'ಜೆಡಿಎಸ್ ಸೇರಿದರೆ ಷರೀಫ್ ಭವಿಷ್ಯ ಹಾಳು'
ಮೈಸೂರು: ಕಾಂಗ್ರೆಸ್ ಹಿರಿಯ ಮುಖಂಡರಾದ ಸಿ.ಕೆ. ಜಾಫರ್ ಷರೀಫ್ ಅವರು ಜೆಡಿಎಸ್ ಸೇರಿದರೆ ಸಮಾಜ ಹಾಳಾಗುತ್ತದೆ ಹಾಗೂ ಅವರ ಭವಿಷ್ಯವೂ ಮಂಕಾಗುತ್ತದೆ ಎಂದು ಸಮಾಜ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅಯೂಬ್ಖಾನ್ ಹೇಳಿದರು. ಕಾಂಗ್ರೆಸ್ ಪಕ್ಷದಲ್ಲಿ ಹಲವು ಸ್ಥಾನಮಾನಗಳನ್ನು ಅನುಭವಿಸಿರುವ ಷರೀಫರು ಪಕ್ಷಕ್ಕೆ ನಿಷ್ಠೆ ವ್ಯಕ್ತಪಡಿಸಬೇಕು. ಕಾಂಗ್ರೆಸ್ ದೊಡ್ಡ ಪಕ್ಷವಾಗಿದ್ದು, ಇನ್ನಷ್ಟು ಸ್ಥಾನಮಾನ ನೀಡುವ ಶಕ್ತಿ ಅದಕ್ಕಿದೆ. ಅವರೇನಾದರು ಅದೇ ಪಕ್ಷದಲ್ಲಿದ್ದರೆ ರಾಜ್ಯಪಾಲರಾಗುವ ಸಾಧ್ಯತೆ ಇದೆ. ಅಲ್ಲದೇ ನಮ್ಮ ಅಲ್ಪಸಂಖ್ಯಾತರ ಸಮುದಾಯಕ್ಕೆ ಮಾರ್ಗದರ್ಶಕರಾಗಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ಜೆಡಿಎಸ್ ಸೇರುವ ನಿರ್ಧಾರ ಕೈಗೊಳ್ಳಬಾರದು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಇಂದು ರಾಜಕೀಯ ಕ್ಷೇತ್ರದಲ್ಲಿ ಡೋಂಗಿ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಸಂದರ್ಭದಲ್ಲಿ ಸಮಾಜದ ಬುದ್ಧಿಜೀವಿಗಳು, ಚಿಂತಕರು ಜನತೆಗೆ ಮಾರ್ಗದರ್ಶನ ನೀಡಬೇಕು. ಮೈಸೂರು- ಕೊಡಗು ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ನೀಡಬೇಕೆಂಬುದನ್ನು ಒಂದೆರಡು ದಿನದಲ್ಲಿ ನಿರ್ಧರಿಸುವುದಾಗಿ ಅವರು ತಿಳಿಸಿದರು. ವೇದಿಕೆಯ ಎಸ್ಸಿ-ಎಸ್ಟಿ ಘಟಕದ ರಾಜ್ಯಾಧ್ಯಕ್ಷ ದೇವದತ್ತ, ಎನ್ಆರ್ ಕ್ಷೇತ್ರದ ಅಧ್ಯಕ್ಷ ನಾಜೀರ್ ಇದ್ದರು.