ನಿರೀಕ್ಷೆಗೂ ಮೀರಿ ಅಭಿವೃದ್ಧಿ ಮಾಡುವೆ, ಮತ್ತೆ ಗೆಲ್ಲಿಸಿ: ರಮ್ಯಾ
ಭೇರ್ಯ: ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸ ಮಾಡುವೆ, ನನ್ನನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಂಸದೆ ರಮ್ಯಾ ಮತದಾರರಲ್ಲಿ ಮನವಿ ಮಾಡಿದರು.
ಮಿರ್ಲೆ ಗ್ರಾಮದ ಶ್ರೀ ಹುಣಸಮ್ಮದೇವಿ ದೇವಾಲಯದಲ್ಲಿ ಸೋಮವಾರ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಅವರು, ತಾನು ಸಂಸದೆಯಾಗಿ ಕರ್ತವ್ಯ ನಿರ್ವಹಿಸಿದ್ದು, ಕೆಲ ತಿಂಗಳಷ್ಟೆ. ಈ ನಡುವೆ ತಾನು ನಟಿಯಾದ್ದರಿಂದ ಚಲನಚಿತ್ರಗಳಲ್ಲೂ ಅಭಿನಯಿಸಲೇಬೇಕಾದ ಅನಿವಾರ್ಯತೆ ಇತ್ತು. ಕಾಲಾವಕಾಶದ ಕೊರತೆಯಿಂದಾಗಿ ಕ್ಷೇತ್ರಾದ್ಯಂತ ಪ್ರವಾಸ ಮಾಡಲು ಆಗಲಿಲ್ಲ. ಜತೆಗೆ ಅಂದುಕೊಂಡಷ್ಟು ಅಭಿವೃದ್ಧಿ ಕೆಲಸ ಸಾಧ್ಯವಾಗಲಿಲ್ಲ. ಈ ಬಾರಿ ಅವಕಾಶ ಕೊಟ್ಟರೆ ಸಾಕಷ್ಟು ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಚುಂಚನಕಟ್ಟೆ ಶ್ರೀ ರಾಮ ಸಹಕಾರ ಸಕ್ಕರೆ ಕಾರ್ಖಾನೆ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿದ್ದು, ಕಾರ್ಖಾನೆ ಪುನರಾರಂಭಕ್ಕೆ ಶ್ರಮಿಸಿ ಈ ಭಾಗದ ಕಬ್ಬು ಬೆಳೆಗಾರರ ಹಿತ ಕಾಪಾಡುತ್ತೇನೆ. ರೈತಪರ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಈ ಬಗ್ಗೆ ಚರ್ಚಿಸುತ್ತೇನೆ. ಎಲ್ಲೆಡೆ ಕಾಂಗ್ರೆಸ್ ಅಲೆ ಇದ್ದು, ಈ ಬಾರಿಯೂ ಕೇಂದ್ರದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿದರು.
ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಮಾತನಾಡಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಪಕ್ಷದ ಅಭ್ಯರ್ಥಿ ರಮ್ಯಾ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಮನವಿ ಮಾಡಿದರು.
ಬಳಿಕ ಬೀಚನಹಳ್ಳಿ ಕೊಪ್ಪಲು, ಗಂಧನಹಳ್ಳಿಯಲ್ಲಿ ರಮ್ಯಾ ರೋಡ್‌ಶೋ ಮೂಲಕ ಮತ ಯಾಚಿಸಿದರು.
ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಜಿಪಂ ಮಾಜಿ ಉಪಾಧ್ಯಕ್ಷ ಚನ್ನಬಸಪ್ಪ, ಮಾಜಿ ಸದಸ್ಯ, ಮುಖಂಡ ಡಿ. ರವಿಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಲ್.ರಾಜಶೇಖರ್, ಆನಂದ್, ವಕ್ತಾರ ಸೈಯದ್ ಜಾಬೀರ್, ಜಯದೇವ್, ತಾಪಂ ಸದಸ್ಯ ಸೀತಾರಾಂ, ಪಕ್ಷದ ಮುಖಂಡರಾದ ಹೇಮಂತ್, ರಾಜಶೇಖರ್, ಅರುಣ್, ಎಸ್.ಪಿ. ತಮ್ಮಯ್ಯ, ವಿಜಯಲಕ್ಷ್ಮೀ, ಶಕುಂತಲ, ಎಂ.ಎಚ್. ಸತೀಶ್, ಸ್ವಾಮಿ, ರವಿ, ಲೋಕೇಶ್, ಪರಶುರಾಂ, ಸ್ವಾಮಪ್ಪ ಇದ್ದರು.