ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಿ: ಶ್ರೀಗಳ ಕರೆ
ಕೆ.ಆರ್. ನಗರ: ಆಧುನಿಕ ಯುಗದಲ್ಲಿ ದುಂದು ವೆಚ್ಚದ ಮದುವೆಗಳು ಹೆಚ್ಚುತ್ತಿದ್ದು ಇವುಗಳಿಗೆ ಕಡಿವಾಣ ಹಾಕಲು ಸಾಮೂಹಿಕ ವಿವಾಹಗಳನ್ನು ಮಾಡುವುದರ ಜತೆಗೆ ವೆಚ್ಚದ ಮದುವೆಗಳಿಂದ ಆಗುವ ಆರ್ಥಿಕ ನಷ್ಟದ ಬಗ್ಗೆ ಜನರಿಗೆ ತಿಳಿ ಹೇಳಬೇಕಿದೆ ಎಂದು ಆರ್ಯ ಈಡಿಗ ಮಹಾ ಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಹೇಳಿದರು.
ಮೈಸೂರು- ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಟಿ. ಶಿವಣ್ಣ ಅವರ ಪಟ್ಟಣದ ನಿವಾಸದಲ್ಲಿ ನಡೆದ ಉದ್ಯಮಿ ಎಂ.ಕೆ. ಪೋತರಾಜು ಷಷ್ಠಿಪೂರ್ತಿ ಸಮಾರಂಭ ಮತ್ತು ಸಾಮೂಹಿಕ ವಿವಾಹ ಸೇವಾ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಾಮೂಹಿಕ ವಿವಾಹವನ್ನು ಕೇವಲ ಒಂದು ಸಮಾಜಕ್ಕೆ ಸೀಮಿತಗೊಳಿಸದೆ ಸರ್ವಧರ್ಮದವರನ್ನು ಒಗ್ಗೂಡಿಸಿ ಎಲ್ಲರನ್ನೂ ಸೇರಿಸಿ ಬಸವಣ್ಣನವರ ಅನುಭವ ಮಂಟಪ ನೆನಪಿಸುವಂತೆ 60 ಮಂದಿ ಧರ್ಮ ಗುರುಗಳ ಸಮ್ಮುಖದಲ್ಲಿ ನೆರವೇರಿಸಲಾಗುತ್ತಿದೆ. ಈಗಾಗಲೇ ಮಾ.28 ರಂದು ನಡೆಯುವ ಸಾಮೂಹಿಕ ವಿವಾಹ ಸಂಬಂಧ ಪ್ರವಾಸ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದು ನೂರಾರು ಜೋಡಿಗಳು ವಿವಾಹವಾಗಲು ಹೆಸರು ನೋಂದಾಯಿಸಿಕೊಂಡಿದ್ದು ಆಸಕ್ತಿಯುಳ್ಳವರು ಒಂದು ವಾರ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಿ ಎಂದು ತಿಳಿಸಿದರು.
ಸಾಮೂಹಿಕ ವಿವಾಹದ ಜತೆಗೆ ಭಾರತೀಯ ಸಂಸ್ಕೃತಿಯ ಸರ್ವಧರ್ಮದ ಬೃಹತ್ ಸಂತ ಸಮಾವೇಶ, ಉಚಿತ ಆರೋಗ್ಯ ಮತ್ತು ರಕ್ತದಾನ ಶಿಬಿರ, ಉದ್ಯೋಗ ಮೇಳ, ಜಾನಪದ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದ್ದು, ಸಮಿತಿಯ ವತಿಯಿಂದ ಸಾಮೂಹಿಕ ವಿವಾಹವಾಗುವ ಜೋಡಿಗಳಿಗೆ ಉಚಿತವಾಗಿ ವಸ್ತ್ರಗಳನ್ನು ನೀಡುವುದರ ಜತೆಗೆ ವಧುವಿಗೆ ವಾಲೆ, ತಾಳಿ ನೀಡಿ ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶ್ರೀಗಳು ಮಾಹಿತಿ ನೀಡಿದರು. ವಿವಾಹ ಸಮಿತಿ ಅಧ್ಯಕ್ಷ ಗುರುಸ್ವಾಮಿ, ಸಂಚಾಲಕ ಕೃಷ್ಣಮೂರ್ತಿ, ಪುರಸಭಾ ಸದಸ್ಯ ಎನ್. ಶಿವಕುಮಾರ್, ಪದಾಧಿಕಾರಿಗಳಾದ ವೆಂಕಟೇಶಯ್ಯ, ರಾಜು, ಮಹದೇವ್, ಪುಟ್ಟಣ್ಣ, ಕೆ.ಎಸ್. ಮುರಳಿ, ಪೂರ್ಣಿಮಾ ಇದ್ದರು.