ಮಹಿಳೆ ಸ್ಥಿತಿಗತಿ ಅವಲೋಕನ ಅಗತ್ಯ: ಹಾಲತಿ
ಕೆ.ಆರ್. ನಗರ: ಮನುಷ್ಯನಿಗೆ ವರ್ತಮಾನ ಎನ್ನುವುದು ಭೂತ- ಭವಿಷ್ಯವನ್ನು ಬೆಸೆಯುವ ಕೊಂಡಿಯಾಗಿದ್ದು, ಅದಕ್ಕೆ ಬದ್ಧನಾಗಿಯೆ ಮನುಷ್ಯ ಬೆಳೆಯುತ್ತಿದ್ದಾನೆ ಎಂದು ಸ್ತ್ರೀವಾದಿ ಚಿಂತಕ ಡಾ. ಹಾಲತಿ ಸೋಮಶೇಖರ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ನಡೆದ ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಇಂದಿನ ಬಹುರಾಷ್ಟ್ರೀಯ ಕಂಪನಿಗಳ ಪ್ರಾಬಲ್ಯದಲ್ಲಿ ನಮ್ಮ ಭಾಷೆ, ನಾವು ಓದುವ ಪಠ್ಯ ಇವೆಲ್ಲವುಗಳ ಅದಲು-ಬದಲುವಿಕೆಯ ಕ್ರಮದ ಜೊತೆಗೆ ಮಹಿಳೆಯರ ಸ್ಥಿತಿಗತಿಗಳ ಅವಲೋಕನ ಅಗತ್ಯ ಎಂದರು.
ಡಾ.ಪಿ. ಭಾರತಿದೇವಿ ಮಾತನಾಡಿದರು. ಪ್ರಾಂಶುಪಾಲ ಡಾ.ಎಂ.ಎಚ್. ಕೊಂಡರಸಯ್ಯ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಹರೀಶ್‌ಗೌಡ, ಮಲ್ಲಿಕಾರ್ಜುನಗೌಡ, ಎಚ್.ಆರ್. ಚಂದ್ರಕಲಾ, ಡಾ. ಸಿದ್ದಲಿಂಗಯ್ಯ, ಕೆ.ಸಿ. ವೀರಭದ್ರಯ್ಯ, ಪಿ. ನಾಗೇಂದ್ರಕುಮಾರ್, ಥಾಮಸ್ ಗುಣಶೀಲನ್ ಇದ್ದರು. ವಿದ್ಯಾರ್ಥಿ ವೇದರಾಜು ಕಾರ್ಯಕ್ರಮ ನಿರೂಪಿಸಿ, ಶರ್ಮಿಳಾ ಸ್ವಾಗತಿಸಿದರು. ಆರ್. ಪವಿತ್ರ ವಂದಿಸಿದರು.