'ಭಕ್ತಿಯನ್ನು ಆಸ್ತಿ ಮಾಡಿಕೊಳ್ಳಲು ಬಿಡದ ವಚನಕಾರರು'
ಮೈಸೂರು: ವಚನಕಾರರು ಶಿವಭಕ್ತರಾಗಿದ್ದರೂ ಭಕ್ತಿಯನ್ನು ಆಸ್ತಿಯನ್ನಾಗಿ ಮಾಡಿಕೊಳ್ಳಲು ಬಿಡಲಿಲ್ಲ. ಭಕ್ತಿ ಖಾಸಗಿಯಾಗಿಯೇ ಉಳಿದಿದ್ದರಿಂದ ಸೈದ್ಧಾಂತಿಕ ಪಲ್ಲಟ ಸಾಧ್ಯವಾಯಿತು ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣ ಸಂಶೋಧನಾ ಮತ್ತು ವಿಸ್ತರಣ ಕೇಂದ್ರ ಹಾಗೂ ರಂಗಾಯಣ ಸಂಯುಕ್ತವಾಗಿ ಶನಿವಾರ ಏರ್ಪಡಿಸಿದ್ದ ವಚನ ಸಾಹಿತ್ಯ- ಪ್ರಚಾರೋಪನ್ಯಾಸ ಮಾಲೆಯ ಎರಡನೇ ವಿಶೇಷ ಉಪನ್ಯಾಸದಲ್ಲಿ ವಚನ ಸಾಹಿತ್ಯ ಮತ್ತು ಮೂಢನಂಬಿಕೆಯ ಪ್ರಶ್ನೆ ಕುರಿತು ಅವರು ಮಾತನಾಡಿದರು.
ಭಕ್ತಿ ಖಾಸಗಿಯಾಗಿದ್ದರಿಂದ ವಚನ ಸಾಹಿತ್ಯದಲ್ಲಿ ಶರಣ ಸತಿ, ಲಿಂಗಪತಿ ಎಂಬ ಪರಿಕಲ್ಪನೆ ಹುಟ್ಟಿಕೊಂಡಿತು. ದೈವದೊಂದಿಗೆ ನೇರ ಸಂವಾದಿಸುವ ಈ ಪ್ರಕ್ರಿಯೆ ಮೂಢನಂಬಿಕೆಯನ್ನು ವಿರೋಧಿಸಿತು. ಧರ್ಮ ಸಂಸ್ಥೆಯಾಗದೆ ಉಳಿಯಿತು. ಆಸ್ತಿಕರಾಗಿ ದೈವವನ್ನು ನಂಬಿದವರು ಮೋಸ ಹೋಗಲಿಲ್ಲ. ದೇವಾಲಯವನ್ನು ತಿರಸ್ಕರಿಸಿ ಎನ್ನ ದೇಹವೇ ದೇಗುಲ ಎಂದು ಹೇಳಿ ಬೀಗಿದರು. ಈ ಸೈದ್ಧಾಂತಿಕ ಪಲ್ಲಟ ವಚನ ಸಾಹಿತ್ಯದಲ್ಲಿ ಮಹತ್ತರವಾದದು ಎಂದರು.
ಯಾರು ನಂಬಿಕೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡು, ಲಾಭಕ್ಕಾಗಿ ಬಳಸಿಕೊಳ್ಳುತ್ತಾರೋ ಆಗ ನಂಬಿಕೆ ಮೂಢನಂಬಿಕೆಯಾಗಿ ಪರಿವರ್ತನೆಯಾಗುತ್ತದೆ.
ಬಹುಶಃ ಮೂಢನಂಬಿಕೆಗೆ ಇದೇ ಪ್ರೇರಕ ಶಕ್ತಿಯಾಗಿಯೂ ಬೆಳೆದಿರಬಹುದು. ಒಂದು ಕಡೆ ಅಧಿಕಾರ, ಗಳಿಸಿಕೊಂಡ ಸಂಪತ್ತನ್ನು ಉಳಿಸಿಕೊಳ್ಳುವ ಅಭದ್ರತೆ ಕಾಡಿದರೆ, ಮತ್ತೊಂದಡೆ ಜೀವನ ಮಾಡಲು ಅಭದ್ರತೆ ಕಾಡಿತು. ಇವರಿಬ್ಬರ ನಡುವೆ ಮೂಢನಂಬಿಕೆ ಸುಳಿದು ದೇವಾಲಯಗಳು ಜನರನ್ನು ಶೋಷಣೆ ಮಾಡಲು ಮುಂದಾದವು. ಈ ಪ್ರಕ್ರಿಯೆಯನ್ನು ವಚನಕಾರರು ಬಹಳ ಧೈರ್ಯದಿಂದ ಎದುರಿಸಿದರು ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ನೀಲಗಿರಿ ಎಂ. ತಳವಾರ್, ರಂಗಾಯಣ ನಿರ್ದೇಶಕ ಎಚ್. ಜನಾರ್ದನ್, ಉಪನಿರ್ದೇಶಕ ಎಸ್.ಐ. ಭಾವಿಕಟ್ಟಿ ಇದ್ದರು.