ಬಿಜೆಪಿ ಅಸ್ತಿತ್ವಕ್ಕಾಗಿ ನಮೋ ಜಪ
ನಂಜನಗೂಡು: ಬಿಜೆಪಿ ಮುಖಂಡರು ತಮ್ಮ ವರ್ಚಸ್ಸಿನ ಮೂಲಕ ಮತ ಕೇಳುವ ಅರ್ಹತೆಯನ್ನು ರಾಜ್ಯದ ಜನತೆ ಮುಂದೆ ಕಳೆದುಕೊಂಡಿದ್ದು, ತಮ್ಮ ಅಸ್ತಿತ್ವಕ್ಕೆ ನಮೋ (ನರೇಂದ್ರ ಮೋದಿ) ಎಂದು ಜಪಿಸುತ್ತಿದ್ದಾರೆ ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ವ್ಯಂಗವಾಡಿದರು.
ಪಟ್ಟಣದ ವಿದ್ಯಾವರ್ಧಕ ಮೈದಾನ ಆವರಣದಲ್ಲಿ ಶುಕ್ರವಾರ ನಂಜನಗೂಡು ಹಾಗೂ ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಭಾರತ್ ನಿರ್ಮಾಣ ಯಾತ್ರೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ರಾಜ್ಯದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದ್ದವು. ಬಿಜೆಪಿಯನ್ನು ವ್ಯಾಪಾರಿಗಳು ಮನಬಂದಂತೆ ಮಾರಾಟ ಮಾಡಿ, ಜೈಲು ಸೇರಿದ್ದರು ಎಂದು ಅವರು ಕುಟುಕಿದರು.
ಬಿಜೆಪಿ ಸರ್ಕಾರಕ್ಕೂ ಸಿದ್ದರಾಮಯ್ಯನವರ ಸರ್ಕಾರಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು, ನನ್ನ 20 ವರ್ಷ ರಾಜಕೀಯದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದ ಕೆಲಸಗಳನ್ನು ಕೇವಲ 9 ತಿಂಗಳಲ್ಲಿ 90 ಭಾಗ ಪೂರ್ಣಗೊಳಿಸಿ ಘೋಷಿಸಿದ ಮಾತಿಗೆ ಚಾಚು ತಪ್ಪದೇ ನಡೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದರು.
ಚಾಮರಾಜನಗರದ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಕ್ರಿಯಾಶೀಲ ರಾಜಕಾರಣಿಯಾಗಿದ್ದು, ಐದು ವರ್ಷ ಅವಧಿಯಲ್ಲಿ ಈ ಭಾಗದ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಕೇಂದ್ರ ಸರ್ಕಾರದ ಅನುದಾನವನ್ನು ಪ್ರಾಮಾಣಿಕವಾಗಿ ಬಳಕೆ ಮಾಡಿದ್ದಾರೆ. ಅವರನ್ನು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಜನತೆಯಲ್ಲಿ ಮನವಿ ಮಾಡಿದರು.
ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅನುದಾವನ್ನು 8 ಕ್ಷೇತ್ರಕ್ಕೂ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕೇಂದ್ರ ಸರ್ಕಾರದಲ್ಲಿ ಹಗರಣದಲ್ಲಿ ಭಾಗಿಯಾದವರನ್ನು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ಮಾಜಿ ಸಂಸದ ಎ.ಸಿದ್ದರಾಜು, ಜಿಪಂ ಸದಸ್ಯ ಕೆ.ಮಾರುತಿ, ಯು.ಎನ್.ಪದ್ಮನಾಭರಾವ್, ತಾಪಂ ಸದಸ್ಯರಾದ ಲಕ್ಷ್ಮೀ ನಾಗರಾಜ್, ಬ್ಲಾಕ್ ಅಧ್ಯಕ್ಷರಾದ ಕೆ.ಎಸ್. ಸುಬ್ಬಣ್ಣ, ಬಿ.ಎಸ್. ಮಹದೇವಪ್ಪ, ಕೆಪಿಸಿಸಿ ಸದಸ್ಯರಾದ ಬಸವರಾಜು, ಅಕ್ಬರ್ ಅಲಿ, ಪುರಸಭಾ ಮಾಜಿ ಅಧ್ಯಕ್ಷ ಶಂಕರ್, ಜಿಪಂ ಮಾಜಿ ಅಧ್ಯಕ್ಷೆ ಲತಾಸಿದ್ದಶೆಟ್ಟಿ, ರಾಜ್ಯ ಕಾಂಗ್ರೆಸ್ ಯುವ ಮುಖಂಡ ಹರ್ಷವರ್ಧನ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಕೋಟೆಹುಂಡಿ ಮಹದೇವು ಭಾಗವಹಿಸಿದ್ದರು.