ಒಂದೆರಡು ದಿನದಲ್ಲಿ 'ತೆನೆಹೊತ್ತು' ಮೈಸೂರಿಗೆ ಬರಲಿದ್ದಾನೆ ಹುರಿಯಾಳು
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ ಮಾ.23 ಅಥವಾ 24 ರಂದು ಅಭ್ಯರ್ಥಿಯನ್ನು ಘೋಷಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹೇಳಿದರು.
ಮೈಸೂರು ನಗರ ಜೆಡಿಎಸ್ ಪರಿಶಿಷ್ಟ ಜಾತಿಗಳ ವಿಭಾಗದ ವತಿಯಿಂದ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಪರಿಶಿಷ್ಟ ಜಾತಿ ವಿಭಾಗದ ವಿವಿಧ ಕ್ಷೇತ್ರಗಳ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.
ಜೆಡಿಎಸ್ ವರಿಷ್ಠರಾದ ಎಚ್.ಡಿ ದೇವೇಗೌಡ ಅವರು ಮಾ.23 ಅಥವಾ 24 ರಂದು ಅಭ್ಯರ್ಥಿಯನ್ನು ಘೋಷಿಸುವರು. ಅದೇ ದಿನ ನಾಮಪತ್ರ ಸಲ್ಲಿಸುವ ಕಾರ್ಯಕ್ರಮ ನಡೆಯಲಿದ್ದು, ಆ ದಿನ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಉತ್ಸಾಹ ತೋರಬೇಕು ಎಂದರು.
ರಾಷ್ಟ್ರೀಯ ಪಕ್ಷಗಳು ದಲಿತರಿಗೆ ಅನ್ಯಾಯ ಮಾಡುತ್ತಲೇ ಬಂದಿವೆ. ಏನೇ ಅನ್ಯಾಯ ಮಾಡಿದರೂ ದಲಿತರು ತಮಗೆ ಮತ ಹಾಕುತ್ತಾರೆ ಎಂಬ ಮನೋಭಾವ ಕಾಂಗ್ರೆಸ್ ನಾಯಕರಲ್ಲಿದೆ. ಈ ಬಾರಿ ದಲಿತರು ಸರಿಯಾದ ಚಿಂತನೆ ನಡೆಸುವ ಮೂಲಕ, ಎಲ್ಲಾ ವರ್ಗಗಳ ಪರ ಹೋರಾಟ ನಡೆಸಿ ಸಮಾನತೆ ಸಾರಿರುವ ಜೆಡಿಎಸ್ ಪಕ್ಷನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ಮಾಜಿ ಮೇಯರ್ ಕೃಷ್ಣ ಮಾತನಾಡಿದರು. ಮಾಜಿ ಮೇಯರ್ ಸಂದೇಶ್ ಸ್ವಾಮಿ ಮಾತನಾಡಿ, ಸಮಾಜದ ಎಲ್ಲಾ ವರ್ಗಗಳ ಹಿತಚಿಂತನೆ ನಡೆಸುವ ಏಕೈಕ ಪಕ್ಷ ಜೆಡಿಎಸ್. ಎಚ್.ಡಿ ದೇವೇಗೌಡ ಅವರು ಅಧಿಕಾರದಲ್ಲಿದ್ದಾಗ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಜಾರಿಗೊಳಿಸಿದ ಪರಿಣಾಮ ದಲಿತರು ಹಾಗೂ ಹಿಂದುಳಿದವರು ಮೇಯರ್ ಆಗಲು ಹಾಗೂ ರಾಜಕೀಯ ಅಧಿಕಾರ ಪಡೆಯಲು ಸಾಧ್ಯವಾಯಿತು ಎಂದರು.
ನಗರಾಧ್ಯಕ್ಷ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್ ವಿ.ಶೈಲೇಂದ್ರ, ಮಾಜಿ ಉಪಮೇಯರ್ ಮಹದೇವಪ್ಪ, ನಗರ ಪಾಲಿಕೆ ಸದಸ್ಯ ಎಸ್. ಬಾಲು, ಎಸ್.ಬಿ.ಎಂ. ಮಂಜು, ವೇಣುಗೋಪಾಲ್, ಪಿ. ಮಂಜನಾಥ್, ಟಿ. ದೇವರಾಜ್, ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ. ನಟರಾಜ್, ಪ್ರಧಾನ ಕಾರ್ಯದರ್ಶಿ ಮುದ್ದುರಾಜ್ ಇದ್ದರು.
ಷರೀಫ್ ಕಣಕ್ಕೆ: ದೇವೇಗೌಡ
ಹಾಸನ: ಮೆಕ್ಕಾದಿಂದ ಆಗಮಿಸಿದ ಕೂಡಲೇ ಮಾಜಿ ಕೇಂದ್ರ ಸಚಿವ ಸಿ.ಕೆ. ಜಾಫರ್ ಷರೀಫ್ ಅವರು ಮೈಸೂರು- ಕೊಡಗು ಲೋಕಸಭೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಆ ಬಗ್ಗೆ ಯಾವುದೇ ಅನುಮಾನಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಖಚಿತವಾಗಿ ಹೇಳಿದ್ದಾರೆ. ಶುಕ್ರವಾರ ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನನ್ನ ಒಡನಾಡಿಗಳಾಗಿದ್ದ ಆನೇಕ ಮುಖಂಡರು ಜೆಡಿಎಸ್‌ಗೆ ಬರಲಿದ್ದಾರೆ ಎಂದು ಹೇಳಿದ ಗೌಡರು, ಬರುವವರು ಯಾರು ಎಂಬ ಪ್ರಶ್ನೆಗೆ ಉತ್ತರಿಸಲಿಲ್ಲ.