ಯುವಕರು ರಾಜಕಾರಣಕ್ಕೆ ಬರಲಿ: ಬಾಲಸುಬ್ರಹ್ಮಣ್ಯಂ
ಮೈಸೂರು: ಯುವಕರು ರಾಜಕಾರಣಕ್ಕೆ ಒಲವು ತೋರುವ ಅಗತ್ಯವಿದೆ ಎಂದು ವಿವೇಕಾನಂದ ಯೂತ್ಮೂವ್ಮೆಂಟ್ ಸಂಸ್ಥಾಪಕ ಡಾ. ಆರ್. ಬಾಲಸುಬ್ರಹ್ಮಣ್ಯಂ ಹೇಳಿದರು.
ಕೆಆರ್ಎಸ್ ರಸ್ತೆಯಲ್ಲಿರುವ ಪೂಜಾ ಭಾಗವತ್ ಮೆಮೋರಿಯಲ್ ಮಹಾಜನ ಸ್ನಾತಕೋತ್ತರ ಕೇಂದ್ರವು ವಿವೇಕಾನಂದ ಯೂತ್ಮೂವ್ಮೆಂಟ್ ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಯುವಕರು ಮತ್ತು ನಾಯಕತ್ವ ಎಂಬ ವಿಷಯ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ನಾಯಕತ್ವದ ಕೊರತೆ ಕಂಡು ಬಂದಿದೆ. ಅದರಲ್ಲೂ ಯುವಕರು ಸಾಮಾಜಿಕ ಜವಾಬ್ದಾರಿಯತ್ತ ಹೆಚ್ಚಾಗಿ ಮುಖ ಮಾಡಬೇಕು. 80 ವಯಸ್ಸು ಮೇಲ್ಪಟ್ಟವರು ಟಿಕೆಟ್ ಕೇಳುವುದು ಹಾಗೂ ಪ್ರಧಾನಿಯಾಗಲು ಬಯಸುತ್ತಿರುವಾಗ ಯುವಕರು ರಾಜಕೀಯದ ಬಗ್ಗೆ ಯಾವ ರೀತಿಯ ಉತ್ಸಾಹ ತೋರಿಸಬೇಕು ಎಂಬುದು ಚಿಂತನೀಯ ಸಂಗತಿ ಎಂದರು.
ಎಂಬಿಬಿಎಸ್, ಬಿಇ, ಎಂಬಿಎ ಮುಂತಾದ ಪದವಿಗಳನ್ನು ಪಡೆಯುವುದು, ಹೆಚ್ಚಿನ ಸಂಬಳ ಪಡೆಯುವ ಉದ್ಯೋಗ ಹೊಂದುವುದಷ್ಟಕ್ಕೆ ಸಿಮೀತವಾಗಬಾರದು. ತಂದೆ ತಾಯಿ ಸಹ ತಮ್ಮ ಮಕ್ಕಳು ರಾಜಕೀಯಕ್ಕೆ ಬರಬೇಕೆಂದು ಬಯಸಿ ಪ್ರೋತ್ಸಾಹಿಸಬೇಕು. ಅಲ್ಲದೆ ರಾಜಕಾರಣದಲ್ಲಿ ತಮ್ಮ ಮಕ್ಕಳ ಕೊಡುಗೆ ಯಾಕಾಗಬಾರದು ಎಂಬುದನ್ನು ಯೋಚಿಸಿಬೇಕು ಎಂದರು.
ವೈಯಕ್ತಿಕವಾಗಿ ತಾಂತ್ರಿಕ ಮತ್ತು ತಜ್ಞತೆಯನ್ನು ಹೊಂದಿದರೆ ಸಾಲದು. ರಾಷ್ಟ್ರ ನಿರ್ಮಾಣಕ್ಕೆ ಬದುಕನ್ನು ಮುಡುಪಾಗಿಡುವ ಸಂಕಲ್ಪ ತೊಡಬೇಕು. ಯೌವ್ವನದ ಸ್ಫೂರ್ತಿ ಹಾಗೂ ಉತ್ತೇಜನವನ್ನು ನವ ಸಮಾಜದ ಸ್ಥಾಪನೆಗೆ ಕೊಡುಗೆಯಾಗಿ ನೀಡಬೇಕು ಎಂದರು.
ಮಹಾಜನ ವಿದ್ಯಾಸಂಸ್ಥೆ ಅಧ್ಯಕ್ಷ ಆರ್. ವಾಸುದೇವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಾ. ವಿಜಯಲಕ್ಷ್ಮೀ ಭಾಗವತ್, ವಿಭಾಗದ ನಿರ್ದೇಶಕ ಪ್ರೊ. ರೇಣುಕಾರ್ಯ ಇದ್ದರು.