ಸಕ್ಕರೆ ಸಮಸ್ಯೆ ಪ್ರಸ್ತಾಪ: ರಮ್ಯಾ ವಿಫಲ
ಕೆ.ಆರ್. ನಗರ: ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಜಯಗಳಿಸಿದ ಸಂಸದೆ ರಮ್ಯಾ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಚುಂಚನಕಟ್ಟೆ, ಮೈಶುಗರ್, ಪಾಂಡವಪುರ ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳನ್ನು ಬಗೆಹರಿಸುವ ವಿಚಾರ ಮಾತನಾಡದೆ, ಲೋಕಸಭಾ ಅಧಿವೇಶನದ ಕಡೆಯ ದಿನ ಬರೆದುಕೊಟ್ಟ ಭಾಷಣ ಓದಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಟೀಕಿಸಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾವೇರಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಮತ್ತು ರಾಜ್ಯದಲ್ಲಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಎಚ್.ಡಿ. ದೇವೇಗೌಡ ನೇತೃತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡಬೇಕಾಗಿದೆ. ಆದ್ದರಿಂದ ಜೆಡಿಎಸ್ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
10 ವರ್ಷಗಳಿಂದ ದೇಶವನ್ನಾಳಿದ ಕಾಂಗ್ರೆಸ್ ನೆಲಕಚ್ಚುತ್ತಿದ್ದು, ಅವರಿಗೆ ನೂರು ಸ್ಥಾನ ಗೆಲ್ಲಲು ಕಷ್ಟ ಸಾಧ್ಯವಾಗಿದೆ. ಬಿಜೆಪಿ ಮೋದಿ ಹೆಸರಿನಲ್ಲಿ ಅಧಿಕಾರಕ್ಕೆ ಬರುತ್ತೇವೆಂಬ ಹಗಲುಗನಸು ಕಾಣುತ್ತಿದ್ದು, ದೇಶದ ಜನತೆ ತೃತೀಯ ರಂಗಕ್ಕೆ ಅಧಿಕಾರ ನೀಡಲು ತೀರ್ಮಾನಿಸಿದ್ದಾರೆ. ಆದ್ದರಿಂದ ತೃತೀಯ ರಂಗ ಸರ್ಕಾರ ರಚನೆ ಮಾಡುವುದು ಖಚಿತವಾಗಿರುವುದರಿಂದ ಜೆಡಿಎಸ್‌ಗೆ ಮತ ನೀಡಬೇಕು ಎಂದು ಕೋರಿದರು.
ಜನ ಭ್ರಮನಿರಸನ: ಕಳೆದ ಉಪ ಚುನಾವಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದ ಜನಪರ ಕಾರ್ಯಕ್ರಮಗಳಿಗೆ ಮಾರು ಹೋಗಿದ್ದ ಮತದಾರರು, ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದರು. ಸರ್ಕಾರದ ಒಂಭತ್ತು ತಿಂಗಳ ಆಡಳಿತದಿಂದ ಭ್ರಮನಿರಸನಗೊಂಡಿರುವ ಜನತೆ ಜೆಡಿಎಸ್ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿದ್ಯುತ್ ಮತ್ತು ಕುಡಿಯುವ ನೀರಿಗಾಗಿ ಎಲ್ಲೆಡೆ ಹಾಹಾಕಾರ ಉಂಟಾಗಿದ್ದು, ಸಮಸ್ಯೆ ಪರಿಹರಿಸಲು ಪ್ರಯತ್ನಿಸದ ಇಂತಹ ಕೆಟ್ಟ ಸರ್ಕಾರವನ್ನು ನೋಡಿರಲಿಲ್ಲ. ಜನತೆಗೆ ಕನಿಷ್ಠ ಮೂಲ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ಒದಗಿಸಲು ವಿಫಲಗೊಂಡಿರುವ ಕಾಂಗ್ರೆಸ್ ಸರ್ಕಾರವನ್ನು ಲೋಕಸಭಾ ಚುಣಾವಣೆಯ ನಂತರ ಕಿತ್ತೊಗೆಯಬೇಕು ಎಂದು ಕರೆ ನೀಡಿದರು. ಶಾಸಕ ಸಾ.ರಾ. ಮಹೇಶ್ ಮಾತನಾಡಿ, ತಾಲೂಕಿನ ಜನತೆ ಮತ್ತು ಜೆಡಿಎಸ್ ಕಾರ್ಯಕರ್ತರು ನನ್ನನ್ನು ತಿರಸ್ಕರಿಸಿದ ವೇಳೆ ಮಾತ್ರ ರಾಜಕಾರಣ ಬಿಟ್ಟು ಸೇವೆ ಮುಂದುವರಿಸಲಾಗುವುದು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿದರು. ಯುವ ಘಟಕದ ಅಧ್ಯಕ್ಷ ಸುಜಯ್, ತಾಪಂ ಅಧ್ಯಕ್ಷೆ ಶಶಿಕಲಾ ರಮೇಶ್, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಸದಸ್ಯೆ ಕಲ್ಪನಾ, ಮಾಜಿ ಉಪಾಧ್ಯಕ್ಷ ಎಚ್.ಸುಬ್ಬಯ್ಯ, ತಾಪಂ ಸದಸ್ಯರಾದ ಹೇಮಾವತಿ, ಹಾಡ್ಯಮಹದೇವಸ್ವಾಮಿ, ನಾಗಣ್ಣ, ಕೃಷ್ಣೇಗೌಡ, ಪುರಸಭಾ ಸದಸ್ಯರಾದ ಎಚ್.ಸಿ. ರಾಜು, ಉಮೇಶ್, ಎನ್.ಶಿವಕುಮಾರ್ ಇತರರು ಇದ್ದರು.