ನಾಡಹಬ್ಬ ದಸರಾ ಸಾರ್ವಕಾಲಿಕ ಕೃತಿ
ಮೈಸೂರು: ನಾಡಹಬ್ಬ ದಸರಾ ಪುಸ್ತಕವು ಸಾರ್ವಕಾಲಿಕ ಕೃತಿ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಎನ್.ಎಸ್. ತಾರಾನಾಥ ಹೇಳಿದರು.
ನಗರದ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಸಂಸ್ಕೃತಿ ಬುಕ್ ಏಜೆನ್ಸೀಸ್ ಭಾನುವಾರ ಆಯೋಜಿಸಿದ್ದ ತಹಸೀಲ್ದಾರ್ ಡಾ.ವಿ.ರಂಗನಾಥ್ ಅವರ ನಾಡಹಬ್ಬ ದಸರಾ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಕೃತಿ ಕುರಿತು ಮಾತನಾಡಿದರು.
ಮಹಾರಾಜರ ಕಾಲದಲ್ಲಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ಮೇಲೆ ನಡೆಯುತ್ತಿರುವ ದಸರಾ ಮಹೋತ್ಸವ ಚಿತ್ರಣ, ಮಾಹಿತಿಯು ಈ ಪುಸ್ತಕದಲ್ಲಿ ಅಡಗಿದೆ. ಮೈಸೂರು, ಮಂಗಳೂರು, ಮಡಿಕೇರಿ ದಸರಾದ ವ್ಯತ್ಯಾಸವನ್ನು ಈ ಕೃತಿಯಲ್ಲಿ ಗುರುತಿಸಲಾಗಿದೆ. ದಸರಾಗೆ ಸಂಬಂಧಿಸಿದಂತೆ ಎಲ್ಲ ಕಾಲದಲ್ಲೂ ಓದಬಹುದಾದ ಅಧಿಕೃತ ಕೃತಿ (ನಾಡಹಬ್ಬ ದಸರಾ) ಇದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ದಾಖಲೆಗಳನ್ನು ಆಧರಿಸಿ, ಕ್ಷೇತ್ರ ಸಂಶೋಧನೆ ಹಾಗೂ ಪ್ರಶ್ನಾವಳಿ ಮೂಲಕ ಸಂಶೋಧನೆಗಳನ್ನು ಮಾಡಲಾಗುತ್ತದೆ. ಈ ಮೂರು ಅಂಶಗಳನ್ನು ಈ ಕೃತಿ ಒಳಗೊಂಡಿದೆ. ಡಾ. ರಂಗನಾಥ್ ಅವರು ತಮ್ಮ ಪಿಎಚ್.ಡಿ ಪ್ರಬಂಧವನ್ನು ಪುಸ್ತಕ ರೂಪದಲ್ಲಿ ತಂದಿದ್ದಾರೆ. ಪ್ರಸ್ತುತ ಪಿಎಚ್.ಡಿ ಎಂಬುದು ನಿರ್ಧಿಷ್ಟ ಸಮಯದಲ್ಲಿ ಪಡೆಯುವುದಾಗಿದೆ. ಆದರೆ, ಡಾ.ರಂಗನಾಥ್ ಅವರು ಪ್ರತಿಷ್ಠಿತ ಸಂಶೋಧನೆ ಮಾಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ದಸರಾ ಎನ್ಸೈಕ್ಲೋಪಿಡಿಯಾ: ಪುಸ್ತಕ ಬಿಡುಗಡೆಗೊಳಿಸಿದ ಭಾರತೀಯ ವಿದ್ಯಾಭವನದ ಅಧ್ಯಕ್ಷ ಪ್ರೊ.ಎ.ವಿ. ನರಸಿಂಹಮೂರ್ತಿ ಮಾತನಾಡಿ, ಈ ಪುಸ್ತಕವು ಮೈಸೂರು ದಸರಾ ಕುರಿತ ಎನ್ಸೈಕ್ಲೋಪಿಡಿಯಾ. ಎಲ್ಲ ಕಾಲದ ದಸರಾ ಮಾಹಿತಿಯು ಪುಸ್ತಕದಲ್ಲಿದೆ. ಕನ್ನಡದಲ್ಲಿ ಪುಸ್ತಕ ಹೊರ ತಂದಿರುವುದರಿಂದ ಕನ್ನಡಿಗರಿಗೆ ಮಾತ್ರ ಅನುಕೂಲ ಆಗುತ್ತದೆ. ಈ ಪುಸ್ತಕವನ್ನು ಇಂಗ್ಲಿಷ್ಗೂ ಅನುವಾದಿಸಬೇಕು. ಇದರಿಂದ ದೇಶ ಮತ್ತು ವಿದೇಶದವರಿಗೂ ದಸರಾ ಕುರಿತು ಮಾಹಿತಿ ಲಭ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಪುಸ್ತಕವನ್ನು ಹೊರ ತಂದಿರುವ ಸಂಸ್ಕೃತಿ ಬುಕ್ ಏಜೆನ್ಸೀಸ್ನ ಸಂಸ್ಕೃತಿ ಸುಬ್ರಹ್ಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡಹಬ್ಬ ದಸರಾ ಪುಸ್ತಕವು 500 ಪುಟಗಳಿಂದ ಕೂಡಿದೆ. ಹೀಗಾಗಿ ಪುಸ್ತಕದ ಬಗ್ಗೆ ಸಂಕ್ಷಿಪ್ತ ಮಾಹಿತಿಯುಳ್ಳ ಕಿರು ಹೊತ್ತಿಗೆಯನ್ನು ಸಹ ತರುವ ಮೂಲಕ ಹೊಸ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.
ಹಿರಿಯ ಸಂಶೋಧಕ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ಸಿ. ನಾಗಣ್ಣ, ಚಿತ್ರ ನಟ ಹಾಗೂ ಭರತನಾಟ್ಯ ಕಲಾವಿದ ಶ್ರೀಧರ್, ಲೇಖಕ ಹಾಗೂ ಎಚ್.ಡಿ. ಕೋಟೆ ತಹಸೀಲ್ದಾರ್ ಡಾ.ವಿ. ರಂಗನಾಥ್ ಇದ್ದರು.