ಬಿಜೆಪಿ ಪರ ಸಿ.ಟಿ. ರವಿ, ಶೋಭಾ ಕರಂದ್ಲಾಜೆ ಪ್ರಚಾರ
ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಮಾಜಿ ಸಚಿವರಾದ ಸಿ.ಟಿ. ರವಿ ಮತ್ತು ಶೋಭಾ ಕರಂದ್ಲಾಜೆ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ಸಿಂಹ ನಾಮಪತ್ರ ಸಲ್ಲಿಕೆ ಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಿ.ಟಿ. ರವಿ ಅವರು, ಬೆಳಗ್ಗೆಯಿಂದ ಸಂಜೆವರೆಗೂ ಪಕ್ಷದ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ, ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರನ್ನು ಹುರಿದುಂಬಿಸುವ ಕುರಿತು ವಿಚಾರ ವಿನಿಮಯ ಮಾಡಿದರು. ಸಂಜೆ 5 ಗಂಟೆಗೆ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಜೊತೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಒಳಪಡುವ ನಗರದ ಹೊರವಲಯದ ಬೋಗಾದಿಯ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿ ಮತ ಯಾಚಿಸಿದರು. ನಂತರ ಬೆಳವಾಡಿಯಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿ.ಟಿ. ರವಿ ಅವರು ಸಾರ್ವಜನಿಕರಿಗೆ ಮೋದಿ ಅವರ ನಾಯಕತ್ವ, ಪ್ರತಾಪ್ ಸಿಂಹ ಅವರ ಹಿನ್ನೆಲೆ ತಿಳಿಸಿಕೊಟ್ಟರು.
ಬೆಟ್ಟಕ್ಕೆ ತೆರಳಿದ ಶೋಭಾ: ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಮಾಜಿ ಸಚಿವ ಶೋಭಾ ಕರಂದ್ಲಾಜೆ ಅವರು ಗುರುವಾರ ಸಂಜೆ ಪ್ರತಾಪ್ಸಿಂಹ ಅವರೊಂದಿಗೆ ಬೋಗಾದಿಯಲ್ಲಿ ಪಾದಯಾತ್ರೆ ನಡೆಸಿದ ಬಳಿಕ ಪಕ್ಷದ ಕಚೇರಿಗೆ ಭೇಟಿ ನೀಡಿ, ನಂತರ ಚಾಮುಂಡಿಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ವಿ.ಪ. ಮಾಜಿ ಸದಸ್ಯ ತೋಂಟದಾರ್ಯ, ಅಭ್ಯರ್ಥಿ ಪ್ರತಾಪ್ ಸಿಂಹ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೇಮಂತಕುಮಾರ್, ರಾಜ್ಕುಮಾರ್ ಇದ್ದರು.