ಬಿಜೆಪಿ ನಂಬಬೇಡಿ, ಜೆಡಿಎಸ್ ಅನುಕೂಲಸಿಂಧು ಪಕ್ಷ: ಸಿಎಂ
ಹುಣಸೂರು: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿಟ್ಟುಕೊಂಡಿದ್ದರಿಂದಲೇ 28 ಕ್ಷೇತ್ರಗಳಲ್ಲಿಯೂ ಏಕ ಕಾಲದಲ್ಲಿ ಲೋಕಸಭಾ ಚುನಾವಣೆಯನ್ನು ಚುನಾವಣಾ ಆಯೋಗ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹುಣಸೂರು ಮುನೇಶ್ವರ ಮೈದಾನದಲ್ಲಿ ಭಾನುವಾರ ಲೋಕಸಭಾ ಚುನಾವಣೆ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಚೆನ್ನಾಗಿಲ್ಲ ಎಂದು ವಿರೋಧ ಪಕ್ಷದವರು ಬೊಗಳೆ ಬಿಡುತ್ತಿದ್ದಾರೆ. ಹಾಗಾದರೆ 28 ಕ್ಷೇತ್ರಗಳ ಚುನಾವಣೆಯನ್ನು ಏಕ ಕಾಲದಲ್ಲಿ ಮತ್ತು ಸಂಘ ಪರಿವಾರದ ದಬ್ಬಾಳಿಕೆಗಳನ್ನು ನಿಲ್ಲಿಸಿ ಎಲ್ಲ ವರ್ಗಗಳು ಶಾಂತಿ ನೆಮ್ಮದಿಯಿಂದ ಬದುಕುತ್ತಿದ್ದಾರೆ ಅಲ್ಲವೆ ಎಂದು ಪ್ರಶ್ನಿಸಿದರು.
ಬಿಜೆಪಿಯನ್ನು ನಂಬಬೇಡಿ, ಜೆಡಿಎಸ್ ಅನುಕೂಲ ಸಿಂಧು ರಾಜಕಾರಣ ಮಾಡುತ್ತಿದೆ. ಆದ್ದರಿಂದ ಜನತೆ ಕಾಂಗ್ರೆಸ್ ಬೆಂಬಲಿಸಿ ನಮ್ಮ ಪಕ್ಷದ ಅಭ್ಯರ್ಥಿ ಎಚ್. ವಿಶ್ವನಾಥ್ಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು. ದೇಶದಲ್ಲಿ ನಂಬರ್ ಒನ್ ಗುಜರಾತ್ ರಾಜ್ಯವಲ್ಲ, ಅದು 9ನೇ ಸ್ಥಾನದಲ್ಲಿದೆ. ಸುಳ್ಳು ಹೇಳಿ ಜನ ನಂಬಿಸುತ್ತಾರೆ. ನಂಬಿ ಮೋಸ ಹೋಗಬೇಡಿ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜಾತಿ ಜಾತಿ ನಡುವೆ ಸಂಘರ್ಷಕ್ಕೆ ಅವಕಾಶ ನೀಡಿ ರಕ್ತಪಾತ ನಡೆಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಹೆದರಿ 2 ಕಡೆ ಸ್ಪರ್ಧೆ: ನರೇಂದ್ರ ಮೋದಿಗೆ ಭಯವಾಗಿ ಎರಡು ಕಡೆ ಸ್ಪರ್ಧಿಸುತ್ತಿದ್ದಾರೆ. ತಾಕತ್ತಿದ್ದರೆ ಒಂದು ಕಡೆ ನಿಂತು ಸ್ಪರ್ಧಿಸಲಿ. ಮೈಸೂರು ಮತ್ತು ಕೊಡಗು ಲೋಕಸಭಾ ಚುನಾವಣೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಒಳ ಒಪ್ಪಂದ ಮಾಡಿಕೊಂಡು ನನ್ನ ಗೌರವವನ್ನು ಕಳೆಯುವ ಯತ್ನ ಮಾಡುತ್ತಾರೆ. ಈ ಬಗ್ಗೆ ಮತದಾರರು ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಜೆಡಿಎಸ್ ಲೆಕ್ಕಕ್ಕಿಲ್ಲ, ಬಿಜೆಪಿಯಲ್ಲಿ ಭ್ರಷ್ಟರೆ ತುಂಬಿದ್ದಾರೆ. ಈ ಸನ್ನಿವೇಶದಲ್ಲಿ ಕಳೆದ ವಿಧಾನಸಭೆಯಲ್ಲಿ 120 ಸ್ಥಾನ ಗೆಲ್ಲುತ್ತೇವೆ ಎಂದು 40 ಸ್ಥಾನಕ್ಕೆ ಬಂದಿವೆ. ಈಗ 19 ಗೆದ್ದೆ ಗೆಲ್ಲುತ್ತೇವೆ ಎಂದು ಸುಳ್ಳು ಹೇಳಿದ್ದಾರೆ ಎಂದು ಕುಟುಕಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿದರು. ಸಚಿವರಾದ ಮಹದೇವಪ್ರಸಾದ್, ಎಚ್.ಸಿ. ಮಹದೇವಪ್ಪ, ಶಾಸಕರಾದ ವೆಂಕಟೇಶ್, ಎಚ್.ಪಿ. ಮಂಜುನಾಥ್, ಧರ್ಮಸೇನಾ, ಸಂಸದ ಎಚ್. ವಿಶ್ವನಾಥ್ ಮುಖಂಡರಾದ ಪ್ರೇಮಕುಮಾರ್, ಡಾ.ಪುಷ್ಪಾವತಿ ಅಮರನಾಥ್, ಮಂಜುಳ, ನಂದಿನಿ, ಗೌರಮ್ಮ ಇದ್ದರು.