್ಟ ಉಂಟಾಗಿರುವ ಬಗ್ಗೆ ಕಾಂಗ್ರೆಸ್ ಮುಖಂಡ ತೋಂಟೇಶ್ ಪಟ್ಟಣದ ಪೊಲೀಸ್ ಠಾಣೆ ಹಾಗೂ ತಹಸೀಲ್ದಾರರಿಗೆ ದೂರು ನೀಡಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.
ಇಂದು ಕ್ರೀಡಾಕೂಟಕ್ಕೆ ತೆರೆ
ಹುಣಸೂರು: ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಮಾ. 15ರ ಬೆಳಗ್ಗೆ 10ಕ್ಕೆ ವಾರ್ಷಿಕ ಕ್ರೀಡಾಕೂಟ ಸಮಾರಂಭ ಆಯೋಜಿಸಲಾಗಿದ್ದು, ಮೈಸೂರು ವಿವಿಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿ. ವೆಂಕಟೇಶ್ ಉದ್ಘಾಟಿಸುವರು ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎಸ್. ಭಾಸ್ಕರ್ ತಿಳಿಸಿದ್ದಾರೆ.
ನಾಳೆ ಪ್ರಶಸ್ತಿ ಪ್ರದಾನ ಸಮಾರಂಭ
ಹುಣಸೂರು: ಸ್ಪಂದನ ಸಾಂಸ್ಕೃತಿಕ ಪರಿಷತ್, ಹುಣಸೂರು, ರೋಟರಿ ಸಂಸ್ಥೆ ಹಾಗೂ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಗಳ ಸಹಯೋಗದಲ್ಲಿ ಮಾ.16ರ ಬೆಳಗ್ಗೆ 10ಕ್ಕೆ ರಾಷ್ಟ್ರಕವಿ ಕುವೆಂಪು ಸ್ಮರಣಾರ್ಥ ರೋಟರಿ ಭವನದಲ್ಲಿ ನಡೆಯುವ ರಾಜ್ಯಮಟ್ಟದ ಚುಟುಕು ಕವಿಮೇಳ ಹಾಗೂ ಸೇವಾ ಚೇತನ ಪ್ರಶಸ್ತಿ ಸಮಾರಂಭವನ್ನು ಹಿರಿಯ ಸಾಹಿತಿ ಡಾ. ರಾಮೇಗೌಡ ಉದ್ಘಾಟಿಸುವರು. ಬೆಳಗ್ಗೆ 11.30ಕ್ಕೆ ಸಾಹಿತಿ ಬನ್ನೂರು ಕೆ.ರಾಜು ಅಧ್ಯಕ್ಷತೆಯಲ್ಲಿ ಚುಟುಕು ಕವಿತೆಗಳ ವಾಚನಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ವಿವಿಧ ಕ್ಷೇತ್ರಗಳ 6 ಮಂದಿ ಸಾಧಕರಿಗೆ ಸೇವಾ ಚೇತನ ಪ್ರಶಸ್ತಿ ಪ್ರದಾನ ಹಾಗೂ ಮುಕ್ತಾಯ ಸಮಾರಂಭ ನಡೆಯಲಿದೆ. ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು ಎಂದು ಪರಿಷತ್ ಅಧ್ಯಕ್ಷ ಟಿ. ಲೋಕೇಶ್ ತಿಳಿಸಿದ್ದಾರೆ.
ಹೊಸಳ್ಳಿಯಲ್ಲಿ ಜಾತ್ರೆ
ಹುಣಸೂರು: ತಾಲೂಕಿನ ಕುರುಬರ ಹೊಸಳ್ಳಿಯಲ್ಲಿ ಮಾ. 15ರಂದು ಶ್ರೀ ಶನಿದೇವರ 53ನೇ ವಾರ್ಷಿಕೋತ್ಸವ ಅಂಗವಾಗಿ ಜಾತ್ರೆ ಮತ್ತು ಪಲ್ಲಕ್ಕಿ ಉತ್ಸವ ನಡೆಯಲಿದೆ. ಬೆಳಿಗ್ಗೆ 6ಕ್ಕೆ ಹೋಮ, 7.30ಕ್ಕೆ ರುದ್ರಾಭಿಷೇಕ, 9ಕ್ಕೆ ನವಗ್ರಹ ಪೂಜೆ, ಸಹಸ್ರನಾಮಾವಳಿ, 9.30ಕ್ಕೆ ಮಹಾಮಂಗಳಾರತಿ, ರಾತ್ರಿ 10ಕ್ಕೆ ಪಲ್ಲಕ್ಕಿ ಉತ್ಸವವನ್ನು ಹೊಸೂರು ಮತ್ತು ನಲ್ಲೂರು ಪಾಲದಲ್ಲಿ ನಡೆಸಲಾಗುವುದು. ರಾತ್ರಿ 8.30ಕ್ಕೆ ಶನಿ ಪ್ರಭಾವ ನಾಟಕವನ್ನು ಹೊಸೂರಿನ ಕಲಾವಿದರು ಅಭಿನಯಿಸುವರು.
ಸ್ವಾಮಿಗೌಡ ನೇಮಕ
ಹುಣಸೂರು: ಇಲ್ಲಿನ ನ್ಯಾಯಾಲಯದ ಸರ್ಕಾರಿ ಹೆಚ್ಚುವರಿ ವಕೀಲರಾಗಿ ಮೂಕನಹಳ್ಳಿ ಸ್ವಾಮಿಗೌಡ ಅವರನ್ನು ನೇಮಕ ಮಾಡಲಾಗಿದೆ.
ಕಾಂಗ್ರೆಸ್‌ನ ಅಭಿವೃದ್ಧಿ ಕಾರ್ಯಗಳೇ ಗೆಲವಿಗೆ ಶ್ರೀರಕ್ಷೆ: ವಿಶ್ವನಾಥ್
ಮೈಸೂರು: ಸೋನಿಯಾಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಸಿದ್ದರಾಮಯ್ಯ ನೇತೃತ್ವದ ಜನಪರ ಅಭಿವೃದ್ಧಿ ಕಾರ್ಯಕ್ರಮಗಳೇ ನನ್ನ ಗೆಲವಿಗೆ ಶ್ರೀರಕ್ಷೆಯಾಗಲಿವೆ ಎಂದು ಸಂಸದ ಎಚ್.ವಿಶ್ವನಾಥ್ ಹೇಳಿದರು.
ತಾಲೂಕಿನ ಇಲವಾಲದಲ್ಲಿ ಭಾರತ ನಿರ್ಮಾಣ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಮೈಸೂರು ಮತ್ತು ಕೊಡಗಿನ ಮತದಾರರು ನನಗೆ ಆಶೀರ್ವದಿಸಲಿದ್ದು, ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸಿದ್ದರಾಮಯ್ಯನವರ ಕೈ ಬಲಪಡಿಸುವುದರೊಂದಿಗೆ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ ಮಾತನಾಡಿದರು. ಪಾದಯಾತ್ರೆಯಲ್ಲಿ ಮಾಜಿ ಶಾಸಕ ಎಂ. ಸತ್ಯನಾರಾಯಣ, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಜಿಪಂ ಅಧ್ಯಕ್ಷ ಎಂ.ಮಹದೇವ್, ರಘು, ಸಿ. ಬಸವೇಗೌಡ, ಸಿ.ಎನ್.ಮಂಜೇಗೌಡ, ತಾಪಂ ಅಧ್ಯಕ್ಷೆ ನಿರ್ಮಲ ಹೊನ್ನಪ್ಪ, ಸಿದ್ದಯ್ಯ, ಡಿಸಿಸಿ ಸದಸ್ಯ ಕೃಷ್ಣಕುಮಾರ್ ಸಾಗರ್, ಹಿಂದುಳಿದ ವಗಂದ ಅಧ್ಯಕ್ಷ ಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ. ಬಸವಣ್ಣ ಇದ್ದರು.
ಅರಸು ಅಧ್ಯಯನ ಕೇಂದ್ರ ಉದ್ಘಾಟನೆ
ಮೈಸೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 98ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಮೈಸೂರು ವಿವಿಯು ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ಆರಂಭಿಸಿದೆ.
ಮಾನಸಗಂಗೋತ್ರಿಯ ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ ಆರಂಭಿಸಲಾದ ಡಿ. ದೇವರಾಜ ಅರಸು ಅಧ್ಯಯನ ಕೇಂದ್ರವನ್ನು ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಶುಕ್ರವಾರ ಉದ್ಘಾಟಿಸಿದರು.
ನಂತರ ಮಾತನಾಡಿ, ಸದರಿ ಕೇಂದ್ರಕ್ಕೆ ಸಂಸದ ಎಚ್.ವಿಶ್ವನಾಥ್ 25 ಲಕ್ಷ ಅನುದಾನ ನೀಡಿದ್ದಾರೆ. ಅತ್ಯಂತ ಕೆಳ ಸಮುದಾಯದಿಂದ ಬಂದ ಅರಸು ಸಾಮಾಜಿಕ ನ್ಯಾಯಕ್ಕಾಗಿ ದುಡಿದರು. ಹಿಂದುಳಿದ ವರ್ಗಗಳ ಏಳಿಗೆಗೆ ಹಲವು ಕಾರ್ಯಕ್ರಮ ರೂಪಿಸಿದರು. ದೇಶದಲ್ಲಿ ಜಾರಿಗೆ ತಂದ ಭೂಸುಧಾರಣೆ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಬಡವರಿಗೆ ಭೂಮಿ ನೀಡಿದರು ಎಂದು ಸ್ಮರಿಸಿದರು.
ಐಡಿಎಸ್ ನಿರ್ದೇಶಕ ಡಾ. ಕೃಷ್ಣೇಗೌಡ, ಡಾ.ಡಿ.ಎಸ್. ಮೆಶ್ರಮ್, ಅರಸು ಅವರ ಮೊಮ್ಮಗಳಾದ ಅನುಪಮಾ ಹರೀಶ್ ಕಾಂತರಾಜ ಇದ್ದರು.
ಶಾಂತಿಯುತ ಹೋಳಿ ಆಚರಣೆಗೆ ಸೂಚನೆ
ಮೈಸೂರು: ಹೋಳಿ ಹಬ್ಬದ ಆಚರಣೆ ವೇಳೆ ನಗರದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ನೆಮ್ಮದಿ ಕಾಪಾಡಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಮನವಿ ಮಾಡಿದ್ದಾರೆ.
ಹೋಳಿ ಆಚರಣೆ ವೇಳೆ ಯಾವುದೆ ವ್ಯಕ್ತಿಯಿಂದ ಬಲವಂತವಾಗಿ ಚಂದಾ ವಸೂಲಿ ಮಾಡಬಾರದು. ಹೆಣ್ಣು ಮಕ್ಕಳಿಗೆ ಹಾಗೂ ಯಾವುದೆ ವ್ಯಕ್ತಿಗೆ ಬಣ್ಣವನ್ನು ಬಲವಂತವಾಗಿ ಹಾಕಬಾರದು. ಬಣ್ಣ ಎರಚುವ ನೆಪದಲ್ಲಿ ಯಾವುದೆ ವ್ಯಕ್ತಿ ಮಹಿಳಾ ವಿದ್ಯಾರ್ಥಿ ನಿಲಯ, ಮಹಿಳಾ ಕಾಲೇಜು ಪ್ರವೇಶಿಸಬಾರದು.
ಕಾಮ ದಹನದ ಸ್ಥಳ ಆಯ್ಕೆ ವೇಳೆ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ಆಡಚಣೆ ಆಗಬಾರದು. ಯಾವುದೆ ಕಾರಣಕ್ಕೂ ರಸ್ತೆಯ ಮಧ್ಯದಲ್ಲಿ ಕಾಮ ದಹನ ಮಾಡಬಾರದು. ಕಾಮ ದಹನದ ಸ್ಥಳದಲ್ಲಿ ವಿದ್ಯುತ್ ಅಳವಡಿಕೆ ಬಗ್ಗೆ ಸೆಸ್ಕ್‌ನಿಂದ ಅನುಮತಿ ಪಡೆಯಬೇಕು.
 ಹೋಳಿ ಹಬ್ಬದ ಮೆರವಣಿಗೆ ಮತ್ತು ಕಾಮ ದಹನ ಸ್ಥಳದಲ್ಲಿ ರಕ್ಷಣೆಗಾಗಿ ಪ್ರಾಯೋಜಕರು, ವ್ಯವಸ್ಥಾಪಕರು ತಮ್ಮ ಸಂಘದ ಜನರನ್ನು ನೇಮಿಸಿ ಸೂಕ್ತ ಉಸ್ತುವಾರಿ ನೋಡಿಕೊಳ್ಳಬೇಕು. ಮೆರವಣಿಗೆ ಮುನ್ನ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಬಾರದು.
ಒಂದು ವೇಳೆ ನಿಬಂಧನೆ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವುದಾಗಿ ಅವರು ಸೂಚಿಸಿದ್ದಾರೆ.
ನಿಬಂಧನೆ ಉಲ್ಲಂಘನೆಯಾದರೆ ಸಾರ್ವಜನಿಕರು ಪೊಲೀಸ್ ಕಂಟ್ರೋಲ್ ರೂಂ ದೂ. 100, 2418139, 2418339ಗೆ ಮಾಹಿತಿ ನೀಡಬಹುದು.
ಹಣ ಸಾಗಣೆ ಪ್ರಕರಣ; ತನಿಖಾಧಿಕಾರಿ ಬದಲಾವಣೆಗೆ ಸರ್ಕಾರ ಆದೇಶ
ಮೈಸೂರು: ಕೇರಳದ ಖಾಸಗಿ ಬಸ್‌ನಲ್ಲಿ ಸಾಗಿಸಲಾಗುತ್ತಿದ್ದ ಹಣ ವಶಪಡಿಸಿಕೊಂಡಿದ್ದ ಪೊಲೀಸರ ವಿರುದ್ಧದ ತನಿಖೆಗೆ ನೇಮಿಸಿದ್ದ ಅಧಿಕಾರಿಯನ್ನು ಬದಲಾಯಿಸುವಂತೆ ಸರ್ಕಾರ ಆದೇಶಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಹೇಳಿದರು.
ಮೈಸೂರು ದಕ್ಷಿಣ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್‌ಐ ಜಗದೀಶ್ (ಹಾಲಿ ಬನ್ನೂರು ಠಾಣೆಯ ಎಸ್‌ಐ), ಪೇದೆಗಳಾದ ಸತೀಶ್, ಅಶೋಕ್ ಮತ್ತು ಲತೀಫ್ ಎಂಬವರ ಮೇಲೆ ಮೈಸೂರು ತಾಲೂಕಿನ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣ ವಿಚಾರಣೆಯನ್ನು ಎ. ರಾಜಾ ಅವರಿಗೆ ವಹಿಸಲಾಗಿತ್ತು. ಇದೀಗ ಅವರನ್ನು ಬದಲಿಸುವಂತೆ ಆದೇಶಿಸಿದ್ದು, ಬಹುಶಃ ಹುಣಸೂರು ಡಿವೈಎಸ್ಪಿ ನಂಜುಂಡ ಅವರನ್ನು ನೇಮಿಸಲಾಗುವುದು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳನ್ನು ಈವರೆಗೂ ಬಂಧಿಸದಿರುವ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್‌ಐ ಸೇರಿದಂತೆ ಮೂವರು ಪೇದೆಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಒಂದು ವೇಳೆ ಈ ಪ್ರಕರಣದ ಹಿಂದೆ ಯಾರ್ಯಾರು ಇದ್ದಾರೆ ಎಂಬುದು ತಿಳಿದು ಬಂದಲ್ಲಿ ಅವರ ವಿರುದ್ಧವೂ ಕೇಸು ದಾಖಲಿಸಲಾಗುವುದು. ಒಟ್ಟಿನಲ್ಲಿ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದರು.
ಚುನಾವಣೆಗೆ ತಯಾರಿ: ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಮೈಸೂರು ಜಿಲ್ಲೆಯಲ್ಲಿನ 86 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿದ್ದು, ಅಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗುವುದು. ಮಾ. 20ರಂದು ಕೇರಳದಿಂದ ಮೀಸಲು ಪಡೆ ಆಗಮಿಸಲಿದೆ. ಇನ್ನೂ ಚುನಾವಣೆ ಕಾವು ಏರಿಲ್ಲ. ಆದರೂ ನಮ್ಮ ಪೊಲೀಸ್ ಪಡೆಗಳು ಸಜ್ಜಾಗಿದ್ದು, ಚುನಾವಣೆ ಅಕ್ರಮಗಳ ಮೇಲೆ ಹದ್ದಿನ ಕಣ್ಣು ಇಡಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement