ಅಧ್ಯಾತ್ಮಿಕ ಅಧಃಪತನ
ಮೈಸೂರು: ಇಂದು ದೇಶದಲ್ಲಿ ಆಧ್ಯಾತ್ಮಿಕ ಅಧಃಪತನ ಎದುರಾಗಿದೆ ಎಂದು ಪ್ರಸಿದ್ಧ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ವಿಷಾದಿಸಿದರು.
ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನವು ಎಂಜಿನಿಯರುಗಳ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ವಾಂಸ ಹಾಗೂ ಚಿಂತಕ ಡಾ.ಕೆ.ಎಸ್. ನಾರಾಯಣಾಚಾರ್ಯ ರಚಿಸಿರುವ ಗಾಂಧಿಯನ್ನು ನಿಜವಾಗಿ ಕೊಂದವರು ಯಾರು, ದೇವಕಿಯ ಚಿಂತನೆಗಳು ಹಾಗೂ ವಾಲ್ಮೀಕಿ ಯಾರು ಎಂಬ ಮೂರು ಕೃತಿಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ರಾಮಾಯಣಕ್ಕೂ ವಾಲ್ಮೀಕಿಗೂ ಯಾವುದೇ ಭಿನ್ನತೆಯಿಲ್ಲ. ರಾಮಾಯಣ ಎಂದರೇ ವಾಲ್ಮೀಕಿ ಹಾಗೂ ವಾಲ್ಮೀಕಿ ಎಂದರೇ ರಾಮಾಯಣ. ಆದರೆ ವಾಲ್ಮೀಕಿಯನ್ನು ಪೂಜಿಸುವ ಜನರಿಗೆ ರಾಮನೂ ಬೇಡ ಹಾಗೂ ರಾಮಾಯಣವೂ ಬೇಡವಾಗಿದೆ. ಕೆಲವರು ವಾಲ್ಮೀಕಿ ಜಾತಿ ಯಾವುದು ಎಂಬುದರ ಕುರಿತು ಚರ್ಚೆಗಳನ್ನು ನಡೆಸುತ್ತಿದ್ದಾರೆ. ಇದನ್ನು ಗಮನಿಸಿದರೆ ದೇಶದಲ್ಲಿ ಆಧ್ಯಾತ್ಮಿಕತೆಯ ಅಧಃಪತನ ಎದುರಾಗಿದೆ ಎನ್ನಬಹುದು ಎಂದರು.
ಚುನಾವಣೆಯ ಸನ್ನಿವೇಶದಲ್ಲಿ ಜಾತಿಯ ಬಣ್ಣ ಕಟ್ಟಿ ಮತ ಸೆಳೆಯುವುದು ಸಹಜ. ವಾಲ್ಮೀಕಿ ಬೇಡನೆಂತಲೂ, ವ್ಯಾಸ ಬೆಸ್ತರೆಂತಲೂ ಹೇಳುತ್ತಾರೆ. ಆದರೆ ಡಾ. ನಾರಾಯಣಾಚಾರ್ಯರ ವಾಲ್ಮೀಕಿ ಯಾರು ಕೃತಿಯನ್ನು ಓದಿದರೆ ಸತ್ಯ ಸಂಗತಿ ತಿಳಿಯಲಿದೆ. ಆಧ್ಯಾತ್ಮಿಕ ನೆಲೆಯಲ್ಲಿ ಶೋಧಿಸಿಯೇ ಅವರು ಈ ಕೃತಿ ರಚಿಸಿದ್ದಾರೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಚಿಂತಕ ಸೂಲಿಬೆಲೆ ಚಕ್ರವರ್ತಿ ಹಾಗೂ ಗ್ರಂಥಕರ್ತ ಡಾ.ಕೆ.ಎಸ್. ನಾರಾಯಣಾಚಾರ್ಯ ಮಾತನಾಡಿದರು. ಸಾಹಿತಿ ಬಾಬು ಕೃಷ್ಣಮೂರ್ತಿ, ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್, ಮಾಜಿ ಸದಸ್ಯ ತೋಂಟದಾರ್ಯ, ಎಂಜಿನಿಯರುಗಳ ಸಂಸ್ಥೆ ಅಧ್ಯಕ್ಷ ಡಾ. ಟಿ. ಅನಂತ ಪದ್ಮನಾಭ ಇದ್ದರು. ಡಾ. ಜಿ.ಎಲ್. ಶೇಖರ್ ಸ್ವಾಗತಿಸಿದರು.