ಮರಳು ವಾಹನ ಡಿಕ್ಕಿ; ಗರುಡಗಂಬಕ್ಕೆ ಹಾನಿ
ಪಿರಿಯಾಪಟ್ಟಣ: ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ದೇವಾಲಯದ ಮುಂಭಾಗದಲ್ಲಿರುವ ಗರುಡಗಂಬ ಜಖಂಗೊಂಡಿದ್ದು, ಕಂಬದ ಮೇಲ್ಬಾಗದ ಪೀಠ ಬಿದ್ದು ಹೋಗಿರುವ ಘಟನೆ ಭಾನುವಾರ ರಾತ್ರಿ ಜರುಗಿದೆ.
ತಾಲೂಕಿನ ಸೂಳೆಕೋಟೆ ಗ್ರಾಮದ ಮುಜರಾಯಿ ಇಲಾಖೆಗೆ ಸೇರಿದ ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿರುವ ಗರುಡಗಂಬಕ್ಕೆ ವಾಹನ ಡಿಕ್ಕಿ ಹೊಡೆದಿದ್ದು, ಗರುಡಗಂಬ ಹಾನಿಗೊಳಲಾಗಿದೆ.
ಗ್ರಾಮಸ್ಥರ ಪ್ರಕಾರ ಅಕ್ರಮ ಮರಳು ಸಾಗಿಸುವ ಲಾರಿ ಡಿಕ್ಕಿ ಹೊಡೆದು ಪರಾರಿಯಾಗಿದೆ. ಈ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸೂಳೆಕೋಟೆ ಗ್ರಾಮಕ್ಕೆ ಹೊಂದಿಕೊಂಡಂತೆ ಕಾವೇರಿ ನದಿ ಹರಿಯುತ್ತಿದ್ದು, ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಲ್ಲದೆ ಹಲವಾರು ಮಂದಿ ತಮ್ಮ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಸಾಗಿಸಿದ್ದು, ಸೂಳೆಕೋಟೆ ಮಾರ್ಗವಾಗಿಯೆ ಪ್ರತಿದಿನ 100ಕ್ಕೂ ಹೆಚ್ಚು ಲೋಡ್ ಮರಳನ್ನು ಇತರೆಡೆಗೆ ಸಾಗಿಸುತ್ತಿದ್ದಾರೆ. ಅಕ್ರಮ ಮರಳು ಸಾಗಾಟ ರಾತ್ರಿ ವೇಳೆಯಲ್ಲಿ ಅವಿರತವಾಗಿ ನಡೆಯುತ್ತಿದ್ದು, ವಾಹನ ಚಾಲಕರು ಅತಿ ಅವಸರದಿಂದ ವಾಹನ ಚಲಾಯಿಸುವುದು ಈ ಭಾಗದಲ್ಲಿ ಸಾಮಾನ್ಯವಾಗಿದ್ದು, ಅಂತೆಯೇ ಭಾನುವಾರು ರಾತ್ರಿ ಅಕ್ರಮವಾಗಿ ಮರಳು ಸಾಗಿಸುವ ಲಾರಿಯೇ ಗರುಡಗಂಬಕ್ಕೆ ಡಿಕ್ಕಿ ಹೊಡೆದಿದೆ ಎಂದು ಗ್ರಾಮಸ್ಥರು ಬಲವಾಗಿ ಆರೋಪಿಸಿದ್ದಾರೆ.
ಈ ಬಗ್ಗೆ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ರತ್ನಾಕರ ಮಾತನಾಡಿ, ತಾವು ನಾಲ್ಕು ದಿನಗಳ ಹಿಂದೆ ಬೆಟ್ಟದಪುರ ಠಾಣೆಗೆ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಗ್ರಾಮಸ್ಥರ ಒತ್ತಾಯದ ಮೇರೆಗೆ ಭಾನುವಾರ ಸಂಜೆ ಗ್ರಾಮಸ್ಥರೊಬ್ಬರ ಜಮೀನಿನಲ್ಲಿ ಅತಿ ಹೆಚ್ಚು ಸಂಗ್ರಹಿಸಿಡಲಾಗಿದ್ದ ಮರಳನ್ನು ವಶಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಈ ಸಂಬಂಧ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಂಗ್ರಹಿಸಿಡಲಾಗಿದ್ದ ಮರಳನ್ನು ವಶಕ್ಕೆ ತೆಗೆದುಕೊಂಡರು. ಆದರೆ ಪೂರ್ಣ ಮರಳನ್ನು ವಶಕ್ಕೆ ತೆಗೆದುಕೊಂಡಿಲ್ಲ ಎಂದರು.
ತಹಸೀಲ್ದಾರ್ ಎಸ್.ಪಿ. ಮೋಹನ್, ಉಪತಹಸೀಲ್ದಾರ್ ಸಿ.ಜಿ. ರವಿಶಂಕರ್, ಎಇಇ ಪ್ರಕಾಶ್, ಎಂಜಿನಿಯರ್ ಯೋಗಾನಂದ್, ಗ್ರಾಮ ಲೆಕ್ಕಿಗ ಶ್ರೀಧರಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು.