ಮತದಾರರ ಜಾಗೃತಿ ಪ್ರಚಾರ ವಾಹನಗಳಿಗೆ ಡಿಸಿ ಚಾಲನೆ
ಚಾಮರಾಜನಗರ: ಜಿಲ್ಲಾ ಮತದಾರರ ಜಾಗೃತಿ ಅಭಿಯಾನ ಸಮಿತಿಯಿಂದ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲು ವಿಶೇಷವಾಗಿ ಅಲಂಕರಿಸಲಾದ ಜಿಪಂ ನಿರ್ಮಲ ಭಾರತ್ ಅಭಿಯಾನ ವಾಹನ ಮತ್ತು ವಾರ್ತಾ ಇಲಾಖೆಯ ವಾಹನಕ್ಕೆ ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಜಿಲ್ಲಾಡಳಿತ ಭವನದ ಮುಂಭಾಗ ಚಾಲನೆ ನೀಡಿದರು.
ವಾಹನಗಳ ಸುತ್ತ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲು ನಿಯೋಜನೆಗೊಂಡಿರುವ ರಾಯಭಾರಿಗಳ ಚಿತ್ರದೊಂದಿಗೆ ಸಂದೇಶ ಮತ್ತು ಯುವ ಮತದಾರರು ಮತದಾನ ಒಂದು ಶಕ್ತಿ, ನಿಮ್ಮ ಹಕ್ಕು ನಿಮ್ಮ ಧ್ವನಿ ನಿಮ್ಮ ಕರ್ತವ್ಯ, ತಪ್ಪದೇ ಮತ ನೀಡಿ, ನಿಮ್ಮ ಮತದಾನ ಪ್ರಜಾಪ್ರಭುತ್ವದ ಪ್ರಾಣ ಎಂಬ ಜಾಗೃತಿ ಸಂದೇಶವೂ ವಾಹನದ ಮೇಲೆ ಅಂಟಿಸಲಾಗಿದೆ.
ಎರಡು ವಾಹನಗಳು ಮೊದಲನೆ ಹಂತದಲ್ಲಿ ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ ತಾಲೂಕುಗಳಲ್ಲಿ ಅತೀ ಕಡಿಮೆ ಮತದಾನವಾದ ಮತಗಟ್ಟೆ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಒಂದು ವಾರ ಸಂಚರಿಸಿ ಮತಯಂತ್ರಗಳ ಬಳಕೆ ಮತ್ತು ಮತದಾನದ ಮಹತ್ವದ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಿವೆ.
ಎರಡನೆಯ ಹಂತದ ಕಾರ್ಯಕ್ರಮವಾಗಿ ವಾಹನಗಳಲ್ಲಿ ಕಡ್ಡಾಯ ಹಾಗೂ ನೈತಿಕತೆಯಿಂದ ಕೂಡಿದ ಮತದಾನದಿಂದಾಗುವ ಪರಿಣಾಮ ಕುರಿತು ಕಿರು ಚಿತ್ರ ಪ್ರದರ್ಶನ ಮತ್ತು ಬೀದಿ ನಾಟಕ ಮಾಡುವ ಕಲಾವಿದರನ್ನು ಬಳಸಿಕೊಂಡು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
ಜಿಲ್ಲಾ ಮತದಾರರ ಜಾಗೃತಿ ಅಭಿಯಾನ ಸಮಿತಿ ಅಧ್ಯಕ್ಷ ಡಾ. ಕೆ.ಎಚ್. ನರಸಿಂಹಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಹೆಚ್ಚುವರಿ ಎಸ್ಪಿ ವೆಂಕಟನಾಯಕ್, ಜಿಪಂ ಉಪಕಾರ್ಯದರ್ಶಿ ಮುನಿರಾಜಪ್ಪ, ಜಿಪಂ ಮುಖ್ಯ ಯೋಜನಾಧಿಕಾರಿ ವಸುಂಧರದೇವಿ, ಜಿಲ್ಲಾ ಮತದಾರ ಜಾಗೃತಿ ಸಮಿತಿ ಸದಸ್ಯ ಸದಾನಂದ ಮೊದಲಾದವರು ಉಪಸ್ಥಿತರಿದ್ದರು.