ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಾಸನದಲ್ಲಿ ಸೆರೆ ಹಿಡಿದ ಕಾಡಾನೆಗಳು ದೊಡ್ಡ ಹರವೆಗೆ

Mainashree
Updated On : 20 Mar 2014, 10:19 am

ಪಿರಿಯಾಪಟ್ಟಣ: ಹಾಸನ ಜಿಲ್ಲೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದ ಎರಡು ಕಾಡಾನೆಗಳನ್ನು ತಾಲೂಕಿನ ದೊಡ್ಡಹರವೆ ಅರಣ್ಯ ಪ್ರದೇಶದ ಆನೆದೊಡ್ಡಿಗೆ ತರಲಾಗಿದೆ.
ಹಾಸನ ಜಿಲ್ಲೆ ಯಸಳೂರು ವಲಯ ಅರಣ್ಯ ಪ್ರದೇಶದ ಐಸೂರು ಜಯದೇವ ಎಸ್ಟೇಟ್‌ನಲ್ಲಿ ಸೆರೆ ಹಿಡಿಯಲಾಗಿದ್ದ ಸುಮಾರು 6ರಿಂದ 8 ವರ್ಷ ವಯಸ್ಸಿನ ಗಂಡಾನೆ ಹಾಗೂ ದೇವರಮನೆ ತೋಟದಲ್ಲಿ (ನಿರ್ಮಾ ಎಸ್ಟೇಟ್) ಸೆರೆ ಹಿಡಿಯಲಾಗಿದ್ದ 8ರಿಂದ 10 ವರ್ಷದ ಗಂಡಾನೆಯನ್ನು ಆನೆದೊಡ್ಡಿಯಲ್ಲಿ ಬಿಡಲಾಗಿದೆ.
ಹೈಕೋರ್ಟ್ ಆದೇಶದಂತೆ 25 ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಈವರೆಗೆ ಒಟ್ಟು 10 ಕಾಡಾನೆಗಳನ್ನು ಸೆರೆ ಹಿಡಿದಿದ್ದಾರೆ. ಅದರಲ್ಲಿ 2 ಆನೆಗಳನ್ನು ಪಿರಿಯಾಪಟ್ಟಣ ತಾಲೂಕು ದೊಡ್ಡಹರವೆ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಆನೆದೊಡ್ಡಿಗೆ ಬಿಡಲಾಗಿದೆ. ದೊಡ್ಡಹರವೆ ಅರಣ್ಯ ಪ್ರದೇಶದಲ್ಲಿನ ಕಾವೇರಿ ನದಿ ತೀರಕ್ಕೆ ಸಮೀಪದ 150 ಎಕರೆ ಅರಣ್ಯ ಪ್ರದೇಶವನ್ನು ಆನೆ ತರಬೇತಿಗಾಗಿ ಹಾಗೂ ಕಾಡಾನೆಗಳನ್ನು ಪಳಗಿಸುವ ಕೆಲಸಕ್ಕಾಗಿ ಮತ್ತು ಆನೆದೊಡ್ಡಿ ನಿರ್ಮಿಸಿಕೊಳ್ಳಲು ಮತ್ತಿತರ ಅಗತ್ಯಕ್ಕಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ.
ಈವರೆಗೆ ಸೆರೆ ಹಿಡಿಯಲಾಗಿರುವ 10 ಆನೆಗಳಲ್ಲಿ 4 ಆನೆಗಳನ್ನು ನಾಗರಹೊಳೆ ಮತ್ತಿಗೋಡಿನ ಆನೆದೊಡ್ಡಿಯಲ್ಲಿ ಬಿಡಲಾಗಿದ್ದು, ಅವುಗಳಲ್ಲಿ 1 ಮಖ್ನಾ ಹಾಗೂ 3 ಗಂಡು ಆನೆಗಳಿವೆ. ಅದರಲ್ಲಿ ಮಖ್ನಾ ಆನೆಯ ಹಾಗೂ ಒಂದು ಗಂಡು ಆನೆಯ ಎಡಗಣ್ಣು ಕುರುಡಾಗಿದೆ. ದುಬಾರೆ ಅರಣ್ಯ ಪ್ರದೇಶದ ಆನೆದೊಡ್ಡಿಗೆ 4 ಗಂಡಾನೆಗಳನ್ನು ಬಿಡಲಾಗಿದ್ದು, ಅವುಗಳಲ್ಲಿ ಒಂದು ಆನೆಯ ಎಡಗಣ್ಣು ಕುರುಡಾಗಿದೆ.
ಹಾಸನದಿಂದ ತಂದ ಎರಡೂ ಕಾಡಾನೆಗಳನ್ನು ಆನೆದೊಡ್ಡಿಗೆ ಬಿಡುವ ಕಾರ್ಯಾಚರಣೆಗೆ ದುಬಾರೆ ಸಾಕಾನೆ ಶಿಬಿರದ ಇಂದ್ರ, ಚಂದ್ರ, ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು, ಬಲರಾಮ ಹಾಗೂ ಕೆ. ಗುಡಿ ಸಾಕಾನೆ ಶಿಬಿರದ ಶ್ರೀರಾಮ ಆನೆಗಳನ್ನು ಬಳಸಿಕೊಳ್ಳಲಾಯಿತು. ಆನೆಗಳ ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರೆದಿದ್ದು, ನಂತರ ಏನು ಮಾಡಬೇಕೆಂಬ ನಿರ್ದೇಶನ ಬಂದಿಲ್ಲ ಎಂದು ಡಿಎಫ್‌ಒ ವಿಜಯ್‌ಕುಮಾರ್ ತಿಳಿಸಿದ್ದಾರೆ.
ಎರಡು ಗಂಡು ಆನೆಗಳೂ ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಕೇವಲ ಎರಡು ತಿಂಗಳಲ್ಲಿ ಆನೆಗಳನ್ನು ಪಳಗಿಸಿ ದೊಡ್ಡಿಯಿಂದ ಹೊರ ತರಬಹುದಾಗಿದೆ ಎಂದು ಆನೆಗಳ ಆರೋಗ್ಯ ತಪಾಸಣೆ ನಡೆಸಿದ ನಾಗರಹೊಳೆ ವನ್ಯಜೀವಿ ವಿಭಾಗದ ಡಾ. ಉಮಾಶಂಕರ್ ತಿಳಿಸಿದ್ದಾರೆ. ಕಾಡಿನಿಂದ ಸೆರೆ ಹಿಡಿಯಲಾದ ಆನೆಗಳನ್ನು ಪಳಗಿಸುವ ಸಲುವಾಗಿ ನಾಲ್ಕು ಆನೆದೊಡ್ಡಿಗಳನ್ನು ದೊಡ್ಡಹರವೆ ಅರಣ್ಯ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸೆರೆ ಸಿಗುವ ಎರಡು ಕಾಡಾನೆಗಳನ್ನು ಇಲ್ಲೇ ಇಟ್ಟುಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಒಂದು ಆನೆಗೆ ಒಬ್ಬ ಮಾವುತ ಹಾಗೂ ಒಬ್ಬ ಕಾವಾಡಿಯನ್ನು ನೇಮಿಸಲಾಗುವುದು. ಅವರೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಯೂ ಆನೆಗಳ ಪಳಗಿಸುವ ಕೆಲಸದಲ್ಲಿ ತೊಡಗುತ್ತಾರೆ. ಎರಡು ಸಾಕಾನೆಗಳನ್ನು ಕಾಡಾನೆ ಪಳಗಿಸುವ ಕೆಲಸಕ್ಕೆ ಬಳಸಲಾಗುತ್ತದೆ ಎಂದು ಪಿರಿಯಾಪಟ್ಟಣ ವಲಯ ಅರಣ್ಯಾಧಿಕಾರಿ ಎಂ.ಎಸ್. ಚಿಣ್ಣಪ್ಪ ತಿಳಿಸಿದ್ದಾರೆ.
ಎಸಿಎಫ್‌ಗಳಾದ ಪ್ರಸನ್ನಕುಮಾರ್, ಮಂಜುನಾಥ್, ಆರ್‌ಎಫ್‌ಒಗಳಾದ ಎಂ.ಎಸ್. ಚಿಣ್ಣಪ್ಪ, ರವಿ, ಶಿವರಾಂ, ವನ್ಯ ಜೀವಿ ವಿಭಾಗದ ಪಶುವೈದ್ಯಾಧಿಕಾರಿಗಳಾದ ಡಾ. ನಾಗರಾಜು, ಚಟ್ಟಯಪ್ಪ, ಸಿಬ್ಬಂದಿಗಳಾದ ಅಕ್ರಂ, ವೆಂಕಟೇಶ್, ಕರಂಬಯ್ಯ, ರಂಗರಾಜ್, ರಮೇಶ್ ಇದ್ದರು.

  ಪಿ.ಎನ್. ಸುಬ್ರಮಣ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement