ತೆರೆದ ತೊಟ್ಟಿಗೆ ಬಿದ್ದು ಬಾಲಕ ಸಾವು
ಹುಣಸೂರು: ತಾಲೂಕಿನ ಯಮಗುಂಭ ಸರ್ಕಾರಿ ಶಾಲೆಯ ಮುಂಭಾಗ ತೆರೆದ ತೊಟ್ಟಿಗೆ ಒಂದನೇ ತರಗತಿ ವಿದ್ಯಾರ್ಥಿಯೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಬುಧವಾರ ಮಧ್ಯಾಹ್ನ ಜರುಗಿದೆ. ತಾಲೂಕಿನ ಯಮಗುಂಭ ಗ್ರಾಮದ ನಿವಾಸಿಗಳಾದ ರಮೇಶ್ ಮತ್ತು ಆರತಿ ಅವರ ಪುತ್ರ ಪ್ರಶಾಂತ್ (6) ಮೃತಪಟ್ಟ ದುರ್ದೈವಿ.
ಈತ ಮಧ್ಯಾಹ್ನ ಮೂತ್ರ ವಿಸರ್ಜನೆ ಮುಗಿಸಿ ಕೈ ತೊಳೆಯಲು ಹೋದಾಗ ತೆರೆದ ತೊಟ್ಟಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಸಂಜೆಯಾದರೂ ಮನೆಗೆ ಬಾರದ ಕಾರಣ ಬಾಲಕನ ಪೋಷಕರು ಆತಂಕಗೊಂಡು ಗ್ರಾಮದಲ್ಲಿ ಹುಡುಕಾಟ ನಡೆಸಿದರು. ಬಳಿಕ ಅನುಮಾನಗೊಂಡು ಶಾಲೆಯ ತೆರೆದ ತೊಟ್ಟಿ ಬಳಿ ಬಂದು ನೋಡಿದಾಗ ಬಾಲಕನ ಮೃತ ಮೃತದೇಹ ಪತ್ತೆಯಾಯಿತು.
ಶಿಕ್ಷಕರ ನಿರ್ಲಕ್ಷ್ಯತೆ ಖಂಡಿಸಿ ಕುಟುಂಬಸ್ಥರು, ಗ್ರಾಮಸ್ಥರು ಮಗುವಿನ ಶವವನ್ನು ಶಾಲೆಯ ಮುಂದೆ ಇಟ್ಟು ಪ್ರತಿಭಟಿಸಿದರು. ಸಾರ್ವಜನಿಕರ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ಶಾಲೆಗೆ ಭೇಟಿ ನೀಡಿ ಮೃತಪಟ್ಟ ಮಗುವಿನ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ 50 ಸಾವಿರ ಪರಿಹಾರ ನೀಡಲಾಗುವುದು, ಈ ಘಟನೆ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.