ಸುದ್ದಿ ಸಂಕ್ಷೇಪ
ಅಸ್ಪೃಶ್ಯತಾ ಆಚರಣೆ
ಟಿ. ನರಸೀಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಟಿ. ನರಸೀಪುರ ತಾಲೂಕಿನ ಆಲಗೂಡು ಗ್ರಾಮದಲ್ಲಿ ಅಸ್ಪೃಶ್ಯತಾ ಆಚರಣೆ ಇರುವುದು ವಿಪರ್ಯಾಸದ ಸಂಗತಿ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ವಿಷಾದಿಸಿದೆ. ಆಲಗೂಡು ಗ್ರಾಮದಲ್ಲಿ ಮಾ.20 ರಿಂದ 27 ರವರೆಗೆ ನಡೆಯುವ ಗ್ರಾಮದೇವತೆ ಹಬ್ಬದ ಸಂದರ್ಭದಲ್ಲಿ ದಲಿತರ್ಯಾರು ದೇವಸ್ಥಾನ ಪ್ರವೇಶಿಸುವಂತಿಲ್ಲ. ಯಾರು ಸಹ ಮುಟ್ಟಾಗುವುದು, ಜನನ ಪ್ರಸವವಾಗುವುದು, ಜಾತಿ ಮೈಲಿಗೆಯಾಗಬಾರದು, ಮಾಂಸ, ಎಣ್ಣೆ ಪದಾರ್ಥ ಬಳಸುವಂತಿಲ್ಲ, ಪ್ರತಿದಿನ ತಣ್ಣೀರು ಸ್ನಾನ ಮಾಡಿ ಹೋಮ ಹವನದಲ್ಲಿ ಭಾಗವಹಿಸಬೇಕೆಂಬ ಕಟ್ಟುಪಾಡುಗಳು ಅಸ್ಪಶ್ಯೃತಾ ಆಚರಣೆಗೆ ನಿದರ್ಶನವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ಬಗ್ಗೆ ಶಿಸ್ತುಕ್ರಮ ಕೈಗೊಳ್ಳಬೇಕೆಂದು ತಾಲೂಕು ಅಧ್ಯಕ್ಷ ಸಿ. ಪುಟ್ಟಮಲ್ಲಯ್ಯ ಆಗ್ರಹಿಸಿದ್ದಾರೆ.
ಟ್ಯಾಂಕ್ ಶುಚಿಗೊಳಿಸಿ
ಬೈಲಕುಪ್ಪೆ: ಬೈಲಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಶುಚಿಗೊಳಿಸುವಂತೆ ಜಿಪಂ ಸಿಇಒ ಪಿ.ಎ. ಗೋಪಾಲ್ ನೀರುಗಂಟಿಗಳಿಗೆ ಸೂಚನೆ ನೀಡಿದರು. ಬುಧವಾರ ಗ್ರಾಪಂ ಆವರಣದಲ್ಲಿ ನಡೆದ ಸಭೆಯಲ್ಲಿ ಬೈಲಕುಪ್ಪೆ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ವಾಟರ್ ಮ್ಯಾನ್‌ಗಳು ಭಾಗವಹಿಸಿದ್ದರು. ಪ್ರತಿ ವಾರಕ್ಕೆ ಒಂದು ಬಾರಿ ಕಡ್ಡಾಯವಾಗಿ ತೊಳೆದು ಬ್ಲಿಚಿಂಗ್ ಪೌಡರ್ ಸಿಂಪಡಿಸಬೇಕು. ಬೋರ್‌ವೆಲ್‌ನ ಸುತ್ತಮುತ್ತ ಕೊಳಚೆ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡಿ ಹಳ್ಳಿಗಳಲ್ಲಿ ಯಾರಿಗೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಪಿಡಿಒ ಆದಿಯಾಗಿ ಎಲ್ಲರಿಗೂ ಕಟ್ಟುನಿಟ್ಟಿನ ಆದೇಶ ನೀಡಿದರು.
ನಾಲ್ವರ ಸೆರೆ
ಮೈಸೂರು: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿರುವ ಘಟನೆ ಮೈಸೂರು ತಾಲೂಕು ಸಿದ್ದರಾಮನಹುಂಡಿ ಬಳಿ ಬುಧವಾರ ನಡೆದಿದೆ. ಈ ಸಂಬಂಧ ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಬೈಲಕುಪ್ಪೆ: ಸಮೀಪದ ಆವರ್ತಿ ಗ್ರಾಮದ ಜಯಂತಿ ಎಂಬವರು ಮಾ.15 ರಿಂದ ಕಾಣೆಯಾಗಿದ್ದಾರೆ. ಕಾಣೆಯಾಗಿರುವ ಜಯಂತಿ ಮಡಿಕೇರಿಯ ಮೆಡಿಕಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಚಹರೆ ಇಂತಿದೆ- 19 ವರ್ಷ, 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಎಣ್ಣೆಗೆಂಪು, ಎಡ ಕಣ್ಣಿನ ರಪ್ಪೆಯ ಅಂಚಿನಲ್ಲಿ ಕಪ್ಪು ಮಚ್ಚೆ ಇದೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬೈಲಕುಪ್ಪೆ ಪೊಲೀಸ್ ಠಾಣೆ ದೂ.08223- 254433 ಅಥವಾ ಪಿರಿಯಾಪಟ್ಟಣ ವೃತ್ತ ನಿರೀಕ್ಷಕರ ಕಚೇರಿಯ ದೂ.08223- 274172ಗೆ ತಿಳಿಸುವಂತೆ ಠಾಣಾಧಿಕಾರಿ ಮುದ್ದು ಮಹಾದೇವ ತಿಳಿಸಿದ್ದಾರೆ.