ಮುತ್ತತ್ತಿ: ಸುಳಿಗೆ ಸಿಲುಕಿ ಬೆಂಗಳೂರಿನ ವ್ಯಕ್ತಿ ಸಾವು
ಹಲಗೂರು: ಸಮೀಪದ ಪ್ರಸಿದ್ಧ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾದ ಮುತ್ತತ್ತಿ ಬಳಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ಸುಳಿಗೆ ಸಿಕ್ಕಿ ಮೃತಪಟ್ಟ ಘಟನೆ ಹಲಗೂರು ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಬೆಂಗಳೂರಿನ ವಿವೇಕನಗರ ಕೊನೇನ ಅಗ್ರಹಾರದ ಸಾಮ್ಲಾಲಾಲ್ ಎಂಬುವರ ಪುತ್ರ ಮದನ್ಲಾಲ್ (34) ಮೃತಪಟ್ಟ ವ್ಯಕ್ತಿ ಎನ್ನಲಾಗಿದೆ.
ಇವರು ಖಾಸಗಿ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಗುರುವಾರ ಮಧ್ಯಾಹ್ನ ವಿಹಾರಕ್ಕೆಂದು ಮೋಟರ್ ಬೈಕ್ನಲ್ಲಿ 7 ಜನ ಸ್ನೇಹಿತರೊಡನೆ ಮುತ್ತತ್ತಿಗೆ ಬಂದು ಮುತ್ತತ್ತಿರಾಯನ ದರ್ಶನ ಪಡೆದು ಎಲ್ಲರೂ ಕಾವೇರಿ ನದಿಯಲ್ಲಿ ಈಜಲು ಹೋದಾಗ ಮದನ್ಲಾಲ್ ಸುಳಿಗೆ ಸಿಕ್ಕಿ ಮೃತಪಟ್ಟರು. ನಂತರ ನುರಿತ ಈಜುಗಾರರಿಂದ ಗುರುವಾರ ಸಂಜೆ ಶವವನ್ನು ಹೊರತೆಗೆಯಲಾಯಿತು. ವೈದ್ಯಾಧಿಕಾರಿ ಡಾ. ರಾಜ್ ಶುಕ್ರವಾರ ಶವ ಪರೀಕ್ಷೆ ನಡೆಸಿದ ನಂತರ ವಾರಸ್ಸುದಾರರಿಗೆ ಒಪ್ಪಿಸಲಾಯಿತು. ಎಸ್ಐ ಚಂದ್ರಶೇಖರ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಾತನೂರು ಬಳಿ ಚೆಕ್ಪೋಸ್ಟ್ ನಿರ್ಮಿಸಿ: ಆರು ತಿಂಗಳಿಂದ ಪೊಲೀಸ್ ಕಣ್ಗಗಾವಲಿನಲ್ಲಿ ಹಲಗೂರು ಮಾರ್ಗದಿಂದ ಮುತ್ತತ್ತಿಗೆ ಹೋಗುವ ಸಮೀಪ ಚೆಕ್ಪೋಸ್ಟ್ ನಿರ್ಮಿಸಿ ಪ್ರವಾಸಿಗರಿಗೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರಿಂದ ಇದುವರೆವಿಗೂ ಯಾವುದೇ ಸಾವು ನೋವುಗಳು ಜರುಗಿರಲಿಲ್ಲ.
ಆದರೆ ಮಾರ್ಚ್ 13 ಗುರುವಾರ ಮದನ್ಲಾಲ್ ಹಾಗೂ ಸ್ನೇಹಿತರು ಸಾತನೂರು ಮಾರ್ಗವಾಗಿ ಮುತ್ತತ್ತಿಗೆ ಹೋದ ಈ ಯುವಕರಿಗೆ ಅಪಾಯದ ಯಾವುದೇ ಮಾಹಿತಿ ಲಭ್ಯವಾಗದೆ ಕಾವೇರಿ ನದಿಯಲ್ಲಿ ಈಜಲೂ ಹೋಗಿದ್ದಾಗ ಸುಳಿಗೆ ಸಿಲುಕಿ ಮದನ್ಲಾಲ್ ಮೃತಪಟ್ಟಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಾತನೂರು ಮಾರ್ಗವಾಗಿ ಬರುವ ಪ್ರವಾಸಿಗರಿಗೆ ಕರಪತ್ರದೊಂದಿಗೆ ಎಚ್ಚರಿಕೆ ನೀಡಿ ಕಳುಹಿಸುವಂತಾಗಬೇಕು.