ಸಾಹಿತಿ, ಮಠಾಧಿಪತಿಗಳನ್ನು ಭೇಟಿ ಮಾಡಿದ ಪ್ರತಾಪ್ ಸಿಂಹ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಬುಧವಾರ ವಿವಿಧ ಮಠಾಧಿಪತಿಗಳು ಮತ್ತು ಸಾಹಿತಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಮಂಗಳವಾರ ರಾತ್ರಿ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಿದ್ದ ಪ್ರತಾಪ್ ಸಿಂಹ ಬುಧವಾರ ಬೆಳಗ್ಗೆ ಹೂಟಗಳ್ಳಿಯ ಎಸ್.ಆರ್. ಗೋಪಾಲ್‌ರಾವ್ ಅವರ ನಿವಾಸದಲ್ಲಿ ಹುಣಸೂರು ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಪ್ರಮುಖರ ಸಭೆ ನಡೆಸಿ, ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಬಳಿಕ ಸುತ್ತೂರು ಮಠಕ್ಕೆ ತೆರಳಿ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದು, ಕೆಲಕಾಲ ಅವರೊಂದಿಗೆ ಮಾತುಕತೆ ನಡೆಸಿದರು. ಅಲ್ಲಿಂದ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದಾಶ್ರಮಕ್ಕೆ ತೆರಳಿ ಶ್ರೀಗಳ ಜೊತೆ ಮಾತುಕತೆ ನಡೆಸಿ ಆಶೀರ್ವಾದ ಪಡೆದರು.
ನಂತರ ಜಯಲಕ್ಷ್ಮೀಪುರಂನ ಚಂದ್ರಕಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಸಾಹಿತಿ ಡಾ. ದೇಜಗೌ ಅವರನ್ನು ಭೇಟಿಯಾದರು. ನಂತರ ಬರಡನಪುರ ಮಠಕ್ಕೆ ತೆರಳಿದರು. ಈ ನಡುವೆ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪ್ರತಾಪ್ ಸಿಂಹ ಅವರು ಮಾತುಕತೆ ನಡೆಸಿದ್ದಾರೆ.
ಎಂಡಿಎ ಮಾಜಿ ಅಧ್ಯಕ್ಷ ಎಲ್.ನಾಗೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಹೇಮಂತ್‌ಕುಮಾರ್ ಗೌಡ, ನಗರ ಬಿಜೆಪಿ ಮಾಜಿ ಅಧ್ಯಕ್ಷ ಶಿವಕುಮಾರ್ ಇದ್ದರು.
ಮತ ಎಣಿಕೆ ಸಿದ್ಧತೆಗೆ ಸಭೆ
ಮೈಸೂರು: ಲೋಕಸಭಾ ಚುನಾವಣೆ ವೇಳೆ ಮತ ಎಣಿಕೆಯನ್ನು ಅಚ್ಚುಕಟ್ಟಾಗಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡದಂತೆ ನಿರ್ವಹಿಸುವ ಬಗ್ಗೆ ಮತ ಎಣಿಕೆ ವ್ಯವಸ್ಥೆಯ ನೋಡಲ್ ಅಧಿಕಾರಿ ಹಾಗೂ ಎಂಡಿಎ ಆಯುಕ್ತ ಎಸ್. ಪಾಲಯ್ಯ ಬುಧವಾರ ಅಧಿಕಾರಿಗಳ ಸಭೆ ನಡೆಸಿದರು. ಮಾನಸ ಗಂಗೋತ್ರಿಯಲ್ಲಿರುವ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಸಲು ನಿರ್ಧರಿಸಿದ್ದು, ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ ನಕ್ಷೆ ತಯಾರಿಸಲಾಗುತ್ತಿದೆ. ಎಣಿಕೆ ಕೊಠಡಿ, ವೀಕ್ಷಕರ ಕೊಠಡಿ, ಚುನಾವಣಾ ಅಧಿಕಾರಿಗಳ ಕೊಠಡಿ, ಮಾಧ್ಯಮ ಕೊಠಡಿ, ಮೊದಲಾದವುಗಳಿಗೆ ಸ್ಥಳ ನಿಗದಿಪಡಿಸಿ ನಕ್ಷೆ ಸಿದ್ದಪಡಿಸುವಂತೆ ಎಂಡಿಎ ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಗೆ ಅವರು ತಿಳಿಸಿದರು. ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಸ್ಥಳ ಹಾಗೂ ನಕ್ಷೆಯನ್ನು ಅಂತಿಮಗೊಳಿಸಿ ಚುನಾವಣಾ ಆಯೋಗದ ಅನುಮೋದನೆಗಾಗಿ ಕಳುಹಿಸಲಾಗುವುದು. ವಿದ್ಯುತ್ ವ್ಯವಸ್ಥೆ, ಬ್ಯಾರಿಕೇಡಿಂಗ್ ವ್ಯವಸ್ಥೆ, ಮಾಧ್ಯಮ ಕೊಠಡಿ, ಧ್ವನಿವರ್ಧಕ ವ್ಯವಸ್ಥೆ ಎಲ್ಲವನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ಅವರು ಹೇಳಿದರು.