ಬೆಂಕಿಗೆ 80 ಕುರಿ, 20 ಕೋಳಿ ಬಲಿ
ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿಯ ಹೊರ ವಲಯದಲ್ಲಿನ ಕೊಟ್ಟಿಗೆ ಮತ್ತು ವಾಸದ ಮನೆಗೆ ಬಿದ್ದ ಆಕಸ್ಮಿಕ ಬೆಂಕಿಯಿಂದ ಲಕ್ಷಾಂತರ ಮೌಲ್ಯದ ಕುರಿ- ಕೋಳಿ ಮತ್ತು ಧವಸ ಧಾನ್ಯ ಸುಟ್ಟು ಭಸ್ಮವಾಗಿದೆ. ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಹೊರವಲಯದ ರಾಜು ಎಂಬವರಿಗೆ ಸೇರಿದ ಮನೆ ಹಾಗೂ ಕೊಟ್ಟಿಗೆಯಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದ್ದು, ಈ ವೇಳೆ ಮನೆಯಲ್ಲಿ ಮಲಗಿದ್ದ ಗೌರಮ್ಮ ಅವರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ರಾಜು ಕುಟುಂಬ ಸಮೇತ ಸಂಬಂಧಿಕರ ಮನೆಯ ಕಾರ್ಯಕ್ಕೆ ತೆರಳಿದ್ದರು. ರಾತ್ರಿ 10.30ರ ಸುಮಾರಿನಲ್ಲಿ ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ತಗುಲಿದೆ. ಕೊಟ್ಟಿಗೆಯಲ್ಲಿದ್ದ 80 ಮೇಕೆಗಳು ಹಾಗೂ 20 ಕೋಳಿಗಳು ಸಂಪೂರ್ಣವಾಗಿ ಬೆಂಕಿಯಲ್ಲಿ ಸುಟ್ಟು ಹೋಗಿವೆ. ಗಾಳಿಯ ತೀವ್ರತೆಯಿಂದ ಬೆಂಕಿ ಪಕ್ಕದ ಮನೆಗೂ ವ್ಯಾಪಿಸಿ ಮನೆಯಲ್ಲಿದ್ದ 30 ಮೂಟೆ ಬತ್ತ, 20 ಮೂಟೆ ರಾಗಿ, ಮದುವೆಗೆ ತಂದಿದ್ದ ಆಭರಣ ಹಾಗೂ ಮನೆಯಲ್ಲಿಟ್ಟಿದ್ದ 50 ಸಾವಿರ ನಗದು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಮನೆಯಲ್ಲಿ ಮಲಗಿದ್ದ ರಾಜು ಅವರ ಅಜ್ಜಿ ಗೌರಮ್ಮ ಅವರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.