ಕೈ ಅಭ್ಯರ್ಥಿ ವಿಶ್ವನಾಥ್ ನಾಮಪತ್ರ ಸಲ್ಲಿಕೆ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ವಿವಿಧ ಮಠಾಧಿಪತಿಗಳು ಮತ್ತು ಧರ್ಮ ಗುರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ಎಚ್.ವಿಶ್ವನಾಥ್ ಅವರು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕಾರ್ಯಕರ್ತರ ಜೊತೆಗೂಡಿ ಪೂಜೆ ಸಲ್ಲಿಸಿದ ಬಳಿಕ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಿ.ಶಿಖಾ ಅವರಿಗೆ ನಾಲ್ಕು ಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ವಿಶ್ವನಾಥ್ ಜೊತೆ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್, ಶಾಸಕರಾದ ತನ್ವೀರ್ಸೇಠ್, ಆರ್. ಧರ್ಮಸೇನ, ಕೊಡಗು ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಪ್ರದೀಪ್ ಇದ್ದರು.
ಬಳಿಕ ಮಾತನಾಡಿದ ವಿಶ್ವನಾಥ್, ಕಾಂಗ್ರೆಸ್ನದ್ದು ಸೇಡಿನ ರಾಜಕಾರಣ ಅಲ್ಲ. ಶಾಂತಿಯುತ ಮತ್ತು ವಿಶ್ವಾಸದ ರಾಜಕಾರಣ. ಬಿಜೆಪಿ ಅಭ್ಯರ್ಥಿಯಂತೆ ನಾವು ಪ್ರಚೋದನಕಾರಿ ಭಾಷಣ ಮಾಡುವುದಿಲ್ಲ. ಇಂದಿನಿಂದ ಚುನಾವಣೆ ಅಧಿಕೃತವಾಗಿ ಆರಂಭವಾಗಿದೆ. ಬಿ ಫಾರಂ ಸಮೇತವಾಗಿ ನಾಮಪತ್ರ ಸಲ್ಲಿಸಿದ್ದೇನೆ. ನನಗೆ ಯಾರು ನೇರ ಎದುರಾಳಿ ಎಂಬುದಿಲ್ಲ. ಅಲ್ಲದೆ ಜಾಫರ್ ಷರೀಫ್ ಅವರು ಜೆಡಿಎಸ್ಗೆ ಹೋಗುತ್ತಾರೆ ಎಂಬುದೆಲ್ಲ ಕೇವಲ ಊಹಾಪೋಹ. ಜಾಫರ್ ಷರೀಫ್ ಕಾಂಗ್ರೆಸ್ನ ಹಿರಿಯ ಮುತ್ಸದ್ದಿಗಳು. ಅವರು ತಪ್ಪು ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಸುಳ್ಳು ಎಂದರು.
ಈ ವೇಳೆ ಸಚಿವರಾದ ಡಾ.ಎಚ್.ಸಿ. ಮಹಾದೇವಪ್ಪ, ಶ್ರೀನಿವಾಸಪ್ರಸಾದ್, ಧರ್ಮಸೇನ ಇದ್ದರು.