'ಯುದ್ಧ ಆಗದಂತೆ ಯುವಶಕ್ತಿ ಒಗ್ಗೂಡಿಸಿ'
ಹುಣಸೂರು: ವಿಶ್ವದಲ್ಲಿ ಮೂರನೇ ಮಹಾಯುದ್ಧ ಆಗದಂತೆ ಮನಸುಗಳನ್ನು ಒಂದುಗೂಡಿಸುವ ಕಾರ್ಯ ಯುವಶಕ್ತಿಯಿಂದ ಆಗಬೇಕೆಂದು ವೇದಿಕೆಯ ಸಂಚಾಲಕಿ, ಮೈಸೂರು ಮಹಾಜನ ಕಾಲೇಜಿನ ಆಂಗ್ಲ ಭಾಷೆಯ ಸಹ ಪ್ರಾಧ್ಯಾಪಕಿ ಪ್ರೊ. ಇಂದ್ರಾಣಿ ಹೇಳಿದರು.
ಪಟ್ಟಣದ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಇತಿಹಾಸ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜಪಾನ್ ಮೇಲೆ ಎರಡನೇ ಮಹಾಯುದ್ಧದ ಪರಿಣಾಮಗಳು ಕುರಿತಾದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಜಪಾನ್ ಅನುಭವಿಸಿದ ನೋವು ಇಂದು ನಮ್ಮೆಲ್ಲರಿಗೂ ಅರಿವು ಆಗಬೇಕು. ಶಾಂತಿ ನಮ್ಮ ಮಂತ್ರವಾಗಬೇಕು. ಕೋಪ ಎಲ್ಲ ಅನಾಹುತಗಳಿಗೂ ಮೂಲ ಎಂಬುದನ್ನು ಅರಿಯಬೇಕು. ಪರ್ಲ್ ಹಾರ್ಬರ್‌ನಲ್ಲಿ 1945ರಲ್ಲಿ ಜಪಾನ್, ಅಮೆರಿಕಾ ಮತ್ತು ಮಿತ್ರ ದೇಶಗಳ 350ಕ್ಕೂ ಹೆಚ್ಚು ಯುದ್ಧನೌಕೆಗಳು, ಆರು ಸರಕು ಸಾಗಾಣಿಕೆ ನೌಕೆಗಳನ್ನು ಸುಟ್ಟು ಹಾಕಿದ ಪರಿಣಾಮ, ಹಿರೋಷಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ಅಣುಬಾಂಬ್ ದಾಳಿಯನ್ನೆದುರಿಸಿ ಸೋತು ಸೊರಗಿತು. ಜಪಾನ್ ತನ್ನ ಹಠಮಾರಿತನದಿಂದ ಎಂದೂ ಮರೆಯಲಾಗದ ಹೊಡೆತವನ್ನೇ ತಿಂದಿತು. ಪ್ರತಿಯೊಬ್ಬರ ಮನದಲ್ಲೂ ಇಂಥ ದ್ವೇಷ, ಅಸಹನೆಯೇ ಭೀಕರ ಯುದ್ಧಗಳಿಗೆ ಕಾರಣವಾಗುತ್ತಿದೆ ಎಂದರು.
ಪ್ರಾಂಶುಪಾಲ ಪ್ರೊ.ಎಚ್.ಸಿ. ಲೋಹಿತಾಶ್ವ ಮಾತನಾಡಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಕೆ.ಎನ್. ಮೋಹನ್, ಅಧ್ಯಾಪಕರಾದ ಸಂತೋಷ್, ಪೂರ್ಣಯೋಗಿ ಭಾಗವಹಿಸಿದ್ದರು.