ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಧ್ಯಾಪಕರ ಕೊರತೆ ತಂದ ಚಿಂತೆ

Mainashree
Updated On : 18 Mar 2014, 11:48 am

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮಾ. 18
ವಿವಿಗಳು ಎದುರಿಸುತ್ತಿರುವ ಅಧ್ಯಾಪಕರ ಕೊರತೆ ಬಹುದೊಡ್ಡ ಸಮಸ್ಯೆ ಎಂದು ಬೆಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಚ್.ಎ. ರಂಗನಾಥ್ ಹೇಳಿದರು.
ಮೈಸೂರು ವಿವಿಯ ಬಹುಮಾಧ್ಯಮ ಕಲಿಕಾ ಸಂಪನ್ಮೂಲ ಸೃಷ್ಟಿ ಕೇಂದ್ರವು ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿರುವ ಬಹುಮಾಧ್ಯಮ ಬೋಧನಾ ಕಲಿಕಾ ಸಂಪನ್ಮೂಲ ಸೃಷ್ಟಿ ಆನ್‌ಲೈನ್ ಆಕ್ಸೀಸ್ ಎಂಬ ವಿಷಯ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ 600-700 ವಿವಿಗಳಿವೆ. 36 ಸಾವಿರ ಕಾಲೇಜುಗಳಿವೆ. ಆದರೆ ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಉನ್ನತ ಶಿಕ್ಷಣವನ್ನು ವಿಸ್ತರಿಸುವ ಅಗತ್ಯವಿದ್ದು, ಈ ಸಂಬಂಧ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ತೆರೆಯಬೇಕು. ವಿವಿಗಳಲ್ಲಿ ಶೇ.30 - 40 ರಷ್ಟು ಅಧ್ಯಾಪಕರ ಕೊರತೆ ಕಂಡುಬಂದಿದ್ದು, ಅರ್ಹರನ್ನು ನೇಮಕ ಮಾಡುವಲ್ಲಿ ಸಂಬಂಧಿಸಿದವರು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಅಧ್ಯಾಪಕರು ತರಗತಿಯ ಬೋಧನೆಯ ಜತೆಗೆ ಸುಸ್ಥಿರ ಸಮಾಜದ ಅಭಿವೃದ್ಧಿಗೂ ಜವಾಬ್ದಾರಿ ವಹಿಸಬೇಕು. ವಿವಿಗಳ ಹಾಗೂ ಸಮಾಜದ ನಡುವೆ ಇರುವ ಅಂತರವನ್ನು ಕಡಿಮೆ ಮಾಡಬೇಕು. ಜನಸಾಮಾನ್ಯರಲ್ಲಿ ಸವಾಲುಗಳನ್ನು ಎದುರಿಸುವಲ್ಲಿ ಅಗತ್ಯವಾದ ಅರಿವು ಮೂಡಿಸುವ ಕೆಲಸ ಮಾಡಬೇಕು. ವಿದೇಶಿ ವಿವಿಗಳಲ್ಲಿ ಈ ಸಂಬಂಧ ಪ್ರತ್ಯೇಕ ವಿಭಾಗಗಳನ್ನು ಸಹ ತೆರೆಯಲಾಗಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳಿಗೆ ಉಪಯುಕ್ತ: ನಾವು ಕಲಿಯುವ ಸಂದರ್ಭದಲ್ಲಿ ಕೇವಲ ಪಠ್ಯಪುಸ್ತಕದ ಜತೆಗೆ ಇತರ ಮಾಹಿತಿಗೆ ಗ್ರಂಥಾಲಯವನ್ನು ಮಾತ್ರವೇ ಅವಲಂಬಿಸಬೇಕಾಗಿತ್ತು. ಆದರೆ ಇಂದಿನ ಮಾಹಿತಿ ಯುಗದಲ್ಲಿ ಮಾಹಿತಿಗೆ ಅನೇಕ ಮಾರ್ಗಗಳಿವೆ. ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಜ್ಞಾನ ವಿಸ್ತರಣೆ ಸಾಧ್ಯವಾಗಲಿದೆ. ಅದರಲ್ಲೂ ಬಹುಮಾಧ್ಯಮ ಕಲಿಕೆ ಆರಂಭವಾಗಿರುವುದು ವಿದ್ಯಾರ್ಥಿಗಳ ಅಧ್ಯಯನಕ್ಕೆ ತುಂಬ ಉಪಯುಕ್ತವಾಗಿದೆ ಎಂದರು.
ಸಂಪನ್ಮೂಲ ಸೃಷ್ಟಿ ಇಂದು ಬಹುಮುಖ್ಯ ಸವಾಲು. ನಮ್ಮಲ್ಲಿ ಎಲ್ಲಾ ರೀತಿಯ ಸಾಧನ ಸಲಕರಣೆಗಳಿವೆ. ಮಾನವ ಸಂಪನ್ಮೂಲಕ್ಕೆ ಕೊರತೆಯಿದೆ. ಆದರೆ ಅದರ ಬಳಕೆಗೆ ಗಮನ ಹರಿಸಬೇಕು. ತರಗತಿಯ ಒಳಗಿನ ಬೋಧನೆಯ ಜತೆಗೆ ಯುವಜನತೆಯ ಉದ್ಯೋಗಕ್ಕೆ ಪೂರಕವಾದ ಕೌಶಲವನ್ನು ರೂಢಿಸುವಲ್ಲಿ ಅಧ್ಯಾಪಕರ ಪಾತ್ರ ಬಹುಮುಖ್ಯ ಎಂದರು.
ಮೈಸೂರು ವಿವಿ ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪಿ.ನಾಗಭೂಷಣ್, ಯುಪಿಇ ಯೋಜನಾ ನಿರ್ದೇಶಕ ಪ್ರೊ.ಕೆ. ಬೈರಪ್ಪ ಮುಖ್ಯ ಅತಿಥಿಗಳಾಗಿದ್ದರು. ಸಂಪನ್ಮೂಲ ಸೃಷ್ಟಿ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ಬಾಲಸುಬ್ರಮಣಿಯನ್ ಇದ್ದರು. ಪ್ರೊ.ನಾಗಪ್ಪ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement