ಮೂಲಭೂತ ಸೌಕರ್ಯ ಒದಗಿಸಲು ಒತ್ತಾಯ
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ದಟ್ಟಗಳ್ಳಿ 3ನೇ ಹಂತದಲ್ಲಿ ಸಮಸ್ಯೆಗಳು ತಾಂಡವಾಡುತ್ತಿದೆ. ಮ್ಯಾನ್‌ಹೋಲ್‌ನಿಂದ ಕೊಳಚೆ ನೀರು ರಸ್ತೆಗೆ ಹರಿದು ಬರುತ್ತಿದೆ. ಇದರಿಂದ ಮನೆಯ ಶೌಚಾಲಯ ಕಟ್ಟಿಕೊಂಡು ದುರ್ನಾತ ಬರುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಮುಳ್ಳಿನ ಗಿಡಗಳು ದೊಡ್ಡದಾಗಿ ಬೆಳೆದು ಓಡಾಡಲು ಅನಾನುಕೂಲವಾಗಿದೆ. ಬೀದಿ ದೀಪಗಳಿಲ್ಲದೆ ಕತ್ತಲೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ಇದೆ. ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ತೆರಿಗೆ ಪಾವತಿಸಿದರೂ ನಮಗೆ ನಾಗರಿಕ ಸೌಲಭ್ಯ ದೊರಕದೆ ನರಕಯಾತನೆ ಅನುಭವಿಸುತ್ತಿದ್ದೇವೆ. ಕೂಡಲೆ ನಮಗೆ ಮೂಲ ಸೌಕರ್ಯ ಕಲ್ಪಿಸಿಕೊಡುವಂತೆ ಒತ್ತಾಯ.
-ಕೆ. ಕೃಷ್ಣೇಗೌಡ ಹಾಗೂ ಸ್ಥಳೀಯ ನಿವಾಸಿಗಳು, ಎಫ್ ಬ್ಲಾಕ್, ದಟ್ಟಗಳ್ಳಿ 3ನೇ ಹಂತ, ಕನಕದಾಸನಗರ.
ಜಾಲರಿ ತಂತಿ ಬೇಲಿ ಅಳವಡಿಸಿ
ನಗರದ ಯಾದವಗಿರಿಯ ಶಾಲೆಯ ಸುತ್ತ ಮುಳ್ಳುತಂತಿ ಬೇಲಿಯನ್ನು ಇತ್ತೀಚೆಗೆ ಹಾಕಿದ್ದಾರೆ. ಸಣ್ಣ ಮಕ್ಕಳು ತಮ್ಮ ಹುಡುಗಾಟದಲ್ಲಿ ಬೇಲಿಯ ಮುಳ್ಳುಗಳಿಂದ ಗಾಯಗೊಳ್ಳಬಹುದು. ಮುಳ್ಳುತಂತಿ ಬೇಲಿಯ ಬದಲು ಜಾಲರಿ ತಂತಿಯ ಬೇಲಿಯನ್ನು ಅಳವಡಿಸುವಂತೆ ಮನವಿ.
-ವಿಶ್ವಾಸ್ ಕೃಷ್ಣ, ಮೈಸೂರು ಗ್ರಾಹಕರ ಪರಿಷತ್
ಪ್ರವಾಸಿ ಟ್ಯಾಕ್ಸಿ ಸಾಲ ಮನ್ನಾ ಮಾಡಿ
ಪ.ಜಾತಿ ಮತ್ತು ವರ್ಗದ ನಿರುದ್ಯೋಗಿ ಯುವಕರಿಗಾಗಿಯೇ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಶೇ. 50ರ ಸಹಾಯಧನದಲ್ಲಿ ನೀಡಲಾಗಿರುವ ಪ್ರವಾಸಿ ಟ್ಯಾಕ್ಸಿಗಳ ಫಲಾನುಭವಿಗಳು ಪಡೆದುಕೊಂಡಿರುವ ಬ್ಯಾಂಕ್ ಸಾಲವನ್ನು ಮನ್ನಾ ಮಾಡದೆ ಕೈ ಬಿಟ್ಟಿರುವುದು ಹಲವಾರು ಪ.ಜಾತಿ ವರ್ಗದ ಫಲಾನುಭವಿಗಳಲ್ಲಿ ಬೇಸರ ಉಂಟು ಮಾಡಿದೆ. ಫಲಾನುಭವಿಗಳು ತಮ್ಮ ಕುಟುಂಬದ ಜೀವನ ನಿರ್ವಹಣೆ ಜೊತೆಗೆ ಬ್ಯಾಂಕ್ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರವು ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸಿ ಟ್ಯಾಕ್ಸಿ ಪಡೆದಿರುವ ಪ. ಜಾತಿ ಹಾಗೂ ವರ್ಗದ ಫಲಾನುಭವಿಗಳ ಸಾಲ ಮನ್ನಾ ಮಾಡುವಂತೆ ಮನವಿ.
- ಪ. ಜಾತಿ, ವರ್ಗದ ಫಲಾನುಭವಿಗಳು, ಮೈಸೂರು
ಹೊನ್ನಮ್ಮನಕಟ್ಟೆ ಕ್ರಾಸ್‌ನಲ್ಲಿ ಅಪಘಾತ ತಪ್ಪಿಸಿ
ಎಚ್.ಡಿ. ಕೋಟೆ ತಾಲೂಕಿನ ಅಂತರಸಂತೆ ಗ್ರಾಮದ ಸಮೀಪವಿರುವ ಮೈಸೂರು ಮಾನಂದವಾಡಿ ಮುಖ್ಯ ರಸ್ತೆಯ ಹೊನ್ನಮ್ಮನಕಟ್ಟೆ ಕ್ರಾಸ್‌ನಲ್ಲಿ ಇತ್ತೀಚೆಗೆ ಉದ್ಬೂರು ಗೇಟ್‌ನಿಂದ ಹೊನ್ನಮ್ಮನಕಟ್ಟೆ ಕ್ರಾಸ್‌ವರೆಗೆ ಉತ್ತಮ ರಸ್ತೆ ನಿರ್ಮಾಣವಾಗಿದೆ. ಈ ಕ್ರಾಸ್‌ನಲ್ಲಿ ಹಲವಾರು ಅಪಘಾತಗಳಾಗಿದ್ದು, ಈ ತಿರುವುನಲ್ಲಿ ರಸ್ತೆ ಡುಬ್ಬ ನಿರ್ಮಿಸಿ ಅಪಘಾತ ತಪ್ಪಿಸುವಂತೆ ಒತ್ತಾಯ.
-ಮುನವರ್‌ಪಾಷ, ಗ್ರಾಪಂ ಸದಸ್ಯ
ಚಾವಣಿ ಹಾಕುವುದು ಬೇಡ
ಚಾಮುಂಡಿಬೆಟ್ಟದಲ್ಲಿ ಯಾವುದೇ ಕಾಮಗಾರಿಗಳನ್ನು ಮಾಡಬಾರದೆಂದು ಆದೇಶವಿದ್ದರೂ ಕಾನೂನಿನ ವಿರುದ್ಧವಾಗಿ ಹಣ ಲೂಟಿ ಹೊಡೆಯುವ ಉದ್ದೇಶದಿಂದ ಬೆಟ್ಟದ ಮೆಟ್ಟಿಲಿಗೆ ಛಾವಣಿ, ಶೌಚಾಲಯ ನಿರ್ಮಾಣಕ್ಕೆ ಹೊರಟಿದೆ. ಪರಿಸರ ಮತ್ತು ಪ್ರಾಣಿ-ಪಕ್ಷಿಗಳಿಗೆ ತೊಂದರೆಯಾಗುವ ಉದ್ದೇಶದಿಂದ ಇದರ ಬಗ್ಗೆ ಜಿಲ್ಲಾಡಳಿತಕ್ಕೆ 2-3 ಬಾರಿ ತಿಳಿಸಿದ್ದರೂ ಕಾನೂನಿನ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಉಸ್ತುವಾರಿ ಸಚಿವರು ಕೂಡ ಬಂಡತನದಿಂದ ಕಾಮಗಾರಿಗೆ ಕೈಹಾಕಿದ್ದಾರೆ. ಇದೊಂದು ವ್ಯರ್ಥ ಪ್ರಯತ್ನ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದನ್ನು ನಿರ್ಮಿಸಿದರೆ ಚಾಮುಂಡಿಬೆಟ್ಟದ ಅಂದವೇ ಹೊರಟು ಹೋಗುತ್ತದೆ. ಬೆಟ್ಟದ ಮೆಟ್ಟಿಲುಗಳ ಹಾದಿಯ ಇಕ್ಕೆಲಗಳಲ್ಲೂ ವೃಕ್ಷಗಳಿದ್ದು, ಅದರ ನೆರಳು ಹೇರಳವಾಗಿ ದೊರೆಯುತ್ತದೆ. ಚಾವಣಿ ನಿರ್ಮಿಸುವ ನೆಪದಲ್ಲಿ ಅದರ ಅಂದ ಹಾಳು ಗೆಡವಲು ನಾವು ಬಿಡುವುದಿಲ್ಲ. ಪರಿಸರ ಉಳಿಸುವಂತೆ ಒತ್ತಾಯಿಸಲಾಗಿದ್ದು, ಈ ಪ್ರಸ್ತಾವನೆ ಕೈಬಿಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು.
- ಭಾನುಮೋಹನ್, ಪರಿಸರ ಸಂಕ್ಷಣಾ ಸಮಿತಿ ರಾಜ್ಯಾಧ್ಯಕ್ಷೆ, ಎಂ. ಬಸವರಾಜು, ಜೆಡಿಎಸ್ ಕೆ.ಆರ್. ಬ್ಲಾಕ್ ಅಧ್ಯಕ್ಷ, ಸಂದೇಶ್ ಸ್ವಾಮಿ, ಮಾಜಿ ಮೇಯರ್, ಎಸ್. ಅರುಣ್‌ಕುಮಾರ್, ವಕೀಲರು, ಎನ್.ಬಿ. ಆರಾಧ್ಯ, ಲೆಕ್ಕ ಪರಿಶೋಧಕರು,
ಆಶ್ರಯ ನಿವೇಶನಗಳ ವಿವಾದ ಬಗೆಹರಿಸಿ
ಕೆ.ಆರ್. ನಗರದ ಚೀರ್ನಹಳ್ಳಿ ರಸ್ತೆ ಬಡಾವಣೆಯ ಮಧುವನಹಳ್ಳಿ, ಸರ್ವೆ ನಂ. 23/ಎನ್ ಮತ್ತು ಮತ್ತು 23/ಡಬ್ಲ್ಯು ನಲ್ಲಿ ಪುರಸಭೆ ಆಶ್ರಯ ಸಮಿತಿ 1992ರಲ್ಲಿ ಸುಮಾರು 150 ನಿವೇಶನಗಳನ್ನು ಬಡ ಕುಟುಂಬಗಳಿಗೆ ಹಂಚಿಕೆ ಮಾಡಿದೆ. ಹಿಂದಿನ ನಗರ ಯೋಜನೆಯಾಗಲಿ, ಇಂದಿನ ಪುರಸಭೆಯಾಗಲಿ ಪಾರ್ಕಿಗೆ ಸ್ಥಳಗಳನ್ನು ಯಾವ ಬಡಾವಣೆ ನಿರ್ಮಾಣ ಸಮಯದಲ್ಲಿ ಗುರುತಿಸಿಲ್ಲ. ಆದರೆ ಈ 23/ಎನ್ ರಲ್ಲಿ ರಚಿಸಿರುವ ಆಶ್ರಯ ನಿವೇಶನ ಉದ್ಯಾನಕ್ಕೆ ನಿಗದಿಪಡಿಸಿದೆ ಎಂದು ಯಾವ ದಾಖಲೆಯು ಸಹ ಇಲ್ಲದೆ ಕಟ್ಟಡಗಳನ್ನು ಕಟ್ಟಲು ತಡೆವೊಡ್ಡುವುದು ಸರಿಯಲ್ಲ. ನಿವೇಶನದಾರರಿಗೆ ಕಟ್ಟಡ ಕಟ್ಟಲು ಪುರಸಭೆ ಲೈಸೆನ್ಸ್ ನೀಡಿದೆ. ಬಡ ಜನರ ನಿವೇಶನದಾರರನ್ನು ಹೊರದೂಡಲು ಒಂದು ತಂತ್ರವೆಂದು ಜನರು ಭಾವಿಸಿದ್ದಾರೆ. ಕೂಡಲೆ ಜಿಲ್ಲಾಧಿಕಾರಿಗಳು ನಿವೇಶನದಾರರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೋರಿಕೆ.
- ಟಿ.ಕೆ. ಚಿನ್ನಸ್ವಾಮಿ, ಮಾಜಿ ಶಾಸಕ, ಕೆ.ಆರ್. ನಗರ
ಕೆಪಿಎಸ್ಸಿ ಆಯ್ಕೆ
ಪಟ್ಟಿ ರದ್ದು ಮಾಡಿ
2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆ ಪಟ್ಟಿಯು ಹಲವಾರು ಗೊಂದಲಗಳ ಮಧ್ಯೆಯೇ ಬಿಡುಗಡೆಯಾಗಿದೆ. ಈ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಿಐಡಿ ವರದಿಯಿಂದ ಹಾಗೂ ಕೆಲವು ಪತ್ರಿಕಾ ವರದಿಗಳಿಂದ ಸಾಬೀತಾಗಿದ್ದರೂ ಆಯ್ಕೆ ಪಟ್ಟಿ ಪ್ರಕಟಗೊಂಡಿರುವುದು ಜನತಂತ್ರದೊಳಗೆ ಬಹುದೊಡ್ಡ ಅವಮಾನದ ಸಂಗತಿ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ಮುಕ್ತವಾದ ಜನಪರವಾದ ನಿರ್ಧಾರ ಕೈಗೊಂಡು ಈ ಆಯ್ಕೆ ಪಟ್ಟಿಯನ್ನು ರದ್ದು ಮಾಡಿ ಮರು ಅಧಿಸೂಚನೆ ಹೊರಡಿಸಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಕೋರಿಕೆ.
- ಪದಾಧಿಕಾರಿಗಳು, ಅಖಿಲ ಭಾರತ ಅಂಬೇಡ್ಕರ್ ಯುವಕ್ರಾಂತಿಕಾರಿ ಬಳಗ
ಮುಖ್ಯರಸ್ತೆಯಲ್ಲೇ ಬಸ್ ಸಂಚರಿಸಲಿ
ಕೆ.ಆರ್. ಮಿಲ್ಸ್ ಕಾಲೋನಿಗೆ ನಗರ ಪಾಸಿಗೆ ವಿಭಾಗದ ವತಿಯಿಂದ 150ಕೆ ಬಸ್ ಸೌಲಭ್ಯ ಕಲ್ಪಿಸಿರುವುದಕ್ಕೆ ಪ್ರಯಾಣಿಕರು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಅಭಿನಂದಿಸಿದ್ದಾರೆ. ಆದರೆ ಈ ಬಸ್ ಕೆ.ಆರ್. ಮಿಲ್ ಕಾಲೋನಿ ಬಿಟ್ಟು ಸಿದ್ಧಿಖಿ ಮೊಹಲ್ಲ ಬಡಾವಣೆಯ ಒಳಗೆ ಹೋಗುತ್ತದೆ. ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಬಡಾವಣೆಯ ಒಳಗೆ ಹೋಗುವ ಅವಶ್ಯಕತೆ ಇಲ್ಲದಿದ್ದರೂ ಏಕೆ ಓಡಿಸುತ್ತಿದ್ದಾರೆ. ಆದ್ದರಿಂದ ಈ ಬಸ್ ಮುಖ್ಯರಸ್ತೆಯಲ್ಲಿಯೇ ಹೋಗುವಂತೆ ಆದೇಶಿಸಿ.
- ಶುಭ, ಪಿ. ಗೀತಾ, ವಕೀಲರು, ಕೆ.ಆರ್. ಮಿಲ್ ಕಾಲೋನಿ.
ಸಂಚಾರ ದಟ್ಟಣೆ ತಪ್ಪಿಸಿ
ಟಿ. ನರಸೀಪುರ ಶಾಲಾ, ಕಾಲೇಜುಗಳು ಆರಂಭ ಹಾಗೂ ಬಿಡುವ ವೇಳೆಯಲ್ಲಿ ಕಾಲೇಜು ಜೋಡಿ ರಸ್ತೆಯಲ್ಲಿನ ವಾಹನಗಳ ದಟ್ಟಣೆಯಿಂದ ಆಗುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಬೇಕು. ಆದರೆ ವಿಶಾಲವಾದ ರಸ್ತೆಯಲ್ಲಿ ವಾಹನಗಳ ಅಡ್ಡಾದಿಡ್ಡಿ ಸಂಚರಿಸುವುದರಿಂದ ನಿಗದಿತ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ತೆರಳಲು ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಸುಗಮ ಸಂಚಾರಕ್ಕೆ ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಸುಗಮವಾಗಿ ತೆರಳಲು ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಹಾಗೂ ಪೋಷಕರು ಒತ್ತಾಯ.
- ಹೊಸೂರುಹುಂಡಿ ಲಿಂಗರಾಜು, ಅಂದಾನಿಗೌಡ, ಸುರೇಶ್, ನವಿಲೂರು ದಿನೇಶ್, ಮಂಜು.