ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕನ್ನಡ ಅಭಿವೃದ್ಧಿಗೆ ವಿವಿ ವಿಶೇಷ ನೆರವು

Mainashree
Updated On : 21 Mar 2014, 11:22 am

ಮೈಸೂರು: ವಿವಿಯ ಯಾವುದೇ ಕಾಲೇಜಿನ ಕನ್ನಡ ವಿಭಾಗಗಳ ಬೆಳವಣಿಗೆಗೆ ವಿಶೇಷ ನೆರವು ನೀಡಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು.
ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶುಕ್ರವಾರ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಸಂಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ವಿಭಾಗಗಳು ಬೆಳೆದರೆ ಕರ್ನಾಟಕ ಬೆಳೆದಂತೆ. ನಾನು ರಾಸಾಯನಶಾಸ್ತ್ರ ವಿಜ್ಞಾನಿಯಾಗಿದ್ದರೂ ಸಹ ಕನ್ನಡ ನನ್ನ ಜೀವನದ ಅವಿಭಾಜ್ಯ ಅಂಗ. ಹೀಗಾಗಿ ಈ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದೇನೆ. ಕನ್ನಡದ ವಿಭಾಗಗಳ ಬೆಳವಣಿಗೆಗೆ ಅಗತ್ಯ ನೆರವು ನೀಡಲಾಗುವುದು. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದರು. ಕನ್ನಡದ ದಿಗ್ಗಜರಾದ ಕುವೆಂಪು, ಜಿಎಸ್ಸೆಸ್ ಹಾಗೂ ದೇಜಗೌ ಅವರು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳಾಗಿ, ಅಧ್ಯಾಪಕರಾಗಿ ವಿವಿಯ ಘನತೆ ಹೆಚ್ಚಿಸಿದ್ದು, ಈ ಕಾಲೇಜು ಪ್ರತ್ಯೇಕ ವಿವಿಯಾಗಿ ಬೆಳೆಯಲಿ. ಅದಕ್ಕೆ ಬೇಕಾದ ಸಹಕಾರ ಒದಗಿಸಲಾಗುವುದು. ಇಂತಹ ವಿದ್ವಾಂಸರು ಮರುಕಳಿಸುವಂತೆ ವಿದ್ಯಾರ್ಥಿಗಳು ಶ್ರಮ ವಹಿಸಬೇಕು ಎಂದು ಆಶಿಸಿದರು.
ಜಿಎಸ್‌ಎಸ್ ಮನಗೆದ್ದ ಕವಿ: ರಾಷ್ಟ್ರಕವಿ ಶಿವರುದ್ರಪ್ಪ ಅವರು ಜನಮನಗೆದ್ದ ಕವಿ. ಕನ್ನಡದ ಪರಂಪರೆ ಉಳಿಸುವಲ್ಲಿ ಅಪಾರ ಕೊಡುಗೆ ನೀಡಿದವರು. ಅವರು ನಾಡಿಗೆ ಮಾತ್ರವಲ್ಲ ವಿಶ್ವಕ್ಕೆ ಕನ್ನಡದ ಕೀರ್ತಿ ಬೆಳಗಿಸಿದವರು. ಅಂತಹ ಮಹಾನ್ ಕವಿಯ ವೈಜ್ಞಾನಿಕತೆ ಹಾಗೂ ವೈಚಾರಿಕತೆಯನ್ನು ಯುವಜನತೆ ಅಳವಡಿಸಿಕೊಳ್ಳಬೇಕು ಎಂದರು.
ಆಶಯ ನುಡಿಗಳಾಡಿದ ಸಾಹಿತಿ ಪ್ರೊ.ಕೃಷ್ಣಮೂರ್ತಿ ಹನೂರು, ಎಲ್ಲರನ್ನು ಬೆಳೆಸುವ ಪ್ರವೃತ್ತಿ ಹೊಂದಿದ್ದ ಜಿಎಸ್ಸೆಸ್, ವಿವಿಗಳಲ್ಲಿನ ಕಲಾ ವಿಭಾಗದಲ್ಲಿ ಏಕರೂಪ ಶಿಕ್ಷಣ ಇರಬಾರದು ಎಂದು ಪ್ರತಿಪಾದಿಸಿದವರು. ಸಮಾನತೆಯಿಂದ ದೈವತ್ವ ನೆಲೆಯಾಗಲಿದೆ ಎಂದು ಭಾವಿಸಿದ್ದರು ಎಂದು ಸ್ಮರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸ.ನ. ಗಾಯತ್ರಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಡಾ.ಬಿ. ನಾಗರಾಜಮೂರ್ತಿ ಇದ್ದರು. ವಿಭಾಗದ ಮುಖ್ಯಸ್ಥ ಡಾ.ಕೆ.ತಿಮ್ಮಯ್ಯ ಸ್ವಾಗತಿಸಿದರು. ಸಹಪ್ರಾಧ್ಯಾಪಕ ಡಾ. ಕೆಂಪೇಗೌಡ ನಿರೂಪಿಸಿದರು. ನಂತರ ನಡೆದ ಗೋಷ್ಠಿಯಲ್ಲಿ ತಜ್ಞರು ವಿಚಾರ ಮಂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement