ಯಾಸಿರ್ ಕೈಯಲ್ಲಿ ಜೀವ ತಾಳುವ ಕಲಾಕೃತಿ
ಭೇರ್ಯ: ಇಲ್ಲೊಬ್ಬ ವಿದ್ಯಾರ್ಥಿ ಯಾವ ಕಲೆಗಾರರಿಗೂ ಕಮ್ಮಿ ಇಲ್ಲದಂತೆ ಕಲಾಕೃತಿಗಳನ್ನು ಮಾಡಿ ತಾಲೂಕಿನ ಶಾಲೆಗಳಲ್ಲಿ ನಡೆಯುವ ವಿಜ್ಞಾನ ಮೇಳ ಮತ್ತು ವಸ್ತು ಪ್ರದರ್ಶನದಲ್ಲಿಟ್ಟು ಶಿಕ್ಷಕರ ಮತ್ತು ಜನಮನ್ನಣೆ ಗಳಿಸಿದ್ದಾನೆ.
ಇಲ್ಲಿನ ಸರ್ಕಾರಿ ಪ್ರೌಢಶಾಲೆಯ 10ನೇ ತಗರತಿ ವಿದ್ಯಾರ್ಥಿ ಯಾಸೀರ್ ವಿಜ್ಞಾನ ಪ್ರಯೋಗದಲ್ಲಿ ಯಾವುದೇ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೂ ಕಮ್ಮಿ ಇಲ್ಲದಂತೆ ಪ್ರಯೋಗಕ್ಕೆ ಉಪಯೋಗವಾಗುವ ಆಕೃತಿಗಳನ್ನು ಮಾಡುತ್ತಿರುತ್ತಾನೆ. ವಿಜ್ಞಾನ ಪ್ರಯೋಗಕ್ಕೆ ಹೆಚ್ಚು ಆಸಕ್ತಿ ವಹಿಸುವ ಇವನು, ಮನೆಯಲ್ಲಿ ಪ್ರತಿದಿನ ಒಂದಿಲ್ಲೊಂದು ಪ್ರಯೋಗದಲ್ಲಿ ತೊಡಗಿಕೊಳ್ಳುತ್ತಾನೆ. ಬೆಂಡಿನಿಂದ, ತೆಂಗಿನ ಗರಿಯ ಕಡ್ಡಿ, ಚೂರು ಚೂರು ಆಗಿರುವ ಗಾಜು, ಖಾಲಿ ರಟ್ಟಿನ ಬಾಕ್ಸ್, 5 ಗಮ್, ಹೊಲಿಗೆ ದಾರ ಇಂಥವುಗಳನ್ನು ಉಪಯೋಗಿಸಿ ತಾಜ್ಮಹಲ್, ಜಾಮೀಯ ಮಸೀದಿ, ಆನೆ, ಗಿಟಾರ್, ಬಸ್, ಸೇತುವೆ, ಬಿಲ್ಡಿಂಗ್ ಸೇರಿದಂತೆ ವಿವಿಧ ಕಲಾಕೃತಿಗಳನ್ನು ಮಾಡುತ್ತಾನೆ ಎನ್ನುತ್ತಾರೆ ಸ್ನೇಹಿತರು.
ಮನೆಯಲ್ಲಿ ತಂದೆ-ತಾಯಿ, ಈ ರೀತಿ ಮಾಡುವುದರಿಂದ ಪ್ರಯೋಜವಿಲ್ಲಪ್ಪ, ಓದುವ ಕಡೆ ಆಸಕ್ತಿ ವಹಿಸು ಎಂದರೂ ಕೇಳದ ಈತ ದಿನಕ್ಕೊಂದು ಅದ್ಭುತವಾದ ಪ್ರಯೋಗ ಮಾಡುತ್ತಾ ನೂರಾರು ಜನರ ಕಣ್ಮನ ಸೆಳೆದಿದ್ದಾನೆ. ಶಾಲೆಯಲ್ಲಿ ಇಂಥ ವಿದ್ಯಾರ್ಥಿಗಳನ್ನು ಗುರುತಿಸಿ ಅವರಲ್ಲಿ ಅಡಗಿರುವ ಕಲೆಗೆ ಅವಕಾಶ ಕಲ್ಪಿಸಿಕೊಟ್ಟಾಗ ಮಾತ್ರ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆ ಸಿಕ್ಕಿದಂತಾಗುತ್ತದೆ.