ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಯುದ್ಧ ಶಸ್ತ್ರಗಳಲ್ಲಿಲ್ಲ, ಮನಸ್ಸಿನಲ್ಲಿದೆ: ಸಿಕೆಎನ್

Vishwanath S
Updated On : 15 Mar 2014, 1:20 am

ಮೈಸೂರು: ಯುದ್ಧವೆಂಬುದು ಶಸ್ತ್ರಗಳಲ್ಲಿಲ್ಲ, ಅಸ್ತ್ರಗಳಲ್ಲಿಲ್ಲ. ಅದು ಮನಸ್ಸಿನಲ್ಲಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಸಿಕೆಎನ್. ರಾಜಾ ವಿಷಾದಿಸಿದರು.
ರೋಟರಿ ಮೈಸೂರು ಉತ್ತರ ಸಂಸ್ಥೆಯು ಶುಕ್ರವಾರ ನಗರದ ರೋಟರಿ ಕೇಂದ್ರದಲ್ಲಿ ಏರ್ಪಡಿಸಿದ್ದ ಶಾಂತಿ ಮತ್ತು ಸಂಘರ್ಷ ತಡೆ- ಒಂದು ಚಿಂತನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಸಂಸ್ಥೆಯು ಯುದ್ಧವನ್ನು ತಡೆಯಲು ಪ್ರಯತ್ನಿಸುತ್ತಿದೆ. ನಾವೆಲ್ಲರೂ ಅದರೊಟ್ಟಿಗೆ ಕೈ ಜೋಡಿಸಿದರೆ ವಿಶ್ವದಲ್ಲಿ, ದೇಶದಲ್ಲಿ ಹಾಗೂ ನಮ್ಮೆಲ್ಲರ ಮನಸ್ಸಿನಲ್ಲಿ ಶಾಂತಿ ನೆಲೆಸುತ್ತದೆ ಎಂದರು.
ರಾಜ್ಯಶಾಸ್ತ ಪ್ರಾಧ್ಯಾಪಕ ಮುಜಾಫರ್ ಅಸಾದಿ ಮಾತನಾಡಿ, ನಾವು ದೇಶಗಳ ನಡುವಿನ ಸಂಘರ್ಷಕ್ಕಿಂತ ನಾಗರಿಕತೆಗಳ ನಡುವಿನ ಸಂಘರ್ಷವನ್ನು ನೋಡುತ್ತಿದ್ದೇವೆ. ಪಾಶ್ಚಿಮಾತ್ಯ, ಲ್ಯಾಟಿನ್ ಅಮೆರಿಕ, ಇಸ್ಲಾಮಿಕ್, ಚೈನೀಸ್, ಹಿಂದೂ, ಆರ್ಥೋಡಕ್ಸ್, ಜಪಾನ್ ಹಾಗೂ ಆಫ್ರಿಕನ್ ನಾಗರಿಕತೆಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಅದರಲ್ಲೂ ಆಂಗ್ಲರು ತಮ್ಮ ವೈರಿಗಳನ್ನಾಗಿ ಇಸ್ಲಾಮಿಕ್ ನಾಗರಿಕತೆಯನ್ನೇ ಟಾರ್ಗೆಟ್ ಮಾಡುತ್ತಾರೆ. ಇದರ ಹಿಂದೆ ಅಮೆರಿಕ ಕೆಲಸ ಮಾಡುತ್ತಿದೆ ಎಂದರು.
ಅಮೆರಿಕವು ವೈರಿಗಳಿಲ್ಲದಿದ್ದರೆ ಬದುಕುವುದಿಲ್ಲ. ಯಾವುದೇ ದೇಶದ ನಡುವೆ ಜಗಳ ನಡೆದರೂ ಅಲ್ಲಿ ಅಮೆರಿಕ ಶಸ್ತ್ರಾಸ್ತ್ರಗಳು ಕೆಲಸ ಮಾಡುತ್ತವೆ. ಪಾಶ್ಚಿಮಾತ್ಯ ಹಾಗೂ ಇಸ್ಲಾಮಿಕ್ ನಾಗರಿಕತೆಗಳ ನಡುವೆ ಸಂಘರ್ಷ ಏರ್ಪಡಲು ಪ್ರಮುಖ ಕಾರಣಗಳಿವೆ. ಹುಟ್ಟು ಭಿನ್ನಾಭಿಪ್ರಾಯ, ಜಗತ್ತು ಚಿಕ್ಕದಾದಂತೆಲ್ಲಾ ಸಂಘರ್ಷಗಳು ಹೆಚ್ಚುತ್ತಿರುವುದು, ಆರ್ಥಿಕ ಬೆಳವಣಿಗೆಯಿಂದ ಪರಸ್ಪರ ಸಹಿಸಿಕೊಳ್ಳಲಾಗದ ಪರಿಸ್ಥಿತಿ, ಆಧುನಿಕತೆ ಸಮಸ್ಯೆ, ಭಿನ್ನ ಸಂಸ್ಕೃತಿ ತಿಕ್ಕಾಟಗಳು ಪ್ರಮುಖವಾದವು ಎಂದರು.
ಇದೇ ವೇಳೆ ಗೃಹ ರಕ್ಷಕಿ ಶಿವರಂಜನಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಮೈಸೂರು ಉತ್ತರದ ಅಧ್ಯಕ್ಷ ಜಿ. ಶಿವಲಿಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಫಾ. ಲೆಸ್ಲಿ ಮೊರಾಸ್, ಮಹದೇವಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement