ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಂಪಿಗೆ ಬಿದ್ದು ವಿದ್ಯಾರ್ಥಿ ಸಾವು; ಏಳು ಶಿಕ್ಷಕರ ಅಮಾನತು

Mainashree
Updated On : 20 Mar 2014, 10:26 am

ಹುಣಸೂರು: ತಾಲೂಕಿನ ಯಮಗುಂಬ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನೀರಿನ ಸಂಪಿಗೆ ಬಿದ್ದು ಶಾಲಾ ವಿದ್ಯಾರ್ಥಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಕರ ನಿರ್ಲಕ್ಷ್ಯತೆ, ಕರ್ತವ್ಯ ಲೋಪವನ್ನು ಗಂಭೀರವಾಗಿ ಪರಿಗಣಿಸಿ, ಡಿಡಿಪಿಐ ಬಸಪ್ಪ ಅವರು ಮುಖ್ಯ ಶಿಕ್ಷಕ ಸೇರಿದಂತೆ 7 ಶಿಕ್ಷಕರನ್ನು ಅಮಾನತುಗೊಳಿಸಿದ್ದಾರೆ.
ಮುಖ್ಯ ಶಿಕ್ಷಕ ರಾಜು, ಸಹಶಿಕ್ಷಕರಾದ ಚಂದ್ರೇಗೌಡ, ಕಿರಣ್, ಸುಲೋಚನಾ, ಸುವರ್ಣ, ಸಹನಾ ಹಾಗೂ ದೈಹಿಕ ಶಿಕ್ಷಕ ಕುಮಾರ್ ಅಮಾನತುಗೊಂಡವರು.
ಶಾಲೆಗೆ ಈಗ ಅಕ್ಕಪಕ್ಕದ ಶಾಲೆಗಳಿಂದ ನಾಲ್ಕು ಮಂದಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಡಿಡಿಪಿಐ, ಮುಖ್ಯ ಶಿಕ್ಷಕ ರಾಜು ರಜೆ ಹಾಕದೆ ಮಧ್ಯಾಹ್ನ 12.30ಕ್ಕೆ ಶಾಲೆಯಿಂದಲೇ ನಿರ್ಗಮಿಸಿದ್ದರು. ಮಧ್ಯಾಹ್ನ ಹಾಜರಾತಿ ಪುಸ್ತಕದಲ್ಲಿ ಹಾಜರಾತಿ ಹಾಕಿರಲಿಲ್ಲ. ಸಂಪಿಗೆ ಬಿದ್ದಿದ್ದನ್ನು ಕಣ್ಣಾರೆ ಕಂಡ ಬಾಲಕಿಯೊಬ್ಬಳು ಶಿಕ್ಷಕರ ಗಮನಕ್ಕೆ ತಂದರೂ ಯಾರು ಕ್ರಮ ಕೈಗೊಂಡಿಲ್ಲ.
ಗ್ರಾಮಕ್ಕೆ ಬಂದ ವೇಳೆ ತಾವೇ ಎಲ್ಲ ಶಿಕ್ಷಕರಿಗೂ ಹಲವಾರು ಬಾರಿ ಕರೆ ಮಾಡಿದಾಗಲೂ ಬರುತ್ತಿದ್ದೇವೆಂದು ಹೇಳಿ ಮಧ್ಯರಾತ್ರಿವರೆಗೂ ಯಾವೊಬ್ಬ ಶಿಕ್ಷಕನೂ ಬರಲೇ ಇಲ್ಲ. ಈ ಎಲ್ಲ ನಿರ್ಲಕ್ಷ್ಯತೆ, ಕರ್ತವ್ಯ ಲೋಪವನ್ನು ಪರಿಗಣಿಸಿ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದರು.
ಬುಧವಾರ ಶಾಲೆಯ ಸಂಪಿಗೆ ಬಿದ್ದು ಮೃತಪಟ್ಟ ಒಂದನೇ ತರಗತಿ ವಿದ್ಯಾರ್ಥಿ ಪ್ರಶಾಂತ್ ಸಾವಿನ ನಂತರ ಸಂಜೆ ನೀರಿನ ಸಂಪಿನಿಂದ ಶವ ಹೊರತೆಗೆದು ಶಾಲೆಯ ಶಿಕ್ಷಕರಿಗೆ ಗ್ರಾಮಸ್ಥರು ಸಾಕಷ್ಟು ಕರೆ ಮಾಡಿದರೂ ಬರಲೇ ಇಲ್ಲ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು, ಪೊಲೀಸರು ಬರಲಿಲ್ಲವೆಂದು ಆಕ್ರೋಶಗೊಂಡಿದ್ದ ಗ್ರಾಮಸ್ಥರು ಪ್ರತಿಭಟಿಸಿದರು.
ತಡರಾತ್ರಿ ಬಂದ ಅಧಿಕಾರಿಗಳು: ಸಂಜೆ 7.30ರ ವೇಳೆಗೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಬಂದರೆ, ರಾತ್ರಿ 9ಕ್ಕೆ ಡಿಡಿಪಿಐ ಬಸಪ್ಪ, ಬಿಇಒ ರಾಜಶೇಖರ್, ತಹಸೀಲ್ದಾರ್ ವೆಂಕಟಾಚಲಪ್ಪ ಬಂದ ವೇಳೆ ಗ್ರಾಮಸ್ಥರು ಸ್ಥಳಕ್ಕೆ ನಿರ್ಲಕ್ಷ್ಯತೆ ವಹಿಸಿರುವ ಶಿಕ್ಷಕರನ್ನು ಕರೆಸುವಂತೆ ಪಟ್ಟು ಹಿಡಿದರು. ಅಧಿಕಾರಿಗಳು ಸಾಕಷ್ಟು ಕರೆ ಮಾಡಿದರೂ ಮಧ್ಯರಾತ್ರಿಯಾದರೂ ಸ್ಥಳಕ್ಕೆ ಬರಲೇ ಇಲ್ಲ. ಇದರಿಂದ ಗ್ರಾಮಸ್ಥರು ಆಕ್ರೋಶಗೊಂಡರು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಜಿಪಂ ಸದಸ್ಯರಾದ ಸಿ.ಟಿ. ರಾಜಣ್ಣ, ರಮೇಶ್, ತಾಪಂ ಮಾಜಿ ಸದಸ್ಯ ರಮೇಶ್ ಹಾಗೂ ಗ್ರಾಮದ ಮುಖಂಡರು, ಗ್ರಾಮಸ್ಥರನ್ನು ಸಮಾಧಾನಪಡಿಸಿ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಸಾಮೂಹಿಕವಾಗಿ ಅಮಾನತುಗೊಳಿಸುವ ಅಧಿಕಾರಿಗಳ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದರು. ನಂತರ ಮಧ್ಯರಾತ್ರಿಯೇ ಶವಪರೀಕ್ಷೆ ನಡೆದು ಅಂತ್ಯ ಸಂಸ್ಕಾರ ನಡೆಸಿದರು.
50 ಸಾವಿರ ಪರಿಹಾರ: ಮೃತನ ಕುಟುಂಬಕ್ಕೆ ಶಿಕ್ಷಕರ ಮತ್ತು ಕಲ್ಯಾಣನಿಧಿಯಿಂದ 50 ಸಾವಿರ ಪರಿಹಾರ ನೀಡಲಾಗುವುದೆಂದು ಡಿಡಿಪಿಐ ಪ್ರಕಟಿಸಿದರು. ಸ್ಥಳದಲ್ಲೇ ಶವ ಸಂಸ್ಕಾರ ಯೋಜನೆಯಡಿ ತಹಸೀಲ್ದಾರ್ 1000 ವಿತರಿಸಿದರು.
ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಆರತಿ, ರಮೇಶ್ ದಂಪತಿ ಹಾಗೂ ಅಜ್ಜಿಯ ಆಕ್ರಂದನ, ಗ್ರಾಮಸ್ಥರ ಕಂಬನಿಯಿಂದಾಗಿ ಇಡಿ ಗ್ರಾಮವೆ ಶೋಕ ಸಾಗರದಲ್ಲಿ ಮುಳುಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement