ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಂಸತ್‌ಗೆ ಹೋಗಲೆತ್ನಿಸಿ ಸೋಲುಂಡವರು

Mainashree
Updated On : 18 Mar 2014, 11:33 am

ಮೈಸೂರು: ಮೈಸೂರು- ಚಾಮರಾಜನಗರ ಜಿಲ್ಲೆಗಳ ಹಾಲಿ ಶಾಸಕರ ಪೈಕಿ ಒಬ್ಬರು ಮೂರು ಬಾರಿ, ಇಬ್ಬರು ತಲಾ ಎರಡೆರಡು ಬಾರಿ , ಒಬ್ಬರು ಒಂದು ಬಾರಿ ಸಂಸತ್‌ಗೆ ಹೋಗಲು ಯತ್ನಿಸಿ ವಿಫಲರಾಗಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಿಂದ ಒಂದು ಉಪ ಚುನಾವಣೆ ಸೇರಿದಂತೆ ಐದು ಬಾರಿ, ವರುಣ ಕ್ಷೇತ್ರದಿಂದ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1980 ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಜನತಾಪಕ್ಷ (ಎಸ್) ಪಕ್ಷದ ಅಭ್ಯರ್ಥಿಯಾಗಿ, 1991 ರಲ್ಲಿ ಕೊಪ್ಪಳದಿಂದ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತಿದ್ದಾರೆ.
1992ರ ಉಪ ಚುನಾವಣೆಯಲ್ಲಿ ಹುಣಸೂರು, 2013ರ ಚುನಾವಣೆಯಲ್ಲಿ ಎಚ್.ಡಿ. ಕೋಟೆ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ, ಒಂದು ಅವಧಿಗೆ ವಿಧಾನಪರಿಷತ್ ಸದಸ್ಯರಾಗಿಯೂ ಕೆಲಸ ಮಾಡಿರುವ ಎಸ್. ಚಿಕ್ಕಮಾದು ಅವರು, ಮೈಸೂರು ಲೋಕಸಭಾ ಕ್ಷೇತ್ರದಿಂದ 1977, 1980 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ, 1998 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತವರು.
1998ರ ಉಪ ಚುನಾವಣೆ, 2004 ರಲ್ಲಿ ಹುಣಸೂರು, 2013 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು, 1996, 1998 ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತವರು.
1985, 1994, 2004, 2008, 2013ರಲ್ಲಿ ಟಿ.ನರಸೀಪುರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಡಾ.ಎಚ್.ಸಿ. ಮಹದೇವಪ್ಪ ಅವರು 1991ರಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಸೋತವರು.
ಗೆದ್ದು ಸೋತವರು: 1980, 1984, 1989, 1991, 1999 ರಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ, ಕೇಂದ್ರದಲ್ಲಿ ಸಚಿವರಾಗಿಯೂ ಕೆಲಸ ಮಾಡಿರುವ ವಿ. ಶ್ರೀನಿವಾಸಪ್ರಸಾದ್ 2008, 2013 ರಲ್ಲಿ ನಂಜನಗೂಡಿನಿಂದ ವಿಧಾನಸಭೆಗೆ ಆಯ್ಕೆಯಾಗಿ, ಹಾಲಿ ಕಂದಾಯ ಸಚಿವರಾಗಿದ್ದಾರೆ. ಇದಕ್ಕೂ ಮೊದಲು ಅವರು 1974 ರಲ್ಲಿ ಕೃಷ್ಣರಾಜ ಕ್ಷೇತ್ರದ ಉಪ ಚುನಾವಣೆ, 1978ರಲ್ಲಿ ಟಿ.ನರಸೀಪುರದಿಂದ ವಿದಾನಸಭೆಗೆ ಸ್ಪರ್ಧಿಸಿ ಸೋತಿದ್ದರು. 1996, 1998 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರಿಂದ ಸೋತಿದ್ದರು.
1978 ರಿಂದ 2008 ರವರೆಗೆ ಸತತ ಎಂಟು ಚುನಾವಣೆಗಳಲ್ಲಿ ಕೆ.ಆರ್. ನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ, 1978, 1989, 1999 ರಲ್ಲಿ ಮಾತ್ರ ವಿಧಾನಸಭೆಗೆ ಆಯ್ಕೆಯಾಗಿದ್ದ ಮಾಜಿ ಸಚಿವ ಎಚ್. ವಿಶ್ವನಾಥ್ ಅವರು 2009 ರಲ್ಲಿ ಪ್ರಥಮ ಬಾರಿಗೆ ಮೈಸೂರಿನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಆಯ್ಕೆಯಾದವರು. ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ.
1999 ರಲ್ಲಿ ಸಂತೇಮರಹಳ್ಳಿಯಿಂದ ಸೋತಿದ್ದ, 2004 ರಲ್ಲಿ ಕೇವಲ 1 ಮತದಿಂದ ಗೆಲವು ಸಾಧಿಸಿದ್ದ, 2008 ರಲ್ಲಿ ಕೊಳ್ಳೇಗಾಲದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಆರ್. ಧ್ರುವನಾರಾಯಣ 2009ರ ಚುನಾವಣೆಯಲ್ಲಿ ಚಾಮರಾಜನಗರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾದವರು. ಈ ಬಾರಿಯೂ ಮತ್ತೆ ಕಾಂಗ್ರೆಸ್ ಅಭ್ಯರ್ಥಿ.


 ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement