ಸ್ಥಗಿತಗೊಂಡಿರುವ ಕಟ್ಟಡ ಕಾಮಗಾರಿ
ಕೆ.ಆರ್. ನಗರ: ಶಾಲಾ ಕೊಠಡಿಗಳನ್ನು ನಿರ್ಮಿಸಲು ತಳಪಾಯ ತೆಗೆದ ಗುತ್ತಿಗೆದಾರ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದು, ಇದರ ಪುನರಾರಂಭಕ್ಕೆ ಇಲಾಖೆ ಅಧಿಕಾರಿಗಳು ಮುಂದಾಗದ ಪರಿಣಾಮ ತಳಪಾಯದ ಜಾಗ ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ತಂದೊಡ್ಡಿದೆ.
ತಾಲೂಕಿನ ಹೊಸೂರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಸುಮಾರು 46 ಲಕ್ಷ ವೆಚ್ಚದಲ್ಲಿ 5 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಅಡಿಪಾಯ ತೆಗೆದು ನಂತರ ಕಾಮಗಾರಿ ಆರಂಭಿಸದೆ ಎರಡು ತಿಂಗಳಿಂದ ಸ್ಥಗಿತಗೊಳಿಸಿದ್ದು, ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ.
ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಚುನಾಯಿತ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಇತ್ತ ತಿರುಗಿಯೂ ನೋಡದಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿವಂತಾಗಿದೆ. ಸಂಬಂಧಿತರು ಈಗಲಾದರೂ ನಿಂತು ಹೋಗಿರುವ ಕಾಲೇಜಿನ ಕೊಠಡಿಗಳ ನಿರ್ಮಾಣ ಕಾಮಗಾರಿ ಆರಂಭಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಉಪಯೋಗಕ್ಕೆ ದೊರಕುವಂತೆ ಮಾಡಬೇಕಿದೆ.