ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಭ್ರಷ್ಟಾಚಾರಕ್ಕೆ ನಾಂದಿ ಹಾಡಿದ್ದೇ ರಾಜೀವ್‌'

Mainashree
Updated On : 20 Mar 2014, 12:00 pm

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮಾ.19
ಗ್ರಾಮ ಲೆಕ್ಕಿಗ ಸಹ ಭ್ರಷ್ಟಾಚಾರ ಮಾಡಬಹುದು ಎನ್ನುವಷ್ಟರ ಮಟ್ಟಿಗೆ ಭ್ರಷ್ಟಾಚಾರಕ್ಕೆ ಮೇಲ್ಪಂಕ್ತಿ ಹಾಕಿದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಸಿಂಹ ಟೀಕಿಸಿದರು.
ನಗರದ ಗೋವಿಂದರಾವ್ ಸ್ಮಾರಕ ಸಭಾಂಗಣದಲ್ಲಿ ಬುಧವಾರ ಚಾಮರಾಜ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಬಹುದೊಡ್ಡ ಹಗರಣಗಳೆಲ್ಲವೂ ಕಾಂಗ್ರೆಸ್‌ನ ಅಧಿಕಾರ ಅವಧಿಯಲ್ಲಿಯೇ ನಡೆದಿವೆ. ಕಾಮನ್ವೆಲ್ತ್ ಕ್ರೀಡಾಕೂಟವನ್ನು ಭಾರತದಲ್ಲಿ ನಾವು ನಡೆಸುತ್ತೇವೆ ಎಂದು ಅಟಲ್‌ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ಘೋಷಿಸಿದ್ದರು. ಅದಕ್ಕಾಗಿ 75 ಸಾವಿರ ಕೋಟಿ ಮೀಸಲಿರಿಸಲಾಗಿತ್ತು. ಆದರೆ ಕ್ರೀಡಾಕೂಟ ಆರಂಭದ ವೇಳೆಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಕ್ರೀಡಾಪಟುಗಳು ಉಳಿದುಕೊಳ್ಳುವ ಕೋಣೆಯ ಶೌಚಾಗೃಹದಲ್ಲಿ ಬಳಸುವ ಪೇಪರ್‌ನ ಖರೀದಿಯಲ್ಲೂ ಹಗರಣ ನಡೆಸಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರ ಸಾರ್ವತ್ರೀಕರಣವಾಗಿದೆ. ಇದಕ್ಕೆ ಸರಿಯಾಗಿ ಮೇಲ್ಪಂಕ್ತಿ ಹಾಕದಿರುವುದೆ ಕಾರಣ. ಗ್ರಾಮ ಲೆಕ್ಕಿಗ ಸಹ ಭ್ರಷ್ಟಾಚಾರ ಮಾಡಬಹುದು ಎಂಬ ಸ್ಥಿತಿಗೆ ತಂದ ಕೀರ್ತಿ ರಾಜೀವ್‌ಗಾಂಧಿಗೆ ಸಲ್ಲುತ್ತದೆ ಎಂದರು.
ಚೀನಾ ಭಾರತವನ್ನು ಎಲ್ಲಾ ದಿಕ್ಕಿನಿಂದ ಸುತ್ತುವರಿದಿದೆ. ನೆರೆಯ ಪಾಕಿಸ್ತಾನ ನಮ್ಮ ಇಬ್ಬರು ಸೈನಿಕರ ತಲೆ ಕಡಿದಿದೆ. ನೀವು ಹೋಗಿ ನಾಲ್ವರ ತಲೆ ಕಡಿದು ತನ್ನಿ ಎಂದು ಹೇಳುವ ಧೈರ್ಯವಾಗಲಿ, ತಾಕತ್ತಾಗಲಿ ಪ್ರಧಾನಿ ಮನಮೋಹನ್‌ಸಿಂಗ್‌ಗೆ ಇಲ್ಲ. ಒಟ್ಟಾರೆ ದೇಶದ ಆಂತರಿಕ ಭದ್ರತೆ ಕುಂದಿಸುವ ಮತ್ತು ನಮ್ಮ ಸೈನಿಕರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಕೇಂದ್ರದ ಯುಪಿಎ ಸರ್ಕಾರ ಮಾಡಿದೆ ಎಂದು ಕುಟುಕಿದರು.
ಅರ್ಥ ವ್ಯವಸ್ಥೆ ಕೆಳಮಟ್ಟಕ್ಕೆ: ಕೇಂದ್ರ ಸರ್ಕಾರ ದೇಶದ ಅರ್ಥ ವ್ಯವಸ್ಥೆಯನ್ನು ಕೆಳಮಟ್ಟಕ್ಕೆ ತಳ್ಳಿದೆ. ದೇಶದಲ್ಲಿ ನಿರ್ಮಾಣವಾದ ಒಟ್ಟಾರೆ ರಾಷ್ಟ್ರೀಯ ಹೆದ್ದಾರಿ ಪೈಕಿ ಬಹುಪಾಲು ವಾಜಪೇಯಿ ಕಾಲದಲ್ಲಿ ನಿರ್ಮಿಸಿದ್ದೆ ಹೆಚ್ಚು. ಕೇಂದ್ರದ ಯುಪಿಎ ಸರ್ಕಾರ ಕನಿಷ್ಠ ಬೆಂಗಳೂರು- ಮೈಸೂರಿಗೆ ಜೋಡಿ ರೈಲು ಮಾರ್ಗ ಮಾಡಲು ಸಾಧ್ಯವಾಗಿಲ್ಲ. ಆದರೆ ನರೇಂದ್ರ ಮೋದಿ ಅವರು ದೇಶದ ನಾಲ್ಕು ದಿಕ್ಕನ್ನು ಸಂಪರ್ಕಿಸುವಂತೆ ಬುಲೆಟ್ ರೈಲು ನಿರ್ಮಿಸುವುದಾಗಿ ಹೇಳಿದ್ದಾರೆ ಎಂದರು.
ನರೇಂದ್ರ ಮೋದಿ ಅವರಿಗೆ ದೂರದೃಷ್ಟಿಯ ಕಲ್ಪನೆ ಇದೆ. ಭಾರತದಲ್ಲಿಯೇ ಎಲೆಕ್ಟ್ರಾನಿಕ್ ಉತ್ಪಾದನಾ ಘಟಕ ಮತ್ತು ಜಲಾಂತರ್ಗಾಮಿ ನಿರ್ಮಾಣ ಘಟಕ ಸ್ಥಾಪಿಸುವ ಉದ್ದೇಶ ಇದೆ. ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂಬ ಮಹತ್ವಾಕಾಂಕ್ಷೆ ಇದೆ. ನೆರೆಯ ಚೀನಾಕ್ಕೆ ಈಗಲೆ ಎಚ್ಚರಿಕೆ ನೀಡಿದ್ದಾರೆ. ನಾನು ನಿಮಿತ್ತ ಮಾತ್ರ. ಮೋದಿ ಪ್ರಧಾನಿಯನ್ನಾಗಿ ಮಾಡುವುದು ನನ್ನ ಗುರಿ. ಅದಕ್ಕೆ ನೀವು ನನ್ನನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡಬೇಕು. ನಾನು ನಿಮ್ಮ ಮನೆಯ ಮಗನಾಗಿ, ಅಣ್ಣ, ತಮ್ಮನಂತೆ ಕೆಲಸ ಮಾಡುತ್ತೇನೆ. ಮೈಸೂರು- ಕೊಡಗು ಜಿಲ್ಲೆಗಳಿಂದ ಐದು ಮಂದಿಯ ಸಮಿತಿಯನ್ನು ನೀವೆ ರಚಿಸಿ, ನಿಮ್ಮ ಆಕಾಂಕ್ಷೆಗಳನ್ನು ಸಮಿತಿಗೆ ತಿಳಿಸಿ ಅವರ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಒಂದು ಅನಿರೀಕ್ಷಿತ ಸನ್ನಿವೇಶದಲ್ಲಿ ನನಗೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಘೋಷಿಸಲಾಯಿತು. ನಾನು ಎರಡೂ ಕೈಗಳನ್ನು ಚಾಚಿ ಸ್ವೀಕರಿಸಿದ್ದೇನೆ. ವೀರಪರಂಪರೆ ಮತ್ತು ದೇಶಭಕ್ತಿಗೆ ಹೆಸರಾದ ಕೊಡಗು ಮತ್ತು ಐತಿಹಾಸಿಕ ಹಾಗೂ ಯದುವಂಶದ ಹಿನ್ನೆಲೆಯುಳ್ಳ ಮೈಸೂರು ನನಗೆ ಬಹಳ ಪ್ರಿಯವಾಯಿತು. ಇಲ್ಲಿನ ಜನತೆಯನ್ನು ಪ್ರತಿನಿಧಿಸುವುದು ಹೆಮ್ಮೆ ಎನಿಸಿದೆ. ನೀವು ತಮ್ಮ ಮನೆಯ ಮಗ, ತಮ್ಮ ಸಹೋದರ ಎಂದು ಬೆಂಬಲಿಸುತ್ತೀರಿ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸ್ಲಂ ಮೋರ್ಚಾ ರಾಜ್ಯಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಚೀನಾ ವಿರುದ್ಧದ ಭಾರತದ ಸೋಲಿಗೆ ನೆಹರು ಕಾರಣ. ಅಂತಹ ಹಿನ್ನೆಲೆಯುಳ್ಳ ಪಕ್ಷ ತ್ಯಜಿಸಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಪ್ರತಾಪ್‌ಸಿಂಹ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಇದೆ ವೇಳೆ ಚಾಮರಾಜ ಕ್ಷೇತ್ರದ ಕೆಜೆಪಿ ಮುಖಂಡರಾದ ಎಂ.ಕೆ. ಪ್ರಶಾಂತ್, ಮೀನಾಕ್ಷಮ್ಮ, ಕಿರಣ್, ವಿಠಲರಾವ್, ರಘು, ವೆಂಕಟೇಶ್ ಆಚಾರ್, ಎಸ್.ಆರ್. ಶಿವಶಂಕರ್ ಬಿಜೆಪಿಗೆ ಸೇರ್ಪಡೆಗೊಂಡರು. ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ನಗರ ಪ್ರಧಾನ ಕಾರ್ಯದರ್ಶಿಗಳಾದ ಯಶಸ್ವಿ ಸೋಮಶೇಖರ್, ಮಲ್ಲಪ್ಪಗೌಡ, ನಗರ ಬಿಜೆಪಿ ಮಾಜಿ ಅಧ್ಯಕ್ಷ ಶಿವಕುಮಾರ್, ಚಾಮರಾಜ ಕ್ಷೇತ್ರದ ಅಧ್ಯಕ್ಷ ಸೋಮಶೇಖರ್, ಪಾಲಿಕೆ ಸದಸ್ಯ ಗಿರೀಶ್ ಪ್ರಸಾದ್, ಮುಖಂಡರಾದ ಶ್ರೀವತ್ಸ, ಕಾಶಿವಿಶ್ವನಾಥ ಶೆಟ್ಟಿ, ನಿಂಗಣ್ಣ, ಮೈ.ಕ. ಪ್ರೇಮಕುಮಾರ್, ದತ್ತಾತ್ರೇಯ ಸಿಂಧೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement