ವಿಜ್ಞಾನಕ್ಕೆ ಧರ್ಮ ವಿರೋಧವಲ್ಲ, ಪೂರಕ
ಮೈಸೂರು: ಇಂದಿನ ವಿದ್ಯಾರ್ಥಿ ಸಮುದಾಯ ಜೀವನವನ್ನು ಗಂಭೀರವಾಗಿ, ಮೌಲ್ಯಯುತವಾಗಿ ತೆಗೆದುಕೊಳ್ಳುವುದಕ್ಕೆ ವಿವೇಕಾನಂದರ ಚಿಂತನೆ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶ್ರೀರಾಮಕೃಷ್ಣ ಆಶ್ರಮದ ವೀರೇಶಾನಂದ ಸ್ವಾಮಿ ಹೇಳಿದರು.
ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಈ ದೇಶದ ಆತ್ಮ ಎಂದರೆ ಧರ್ಮ. ಈ ಧರ್ಮ ವಿಜ್ಞಾನಕ್ಕೆ ವಿರೋಧವಾದದ್ದಲ್ಲ, ಪೂರಕವಾದದ್ದು. ಇಂತಹ ಧರ್ಮವನ್ನು ಜೀವನದ ಪ್ರಯೋಗ ಶಾಲೆಯಲ್ಲಿ ಪರೀಕ್ಷಿಸಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅನಂತಶಕ್ತಿ ಅಡಗಿರುತ್ತದೆ. ಇದನ್ನು ಅರಿತು ಆತ್ಮವಿಶ್ವಾಸ ಮಾನಸಿಕ ಏಕಾಗ್ರತೆ ಹಾಗೂ ಉತ್ತಮ ನಡವಳಿಕೆಯಿಂದ ಬದುಕಿನ ಸಮಸ್ಯೆಗಳನ್ನು ಎದುರಿಸುತ್ತ ತಮ್ಮ ಗುರಿ ತಲುಪಬೇಕು ಎಂದು ಅವರು ಪ್ರತಿಪಾದಿಸಿದರು. ವಿದ್ಯಾವರ್ಧಕ ಸಂಘದ ಗೌರವ ಕೋಶಾಧ್ಯಕ್ಷ ಎಸ್.ಎನ್. ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾರು ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೋ ಅವರು ಸುಖಿಗಳಾಗಿರಲು ಸಾಧ್ಯವಿಲ್ಲ. ಈ ಆತ್ಮ ವಿಶ್ವಾಸದ ಬಗ್ಗೆ ತಿಳಿಯಲು ವಿದ್ಯಾರ್ಥಿಗಳು ಸತ್ಪುರುಷರ ಆತ್ಮಚರಿತ್ರೆಗಳನ್ನು ಓದಬೇಕು ಎಂದು ಹೇಳಿದರು. ಹಿಂದು ವಿಭಾಗದ ಮುಖ್ಯಸ್ಥ ಪ್ರೊ.ಜಿ. ಚಂದ್ರಶೇಖರ್ ಮಾತನಾಡಿದರು. ಪ್ರಾಂಶುಪಾಲ ಡಾ.ಎನ್. ಶಂಕರ್ ಇದ್ದರು. ಎನ್ಎಸ್ಎಸ್ ಅಧಿಕಾರಿ ಎನ್.ಮೋಹನ್ಕುಮಾರ್ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಟಿ. ರಘು ವಂದಿಸಿದರು. ವಿ. ವಿಜಯಲಕ್ಷ್ಮಿ ನಿರೂಪಿಸಿದರು.