ಮೈಸೂರು ಮಾದರಿಯಾಗಿಸಲು ಸಂವಾದ
ಮೈಸೂರು: ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಮೈಸೂರು ಮಾದರಿ ನಗರ ಎಂಬ ವಿಚಾರ ಸಂವಾದ ಕಾರ್ಯಕ್ರಮವನ್ನು ಭಾನುವಾರ ಎಂಜಿನಿಯರುಗಳ ಸಂಸ್ಥೆಯಲ್ಲಿ ಆಯೋಜಿಸಿತ್ತು. ಇಂಡಿಯಾ ಫ್ಲಾಟ್ಫಾರಂ ಸಂಸ್ಥೆಯ ನಗರ ಯೋಜನೆ ಮತ್ತು ವಾಸ್ತುಶಿಲ್ಪ ವಿಭಾಗ ಸಂಯೋಜಕ ಡಾ.ಜಾಕೋಬ್ ಡಿ ರೂವರ್ ಮಾತನಾಡಿ, ಇಂಡಿಯಾ ಫ್ಲಾಟ್ಫಾರಂ, ಎನ್ಪಿ-ಬ್ರಿಡ್ಜಿಂಗ್ ಸಂಸ್ಥೆಯು ಭಾರತ ಮತ್ತು ಯುರೋಪ್ ಸಹಯೋಗದಲ್ಲಿ ಭಾರತದ ಹಲವಾರು ನಗರ ಯೋಜನೆಗಳನ್ನು ಕೈಗೊಂಡಿದೆ. ಅದರಲ್ಲಿ ಮೈಸೂರು ಮಾದರಿ ನಗರ ಆಗಿಸುವ ಯೋಜನೆ ಕೈಗೊಳ್ಳಲಾಗಿದೆ ಎಂದರು.
ನಗರ ಯೋಜನೆ, ಸಂಚಾರ, ಮಾಲಿನ್ಯ, ಇಂಗಾಲದ ಹೆಜ್ಜೆ ಗುರುತುಗಳು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸುವುದರ ಕುರಿತು ನಗರಾಭಿವೃದ್ಧಿಗೆ ಒತ್ತು ನೀಡಲಾಗುವುದು. ಆರಂಭಿಕವಾಗಿ ಮೈಸೂರು ನಗರವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರನ್ನು ಸಹ ಆಯ್ಕೆ ಮಾಡಿಕೊಳ್ಳಲಾಗುವುದು. ಇದಕ್ಕೆ ಭಾರತದ ಕಂಪನಿಗಳು, ಉದ್ಯಮಿಗಳು ಸಹಯೋಗ ನೀಡಬೇಕು. ಈ ಯೋಜನೆಯಿಂದ ಮುಂದಿನ ದಿನಗಳಲ್ಲಿ ಉದ್ಯಮಿಗಳಿಗೆ ಸಾಕಷ್ಟು ವ್ಯಾಪಾರ ವಹಿವಾಟಿಗೆ ಅವಕಾಶ ಸಿಗಲಿದೆ ಎಂದು ವಿವರಿಸಿದರು.